ADVERTISEMENT

ಬೆಂಗಳೂರು: ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 10 ಮೇ 2025, 15:36 IST
Last Updated 10 ಮೇ 2025, 15:36 IST
ಹೇಮರೆಡ್ಡಿ ಮಲ್ಲಮ್ಮ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಎನ್. ಶೇಖರ್ ರೆಡ್ಡಿ, ಕೆ.ಎಂ ಗಾಯತ್ರಿ, ಎಸ್. ಜಯರಾಮರೆಡ್ಡಿ, ವೇಮನಾನಂದ ಸ್ವಾಮೀಜಿ ಪುಷ್ಪನಮನ ಸಲ್ಲಿಸಿದರು -ಪ್ರಜಾವಾಣಿ ಚಿತ್ರ
ಹೇಮರೆಡ್ಡಿ ಮಲ್ಲಮ್ಮ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಎನ್. ಶೇಖರ್ ರೆಡ್ಡಿ, ಕೆ.ಎಂ ಗಾಯತ್ರಿ, ಎಸ್. ಜಯರಾಮರೆಡ್ಡಿ, ವೇಮನಾನಂದ ಸ್ವಾಮೀಜಿ ಪುಷ್ಪನಮನ ಸಲ್ಲಿಸಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೌಟುಂಬಿಕ ಸಂಕಷ್ಟಗಳ ನಡುವೆ ತಾಳ್ಮೆಯಿಂದ ಆಧ್ಯಾತ್ಮಿಕ ಸಾಧನೆ ಮಾಡಿದ ಹೇಮರೆಡ್ಡಿ ಮಲ್ಲಮ್ಮ ನಿಜಶರಣೆ ಎಂದು ಹರಿಹರದ ಎರೆಹೊಸಳ್ಳಿಯ ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಲ್ಲಮ್ಮ ಅವರಿಗೆ ಮನೆಯಲ್ಲಿ ಗಂಡ, ಅತ್ತೆ ಮಾವ, ನಾದಿನಿ ಸಹಿತ ಹಲವರು ತೊಂದರೆ ಕೊಡುತ್ತಿದ್ದರು. ಅವುಗಳನ್ನೆಲ್ಲ ಸಹಿಸಿಕೊಂಡೇ ಕುಟುಂಬವನ್ನು ತ್ಯಜಿಸದೇ, ಸಂಸಾರವೇ ದೈವಸ್ವರೂಪ ಎಂದು ಬಗೆದರು ಎಂದು ಹೇಳಿದರು.

ADVERTISEMENT

ಅಕ್ಕಮಹಾದೇವಿ ಸೇರಿದಂತೆ ಹಲವು ಶರಣೆಯರು ಸಂಸಾರಿಗಳಾಗದೇ ಮಲ್ಲಿಕಾರ್ಜುನನ ಜಪ ಮಾಡಿದ್ದರು. ಆತನೇ ತಮ್ಮ ಪತಿ ಎಂದು ಭಾವಿಸಿದ್ದರು. ಆದರೆ ಹೇಮರೆಡ್ಡಿ ಮಲ್ಲಮ್ಮ ಸಂಸಾರಿಯಾಗಿ ಸಂಕಷ್ಟಗಳನ್ನು ಉಂಡು ಕಾಯಕದಲ್ಲಿ ದೇವರ ಕಂಡರು. ಓದದಿದ್ದರೂ, ವಚನಗಳನ್ನು ರಚಿಸದಿದ್ದರೂ ಮೈದುನ ವೇಮನನ್ನು ಸರಿದಾರಿಗೆ ತಂದು ಕವಿ, ತತ್ವಜ್ಞಾನಿಯನ್ನಾಗಿಸಿದರು. ಬೇಡಿ ಬಂದವರಿಗೆ ಕೊಡುಗೈ ದಾನಿಯಾದರು ಎಂದು ವಿವರಿಸಿದರು.

ತುಮಕೂರು ವಿಶ್ವವಿದ್ಯಾಲಯದ ಕನ್ನಡ ಸಹಪ್ರಾಧ್ಯಾಪಕ ವೆಂಕಟರೆಡ್ಡಿ ರಾಮರೆಡ್ಡಿ ಮಾತನಾಡಿ, ‘ಹೇಮರೆಡ್ಡಿ ಮಲ್ಲಮ್ಮ ಎಷ್ಟೇ ಕಷ್ಟಗಳನ್ನೂ ಅನುಭವಿಸಿದರೂ ಅದಕ್ಕೆ ಕೊರಗಲಿಲ್ಲ. ಇತರರಿಗೆ ಕೆಟ್ಟದ್ದನ್ನು ಬಯಸಲಿಲ್ಲ, ಬಗೆಯಲಿಲ್ಲ. ಎಲ್ಲರ ಒಳಿತನ್ನು ಬಯಸುವ ಭಕ್ತಿಯನ್ನು ತೋರಿದರು. ದೈವಭಕ್ತಿಯಿಂದಲೇ ಜನರನ್ನು ಸೆಳೆದು ಶಿವಶರಣ ತತ್ವವನ್ನು ಸಾರಿದ ಮಹಾಶರಣೆ ಅವರು’ ಎಂದು ನೆನಪು ಮಾಡಿಕೊಂಡರು.

ಕರ್ನಾಟಕ ರೆಡ್ಡಿ ಜನಸಂಘದ ಅಧ್ಯಕ್ಷ ಎಸ್.ಜಯರಾಮರೆಡ್ಡಿ, ಪ್ರಧಾನ ಕಾರ್ಯದರ್ಶಿ ಎನ್. ಶೇಖರ್ ರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಗಾಯತ್ರಿ, ಜಂಟಿ ನಿರ್ದೇಶಕರಾದ ಬಲವಂತರಾವ್ ಪಾಟೀಲ್, ಬನಶಂಕರಿ ಅಂಗಡಿ ಭಾಗವಹಿಸಿದ್ದರು. ವಚನಗಾಯನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.