ADVERTISEMENT

ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಬಿಐಎಎಲ್‌

ಕರ್ನಾಟಕ ಮಾಹಿತಿ ಹಕ್ಕು ಆಯೋಗ ಮಹತ್ವದ ಆದೇಶ

​ಪ್ರಜಾವಾಣಿ ವಾರ್ತೆ
Published 4 ಮೇ 2023, 20:54 IST
Last Updated 4 ಮೇ 2023, 20:54 IST
ಬಿಐಎಎಲ್‌
ಬಿಐಎಎಲ್‌   

ಬೆಂಗಳೂರು: ‘ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ (ಬಿಐಎಎಲ್‌) ಸಾರ್ವಜನಿಕ ಸಂಸ್ಥೆಯಾಗಿದ್ದು, ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಒಳಪಡಲಿದೆ’ ಎಂದು ಕರ್ನಾಟಕ ಮಾಹಿತಿ ಆಯೋಗ ಅಭಿಪ್ರಾಯಪಟ್ಟಿದೆ.

ಯಲಹಂಕ ನ್ಯೂ ಟೌನ್‌ನ ಬೆನ್ಸನ್‌ ಐಸಾಕ್‌ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ಮಾಹಿತಿ ಆಯುಕ್ತ ಎನ್‌.ಸಿ. ಶ್ರೀನಿವಾಸ್, ಆಯುಕ್ತರಾದ ಎಸ್.ಎಂ.ಸೋಮಶೇಖರ್ ಮತ್ತು ಕೆ.ಪಿ.ಮಂಜುನಾಥ್ ಅವರಿದ್ದ ಪೀಠ ಹೊರಡಿಸಿರುವ 37 ಪುಟಗಳ ಆದೇಶದಲ್ಲಿ ‘ಸಾರ್ವಜನಿಕ ಪ್ರಾಧಿಕಾರ’ ಎಂದು ಘೋಷಿಸಿದೆ. ವಿಮಾನ ನಿಲ್ದಾಣ ಸ್ಥಾಪಿಸುವಲ್ಲಿ ವಹಿಸಿದ್ದ ಮಹತ್ವದ ಪಾತ್ರ ವಹಿಸಿದ್ದರೂ ಬಿಐಎಎಲ್‌ ಬೆಂಬಲಿಸಿದ್ದಕ್ಕಾಗಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಬಿಐಎಎಲ್‌ ಸಾರ್ವಜನಿಕ ಪ್ರಾಧಿಕಾರವೇ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 4(1) ಅಡಿಯಲ್ಲಿ ಸ್ವಯಂ ಪ್ರೇರಿತವಾಗಿ ಮಾಹಿತಿಯನ್ನು ಪ್ರಕಟಿಸಬೇಕಿದ್ದು, ಅದಕ್ಕೆ ಎರಡು ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ಆದೇಶದಲ್ಲಿ ಪೀಠ ತಿಳಿಸಿದೆ. ಈ ಆದೇಶ ಪಾಲನೆ ಮಾಡಿರುವ ಬಗ್ಗೆ ಅನುಪಾಲನಾ ವರದಿಯನ್ನು ಜುಲೈ 24ರೊಳಗೆ ಸಲ್ಲಿಸಬೇಕು ಎಂದು ತಿಳಿಸಿದೆ.

ADVERTISEMENT

2007ರಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದ ಬೆನ್ಸನ್ ಐಸಾಕ್‌, ಹಣ ಬಳಕೆ ಬಗ್ಗೆ ಮಾಹಿತಿ ಕೋರಿದ್ದರು. ‘ಸಾರ್ವಜನಿಕ ಪ್ರಾಧಿಕಾರವಲ್ಲದ ಕಾರಣ ಆರ್‌ಟಿಐ ಕಾಯ್ದೆ ಅನ್ವಯವಾಗುವುದಿಲ್ಲ’ ಎಂದು ಬಿಐಎಎಲ್‌ ತಿಳಿಸಿತು. ಬಳಿಕ ಅವರು ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. 2008ರ ಆಗಸ್ಟ್‌ 18ರಂದೇ ಆದೇಶ ಹೊರಡಿಸಿದ್ದ ಆಯೋಗ, ‘ಸಾರ್ವಜನಿಕ ಪ್ರಾಧಿಕಾರ’ ಎಂದು ಘೋಷಿಸಿತ್ತು.

ಅದನ್ನು ಪ್ರಶ್ನಿಸಿ ಬಿಐಎಎಲ್ ಹೈಕೋರ್ಟ್‌ ಮೊರೆ ಹೋಗಿತ್ತು. ಶೇ 74ರಷ್ಟು ಹಣಕಾಸಿನ ಪಾಲನ್ನು  ಖಾಸಗಿ ಕಂಪನಿಗಳು ಹೊಂದಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶೇ 26ರಷ್ಟು ಮಾತ್ರ ಹೊಂದಿವೆ. ಆದ್ದರಿಂದ ಮಾಹಿತಿ ಹಕ್ಕು ಕಾಯ್ದೆಯಿಂದ ವಿನಾಯಿತಿ ಇದೆ ಎಂದು ವಾದಿಸಿತ್ತು.

ಹೊಸದಾಗಿ ಆದೇಶ ಹೊರಡಿಸುವಂತೆ 2010ರಲ್ಲೇ ಆಯೋಗಕ್ಕೆ ಹೈಕೋರ್ಟ್‌ ವಾಪಸ್ ಕಳುಹಿಸಿತ್ತು. ನಂತರ ಮುಖ್ಯ ಆಯುಕ್ತರ ನೇತೃತ್ವದಲ್ಲಿ ಪೂರ್ಣ ಪೀಠ ರಚನೆಯಾಗಿತ್ತು.

ಬಿಐಎಎಲ್‌ನಲ್ಲಿ ಸರ್ಕಾರದ ಹೂಡಿಕೆ, ಷೇರುಗಳನ್ನು ಗಮನಿಸಿರುವ ಆಯೋಗ, ಸರ್ಕಾರವು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹಣಕಾಸಿನ ನೆರವು ನೀಡಿದೆ. ಐದು ವರ್ಷಗಳ ತನಕ ಆಸ್ತಿ ತೆರಿಗೆ ವಿನಾಯಿತಿ, ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕ, ರಸ್ತೆ ತೆರಿಗೆ ಸೇರಿ ಹಲವು ವಿನಾಯಿತಿಗಳನ್ನು ಬಿಐಎಎಲ್‌ ಪಡೆದಿದೆ ಎಂದು ಮಾಹಿತಿ ಆಯೋಗ ವಿವರಿಸಿದೆ.

ಇದೇ ರೀತಿಯ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಆಯೋಗ ಉಲ್ಲೇಖಿಸಿದೆ. ‘ಸರ್ಕಾರದಿಂದ ಹಣಕಾಸಿನ ನೆರವು ಪಡೆದಿದ್ದರೆ ಅದನ್ನು ಯಾವ ಉದ್ದೇಶಕ್ಕೆ ಬಳಸಲಾಗಿದೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇದೆ’ ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.