
ಪ್ರಾತಿನಿಧಿಕ ಚಿತ್ರ
ಬೆಂಗಳೂರು: ನಗರದ ಹೊರವರ್ತುಲ ರಸ್ತೆಯಲ್ಲಿ ದಿನದಿಂದ ದಿನಕ್ಕೆ ವಾಹನ ದಟ್ಟಣೆ ತೀವ್ರಗೊಂಡು ಸಮಸ್ಯೆ ಉಲ್ಬಣಿಸುತ್ತಿದೆ. ಇದನ್ನು ಕಡಿಮೆ ಮಾಡಲು, ಸಾಫ್ಟ್‌ವೇರ್ ಕಂಪನಿಗಳ ಆವರಣದಲ್ಲಿ ಪಾವತಿ ಮಾಡಿ ವಾಹನಗಳ ನಿಲುಗಡೆ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರುವಂತೆ ನಗರ ಸಂಚಾರ ಪೊಲೀಸರು ಸಾಫ್ಟ್‌ವೇರ್ ಕಂಪನಿಗಳಿಗೆ ಮನವಿ ಮಾಡಿದ್ದಾರೆ.
ಈ ವ್ಯವಸ್ಥೆ ಜಾರಿಗೆ ತಂದರೆ ಸ್ವಂತ ವಾಹನಗಳ ಬಳಕೆದಾರರ ಸಂಖ್ಯೆ ಸಹಜವಾಗಿ ಕಡಿಮೆಯಾಗಲಿದೆ. ಆಗ ಶೇ 30ರಷ್ಟು ದಟ್ಟಣೆ ಸಮಸ್ಯೆ ತಗ್ಗಲಿದೆ ಎಂದು ಸಂಚಾರ ಪೊಲೀಸರು ಅಂದಾಜಿಸಿದ್ದಾರೆ.
ನಗರದ ಐ.ಟಿ ಕಾರಿಡಾರ್‌ನಲ್ಲಿ ವಾಹನ ದಟ್ಟಣೆ ತಗ್ಗಿಸಲು ವಿವಿಧ ಪ್ರಯೋಗಗಳನ್ನು ಜಾರಿಗೆ ತರಲಾಗುತ್ತಿದೆ. ಪಾವತಿ ಮಾಡಿ ವಾಹನ ನಿಲುಗಡೆ ಮಾಡುವ ವ್ಯವಸ್ಥೆ ಜಾರಿಗೆ ತರುವಂತೆ ಇತ್ತೀಚೆಗೆ ನಡೆದಿದ್ದ ಸಭೆಯಲ್ಲಿ ಮನವಿ ಮಾಡಲಾಗಿತ್ತು. ಸಭೆಯಲ್ಲಿ ಕಿರಣ್ ಮಜುಂದಾರ್ ಶಾ, ಆರ್.ಕೆ.ಮಿಶ್ರಾ ಮತ್ತು ನರೇಶ್ ನರಸಿಂಹನ್ ಅವರು ಭಾಗಿಯಾಗಿದ್ದರು ಎಂದು ಪೊಲೀಸರು ಹೇಳಿದರು.
ಸಭೆಯಲ್ಲಿ ಹೊರವರ್ತುಲ ರಸ್ತೆಯಲ್ಲಿ ದಟ್ಟಣೆ ಸಮಸ್ಯೆ ಕುರಿತು ಚರ್ಚಿಸಲಾಯಿತು. ಬೆಂಗಳೂರಿನಲ್ಲಿ ನಿತ್ಯ 3 ಸಾವಿರ ಹೊಸ ವಾಹನಗಳು ನೋಂದಣಿಯಾಗಿ ರಸ್ತೆಗೆ ಇಳಿಯುತ್ತಿವೆ. ಸಾಫ್ಟ್‌ವೇರ್ ಕಂಪನಿಗಳು ತಮ್ಮ ಆವರಣದಲ್ಲಿ ವಾಹನ ನಿಲುಗಡೆಗೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ. ಆ ಕಾರಣಕ್ಕೆ ಹೆಚ್ಚಿನ ಟೆಕಿಗಳು ದ್ವಿಚಕ್ರ ವಾಹನಗಳನ್ನು ಬಳಸುತ್ತಿದ್ದಾರೆ. ದ್ವಿಚಕ್ರ ವಾಹನದಲ್ಲಿ ಒಬ್ಬರೇ ಓಡಾಟ ನಡೆಸುತ್ತಿದ್ದಾರೆ. ಪಾವತಿ ವ್ಯವಸ್ಥೆ ಜಾರಿಗೆ ತಂದರೆ ಶೇ 10ರಷ್ಟು ಟೆಕಿಗಳು ಸಾರ್ವಜನಿಕ ಸಾರಿಗೆ ಬಳಸುತ್ತಾರೆ. ಆಗ ತಕ್ಕಮಟ್ಟಿಗೆ ದಟ್ಟಣೆ ಸಮಸ್ಯೆ ನಿವಾರಣೆ ಆಗಲಿದೆ ಎಂದು ಸಂಚಾರ ಪೊಲೀಸರು ಹೇಳಿದರು. ಆದರೆ ಈ ಸಲಹೆಯನ್ನು ಕೆಲವು ಐ.ಟಿ ಕಂಪನಿಗಳ ಮುಖ್ಯಸ್ಥರು ತಿರಸ್ಕರಿಸಿದ್ದಾರೆ.
ಹೊರ ವರ್ತುಲ ರಸ್ತೆಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಒಬ್ಬರೇ ಸಂಚಾರ ನಡೆಸುತ್ತಿದ್ದಾರೆ. ಕಾರ್ ಪೂಲಿಂಗ್ ಪ್ರೋತ್ಸಾಹಿಸಬೇಕು. ಬಿಎಂಟಿಸಿ ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು ಎಂದೂ ಸಭೆಯಲ್ಲಿ ಸಲಹೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.