ADVERTISEMENT

ಬೆಂಗಳೂರು: ಭೂಭರ್ತಿ ಕೇಂದ್ರ ನಿರ್ವಹಣೆ ಹೆಸರಿನಲ್ಲಿ ಅಕ್ರಮ?

ಸರ್ಕಾರದ ಅನುಮೋದನೆ ಇಲ್ಲದೆಯೇ ₹ 50 ಕೋಟಿ ವೆಚ್ಚ l ಕಾಮಗಾರಿಗೆ ಸೆಪ್ಟೆಂಬರ್‌ನಲ್ಲಿ ಜಾಬ್‌ಕೋಡ್‌!

ಪ್ರವೀಣ ಕುಮಾರ್ ಪಿ.ವಿ.
Published 24 ಜೂನ್ 2020, 22:04 IST
Last Updated 24 ಜೂನ್ 2020, 22:04 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಮಿಶ್ರಕಸದ ಭೂಭರ್ತಿ ಕೇಂದ್ರಗಳ ವೈಜ್ಞಾನಿಕ ನಿರ್ವಹಣೆಗೆ ಕೆಟಿಪಿಪಿ ಕಾಯ್ದೆಯ 4ಜಿ ಕಲಂ ಅಡಿ ವಿನಾಯಿತಿ ಪಡೆದ ಮೊತ್ತಕ್ಕಿಂತ ಬಿಬಿಎಂಪಿ ₹ 50.53 ಕೋಟಿ ಹೆಚ್ಚು ಮೊತ್ತದ ಕಾಮಗಾರಿ ನಡೆಸಿದ್ದು, ಹಣವನ್ನೂ ಪಾವತಿಸಿದೆ. ನಗರಾಭಿವೃದ್ಧಿ ಇಲಾಖೆಯ ಆಡಳಿತಾತ್ಮಕ ಅನುಮೋದನೆ ಇಲ್ಲದೆಯೇ ಕೆಆರ್‌ಐಡಿಎಲ್‌ ಮೂಲಕ ಈ ಕಾಮಗಾರಿ ನಡೆಸಲಾಗಿದೆ.

ತುರ್ತು ಉದ್ದೇಶಕ್ಕಾಗಿ ಭೂಭರ್ತಿ ಕೇಂದ್ರಗಳ ನಿರ್ವಹಣೆಗೆ ₹ 100.94 ಕೋಟಿ ವೆಚ್ಚದ ಕಾಮಗಾರಿಯನ್ನು ಟೆಂಡರ್‌ ಕರೆಯದೆ ಕೆಆರ್‌ಐಡಿಎಲ್‌ ಮೂಲಕ ನಡೆಸಲು ಇಲಾಖೆ ಅನುಮತಿ ನೀಡಿತ್ತು. ಬಳಿಕ ಹೆಚ್ಚುವರಿಯಾಗಿ ₹ 15 ಕೋಟಿ ವೆಚ್ಚದ ಕಾಮಗಾರಿಗೂ ಕೆಟಿಟಿಪಿ ಕಾಯ್ದೆಯ 4ಜಿ ಕಲಂ ಅಡಿ ವಿನಾಯಿತಿ ಕೊಟ್ಟಿತ್ತು. ಆದರೆ, ಪಾಲಿಕೆಯು ಮೇಯರ್‌ ಅನುದಾನ ಬಳಸಿ ₹ 53 ಕೋಟಿ ವೆಚ್ಚದ ಕಾಮಗಾರಿಯನ್ನುಟೆಂಡರ್‌ ಕರೆಯದೆಯೇ ನಡೆಸಿದೆ.

ಬೆಳ್ಳಹಳ್ಳಿ ಕ್ವಾರಿಯ 2019ರ ಆಗಸ್ಟ್‌ ಹಾಗೂ ಸೆಪ್ಟೆಂಬರ್ ತಿಂಗಳುಗಳ ವೈಜ್ಞಾನಿಕ ನಿರ್ವಹಣೆಗಳಿಗೆ ಕಸ ನಿರ್ವಹಣೆಯ ಲೆಕ್ಕ ಶೀರ್ಷಿಕೆಯ (ಪಿ–1521) ಬದಲು ಮೇಯರ್‌ ಆದೇಶದಡಿ ನಡೆಸುವ ಕಾಮಗಾರಿಗಳ ಲೆಕ್ಕಶೀರ್ಷಿಕೆಯಡಿ (ಪಿ-0190) ಜಾಬ್‌ ಕೋಡ್‌ ನೀಡಲಾಗಿದೆ. ತನ್ಮೂಲಕ ಟೆಂಡರ್‌ ಕರೆಯದೆಯೇ ನಡೆಸಿರುವ ಕಾಮಗಾರಿಗಳ ವಿಚಾರದಲ್ಲಿ ದಾರಿ ತಪ್ಪಿಸುವ ಪ್ರಯತ್ನ ನಡೆದಿದೆ.

ADVERTISEMENT

ಯಾವುದೇ ಕಾಮಗಾರಿ ಆರಂಭವಾಗುವುದಕ್ಕೆ ಮುನ್ನವೇ ಜಾಬ್‌ಕೋಡ್‌ ನೀಡುವುದು ವಾಡಿಕೆ. ಆದರೆ, ಈ ಪ್ರಕರಣದಲ್ಲಿ 2019ರ ಆಗಸ್ಟ್‌ ತಿಂಗಳ ಕಾಮಗಾರಿಯ ಜಾಬ್‌ಕೋಡ್‌ ಅನ್ನು ಸೆಪ್ಟೆಂಬರ್‌ 17ರಂದು ನೀಡಲಾಗಿದೆ! ಆಗಸ್ಟ್‌ ತಿಂಗಳ ಕಾಮಗಾರಿಗೆ ಕಸ ನಿರ್ವಹಣೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಅಕ್ಟೋಬರ್‌ 3ರಂದು ಆಡಳಿತಾತ್ಮಕ ಅನುಮೋದನೆ ನೀಡಿದ್ದಾರೆ. ಕೆಆರ್‌ಡಿಐಎಲ್‌ಗೆ ವಹಿಸಿದ ಈ ಕಾಮಗಾರಿಗೂ ನಗರಾಭಿವೃದ್ಧಿ ಇಲಾಖೆಯ ಅನುಮೋದನೆ ಹಾಗೂ 4ಜಿ ವಿನಾಯಿತಿ ಅಗತ್ಯವಿತ್ತು. ಆದರೆ, ಅದನ್ನು ಪಡೆದಿಲ್ಲ.

ಆಗಸ್ಟ್‌ ತಿಂಗಳ ನಿರ್ವಹಣೆ ಕಾಮಗಾರಿಗಳಿಗೆ ಯಲಹಂಕ ವಲಯದ ಮುಖ್ಯ ಎಂಜಿನಿಯರ್‌ 2019ರ ನ.8ರಂದು ತಾಂತ್ರಿಕ ಅನುಮೋದನೆ ನೀಡಿದ್ದಾರೆ. ನ.11ರಂದು ಕೆಆರ್‌ಡಿಎಲ್‌ಗೆ ಕಾರ್ಯಾದೇಶ ನೀಡಲಾಗಿದೆ. ನ.11ರಿಂದ ಡಿ.10ರ ನಡುವೆ ₹ 1.97 ಕೋಟಿಯ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ದಾಖಲೆಗಳಲ್ಲಿ ನಮೂದಿಸಲಾಗಿದೆ. ಆಗಸ್ಟ್‌ನ ನಿರ್ವಹಣೆ ಕಾಮಗಾರಿಯನ್ನು ಬೇರೆ ತಿಂಗಳಲ್ಲಿ ನಡೆಸಲು ಹೇಗೆ ಸಾಧ್ಯ ಎಂಬುದು ಚೋದ್ಯ.

ಕಾಮಗಾರಿ ಪೂರ್ಣಗೊಂಡ ದಿನವೇ (ಡಿ.10) ಬಿಲ್‌ ಸರ್ಟಿಫಿಕೇಟ್‌ ನೀಡಲಾಗಿದೆ. ಅಳತೆ ದಾಖಲೆ ಪುಸ್ತಕದಲ್ಲಿ (ಎಂ.ಬಿ) ಪ್ರತಿ ಪುಟದಲ್ಲಿ ಸಂಬಂಧಪಟ್ಟ ಎಂಜಿನಿಯರ್ ಸಹಿ ಹಾಗೂ ದಿನಾಂಕ ಉಲ್ಲೇಖಿಸಿಲ್ಲ. ಕಾಮಗಾರಿ ಪೂರ್ಣವಾಗುವ ಮುನ್ನವೇ ಅದನ್ನು ಪರಿಶೀಲಿಸಿ ಬಿಲ್‌ ಸರ್ಟಿಫಿಕೇಟ್‌ ನೀಡಲಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

ಪ್ರತಿಕ್ರಿಯೆ ಪಡೆಯಲು ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ) ಡಿ.ರಂದೀಪ್‌ ಅವರಿಗೆ ಕರೆ ಮಾಡಿದರೂ ಲಭ್ಯರಾಗಲಿಲ್ಲ.

ಟಿವಿಸಿಸಿಗೂ ಒತ್ತಡ?

ಗುಣನಿಯಂತ್ರಣ ವಿಭಾಗದ ಪ್ರಮಾಣಪತ್ರವಿಲ್ಲದೆಯೇ ಬಿಲ್‌ ಅನ್ನು ಪಾವತಿಗಾಗಿ 2020ರ ಏ.1ರಂದು ಬಿಬಿಎಂಪಿಯ ಐಎಫ್‌ಎಂಎಸ್‌ಗೆ ಸಲ್ಲಿಸಲಾಗಿದೆ. ಇದನ್ನು ಪರಿಶೀಲಿಸಿರುವ ಟಿವಿಸಿಸಿ ಮುಖ್ಯ ಎಂಜಿನಿಯರ್‌ ಏ.7ರಂದು ಹಣ ಪಾವತಿಗೆ ಶಿಫಾರಸು ಮಾಡುವ ಮುನ್ನ ಬರೆದಿರುವ ಷರಾ ಇನ್ನಷ್ಟು ಅನುಮಾನ ಮೂಡಿಸುತ್ತದೆ.

‘ಬೆಳ್ಳಹಳ್ಳಿ ಮತ್ತು ಮಿಟ್ಟಗಾನಹಳ್ಳಿ ವೈಜ್ಞಾನಿಕ ಭೂಭರ್ತಿ ಕೇಂದ್ರಗಳ ಕಸ ನಿರ್ವಹಣೆ ಕಾಮಗಾರಿ ಬಿಲ್‌ಗಳನ್ನು ಆಯುಕ್ತರು 2020ರ ಏ. 3ರಂದು ನೀಡಿರುವ ಸೂಚನೆ ಮೇರೆಗೆ ಪರಿಶೀಲಿಸಿ ಮುಂದಿನ ಕ್ರಮಕ್ಕಾಗಿ ಸಲ್ಲಿಸಲಾಗಿದೆ’ ಎಂದು ಅವರು ನಮೂದಿಸಿದ್ದಾರೆ. ಕಾಮಗಾರಿಯ ಜಾಬ್‌ಕೋಡ್‌ ನೀಡುವಲ್ಲಿಂದ ಹಿಡಿದು ಎಂ.ಬಿ.ಪುಸ್ತಕಗಳಲ್ಲಿನ ಲೋಪಗಳನ್ನು ಟಿವಿಸಿಸಿ ಗಮನಿಸಿಲ್ಲವೇಕೆ ಎಂಬುದೂ ಅಚ್ಚರಿಯ ವಿಷಯ.

ಒಂದೇ ತಿಂಗಳಲ್ಲಿ ಕಾಮಗಾರಿ– 2 ತಿಂಗಳಿಗೆ ಬಿಲ್‌!

ಬೆಳ್ಳಹಳ್ಳಿ ಕ್ವಾರಿಯಲ್ಲಿ ಆಗಸ್ಟ್‌ ತಿಂಗಳ ಕಾಮಗಾರಿಯನ್ನು ನ.11ರಿಂದ ಡಿ. 10ರವರೆಗೆ ನಡೆಸಲಾಗಿದೆ ಎಂದು ₹ 1.98 ಕೋಟಿ ಬಿಲ್‌ ಬರೆದಿರುವ ‘ಬಿಲ್ವಿದ್ಯೆ ಪ್ರವೀಣ’ರು ಇನ್ನೊಂದು ಎಡವಟ್ಟು ಮಾಡಿದ್ದಾರೆ. ನ.11ರಿಂದ ಡಿ.10ರವರೆಗೆ ಸೆಪ್ಟೆಂಬರ್‌ ತಿಂಗಳ ನಿರ್ವಹಣೆ ಕಾಮಗಾರಿಯನ್ನೂ ಇದೇ ಕ್ವಾರಿಯಲ್ಲಿ ನಡೆಸಲಾಗಿದೆ ಎಂದು ₹ 1.99 ಕೋಟಿ ಬಿಲ್‌ ಬರೆದಿದ್ದಾರೆ. ಹೆಚ್ಚೂ ಕಡಿಮೆ ತಲಾ ₹ 2 ಕೋಟಿ ವೆಚ್ಚದ ಒಟ್ಟು 14 ಬಿಲ್‌ಗಳನ್ನು ಈ ರೀತಿ ಮಂಜೂರು ಮಾಡಿಸಿಕೊಳ್ಳಲಾಗಿದೆ. ಜತಿನ್ ಇನ್‌ಫ್ರಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗೆ ಡಿ. 27ರಂದು ಕಾರ್ಯಾದೇಶ ನೀಡಿದ ಕಾಮಗಾರಿಯ ₹ 13.24 ಕೋಟಿ ಬಿಲ್‌ ಹೊರತಾಗಿ ಉಳಿದ ಬಿಲ್‌ಗಳೆಲ್ಲವೂ ಒಂದೇ ರೀತಿಯವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.