ಬೆಂಗಳೂರು: 'ಬರಹಗಾರರು ಯಾವುದೇ ಗುಂಪಿನ ಜತೆ ಗುರುತಿಸಿಕೊಳ್ಳುವುದು ವೈಯಕ್ತಿಕವಾಗಿ ಸರಿ ಎನಿಸುವುದಿಲ್ಲ. ನಿರ್ದಿಷ್ಟ ಗುಂಪಿಗೆ ಸೇರಿದರೆ ಅದರ ಸಿದ್ದಾಂತಕ್ಕೆ ಸೀಮಿತವಾಗುತ್ತೇವೆ‘ ಎಂದು ಸಾಹಿತಿ ಶಾಂತಿ ಕೆ. ಅಪ್ಪಣ್ಣ ಹೇಳಿದರು.
ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಶನಿವಾರ ‘ಹೊಸ ಬರಹ: ಇಂದಿನ ಕನ್ನಡ ಬರವಣಿಗೆ’ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಎಡ ಪಂಥೀಯ, ಬಲ ಪಂಥೀಯ ಎಂಬ ನಿಲುವು ಇರುವುದು ಸಹಜ. ಆದರೆ, ನಮ್ಮ ನಿಲುವಿನ ಮೇಲೆ ಪಯಣಿಸಬೇಕು. ಯಾವುದೇ ಗುಂಪು ಪ್ರತಿನಿಧಿಸುವುದನ್ನು ನಾನು ಇಷ್ಟ ಪಡುವುದಿಲ್ಲ. ಬರಹಗಾರ ಸಂವೇದನಾಶೀಲನಾಗಿರಬೇಕು. ಮತ್ತೊಬ್ಬರ ಕಷ್ಟ ಅರ್ಥಮಾಡಿಕೊಳ್ಳುವ ಅಂತಃಕರಣ ಇರಬೇಕು’ ಎಂದು ತಿಳಿಸಿದರು.
ಲೇಖಕಿ ಪಿ.ಕುಸುಮಾ ಆಯರಹಳ್ಳಿ ಮಾತನಾಡಿ, ‘ಬರಹಗಾರ, ಯಾವುದೇ ಗುಂಪಿನ ಜತೆ ಗುರುತಿಸಿಕೊಂಡರೆ ನಷ್ಟ. ಹಾಗಾಗಿ ಅಂತರ ಕಾಯ್ದುಕೊಳ್ಳುವುದು ಸರಿ‘ ಎಂದು ಅಭಿಪ್ರಾಯಪಟ್ಟರು.
ಲೇಖಕ ವೈ.ಎನ್. ಮಧು ಮಾತನಾಡಿ, ‘ಬರವಣಿಗೆಯ ಆರಂಭದ ದಿನಗಳಲ್ಲಿ ನಿರ್ದಿಷ್ಟ ಗುಂಪಿನ ಜತೆ ಗುರುತಿಸಿಕೊಂಡಿದ್ದೆ. ಆದರೆ ಅದರಿಂದ ಹೊರ ಬಂದು, ನನ್ನ ಬರವಣಿಗೆಯ ಮೂಲಕ ಗುರುತಿಸಿಕೊಂಡಿದ್ದೇನೆ. ಯುವ ಬರಹಗಾರರಿಗೆ ಕನ್ನಡದಲ್ಲಿ ಸಾಕಷ್ಟು ಅವಕಾಶ ಇದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಗೀತಾ ವಸಂತಾ ಅವರು ಗೋಷ್ಠಿ ನಿರ್ವಹಣೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.