ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್ ನಲ್ಲಿ ಶನಿವಾರ ಬೆಂಗಳೂರು ಸಾಹಿತ್ಯ ಉತ್ಸವದ 13ನೇ ಆವೃತ್ತಿಯಲ್ಲಿ ಚಿಣ್ಣರು ಬೊಂಬೆಯಾಟವನ್ನು ಕುತೂಹಲದಿಂದ ವೀಕ್ಷಿಸಿದರು.
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ
ಬೆಂಗಳೂರು: ಪ್ರಸ್ತುತ ವಿದ್ಯಮಾನಗಳು, ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಕಲೆ, ಸಂಗೀತ, ಸಿನಿಮಾ, ಆಹಾರ, ಆರ್ಥಿಕತೆ, ನವೋದ್ಯಮ... ಹೀಗೆ ವೈವಿಧ್ಯಮಯ ವಿಷಯಗಳ ಬಗ್ಗೆ ಒಳನೋಟಗಳಿಂದ ಕೂಡಿದ ಚರ್ಚೆ–ಸಂವಾದಗಳಿಗೆ ವೇದಿಕೆಯಾದ ಬೆಂಗಳೂರು ಸಾಹಿತ್ಯೋತ್ಸವದ 13ನೇ ಆವೃತ್ತಿ ಭಾನುವಾರ ಸಂಪನ್ನವಾಯಿತು.
ಕುಮಾರ ಕೃಪ ರಸ್ತೆಯಲ್ಲಿರುವ ಲಲಿತ್ ಅಶೋಕ್ ಹೋಟೆಲ್ ಆವರಣದಲ್ಲಿ ಬೆಂಗಳೂರು ಸಾಹಿತ್ಯ ಉತ್ಸವ (ಬಿಎಲ್‌ಎಫ್) ಸಮಿತಿ ಹಮ್ಮಿಕೊಂಡಿದ್ದ ಈ ಉತ್ಸವದಲ್ಲಿ, ಸಾಹಿತ್ಯಾಸಕ್ತರ ಸಂಭ್ರಮದ ಜತೆಗೆ ಮಕ್ಕಳ ಕಲರವ ಈ ಬಾರಿ ಹೆಚ್ಚಾಗಿತ್ತು. ನಗರದ ವಿವಿಧೆಡೆಯಿಂದ ಬಂದಿದ್ದ ಸಾಹಿತ್ಯ ಪ್ರೇಮಿಗಳು ಗಹನವಾದ ವಿಚಾರಗೋಷ್ಠಿಗಳಿಗೆ ಕಿವಿಯಾದರೆ, ಮಕ್ಕಳು ವಿವಿಧ ಆಟಗಳನ್ನಾಡಿ ಸಂಭ್ರಮಿಸಿದರು.
ಉತ್ಸವದ ಎರಡನೇ ದಿನವೂ ವಿಚಾರಸಂಕಿರಣಗಳು ಮತ್ತು ಸಂವಾದಗಳು ಬೆಳಿಗ್ಗೆ 9ರಿಂದ ಸಂಜೆ 7.30ರವರೆಗೆ ನಡೆದವು. ಬೆಳಿಗ್ಗೆ 9 ಗಂಟೆಗೆ ನಡೆದ ಹಿಂದೂಸ್ತಾನಿ ಸಂಗೀತ ಕಚೇರಿಯನ್ನು ಅನಘಾ ಭಟ್, ಸಾಗರ್ ಭರತರಾಜ್ ಹಾಗೂ ಸೂರ್ಯ ಉಪಾಧ್ಯ ಅವರು ನಡೆಸಿಕೊಟ್ಟರು. ಬಳಿಕ ಐದೂ ವೇದಿಕೆಗಳಲ್ಲಿ ವಿಚಾರಗೋಷ್ಠಿಗಳು ನಡೆದವು. ಮಕ್ಕಳಿಗಾಗಿಯೇ ಪ್ರತ್ಯೇಕವಾಗಿ ವೇದಿಕೆಗಳನ್ನು ನಿರ್ಮಿಸಿ, ಅಮರ ಚಿತ್ರಕಥಾ ರಸಪ್ರಶ್ನೆ, ವಿವಿಧ ಮನೋರಂಜನೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರಿಂದ ಮಕ್ಕಳೂ ಇಡೀ ದಿನ ಉತ್ಸವದ ಸಂಭ್ರಮದ ಭಾಗವಾದರು.
ಮಧ್ಯಾಹ್ನ ಆಗುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರಿಂದ ಕೆಲವರು ನಿಂತೇ ಗೋಷ್ಠಿಯನ್ನು ಆಲಿಸಿ ದರು. ಲೇಖಕರ ಹಸ್ತಾಕ್ಷರ ಪಡೆಯುವ ಅವಕಾಶವನ್ನೂ ಒದಗಿಸಲಾಗಿತ್ತು. ಲೇಖಕಿ ಸುಧಾಮೂರ್ತಿ ಅವರ ಹಸ್ತಾಕ್ಷರ ಪಡೆಯಲು ಪುಸ್ತಕ ಪ್ರೇಮಿಗಳು ಮುಗಿಬಿದ್ದಿದ್ದರು. ಮಕ್ಕಳು ಸೇರಿ ವಿವಿಧ ವಯೋಮಾನದವರು ಗಂಟೆಗಟ್ಟಲೆ ಸರದಿಯಲ್ಲಿ ನಿಂತು ಅವರ ಹಸ್ತಾಕ್ಷರ ಪಡೆದುಕೊಂಡರು. ಗೋಷ್ಠಿಗಳಲ್ಲಿ ಹೊಸ ಪುಸ್ತಕಗಳು ಹಾಗೂ ಅವುಗಳ ಲೇಖಕರನ್ನೂ ಪರಿಚಯಿಸಲಾಯಿತು. ಈ ಬಾರಿ 350 ಲೇಖಕರು ಹಾಗೂ ಭಾಷಣಕಾರರು ಗೋಷ್ಠಿಗಳಲ್ಲಿ ಭಾಗವಹಿಸಿದ್ದರು. ನಾಡಿನ ಜತಗೆ ಹೊರರಾಜ್ಯ, ಹೊರದೇಶದ ಬರಹಗಾರರೂ ತಮ್ಮ ವಿಚಾರಧಾರೆಗಳನ್ನು ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.