ವಿಚಾರ ಗೋಷ್ಠಿಯಲ್ಲಿ ಇತಿಹಾಸಗಾರ್ತಿ ಮೀನಾಕ್ಷಿ ಜೈನ್ ಮಾತನಾಡಿದರು.
ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಬೆಂಗಳೂರು: ಸಿಂಧೂ ಕಣಿವೆ ನಾಗರಿಕತೆಗೆ 11 ಸಾವಿರ ವರ್ಷಗಳ ಇತಿಹಾಸ ಇದೆ ಎಂಬುದು ಸಾಕ್ಷ್ಯಾಧಾರಗಳಿಂದ ಗೊತ್ತಾಗಿದೆ ಎಂದು ಇತಿಹಾಸಗಾರ್ತಿ ಮೀನಾಕ್ಷಿ ಜೈನ್ ಹೇಳಿದರು.
ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಶನಿವಾರ ‘ಹಿಂದೂಸ್ತಾನದ ಹಿಂದೂಗಳು–ನಾಗರಿಕತೆಯ ಪಯಣ’ ಕುರಿತ ಗೋಷ್ಠಿಯಲ್ಲಿ ಮಾತನಾಡಿದರು.
‘ನಾವು ತಿಳಿದಿರುವ ಇತಿಹಾಸಕ್ಕೂ ಮತ್ತು ನಿಜವಾದ ಸಂಶೋಧನೆ ಮಾಡಿದಾಗ ಸಾಕ್ಷಾಧಾರ ಸಮೇತ ಸಿಗುವ ಇತಿಹಾಸಕ್ಕೂ ವ್ಯತ್ಯಾಸವಿದೆ. ಸಿಂಧೂ ಕಣಿವೆ ನಾಗರಿಕತೆಯು ಸ್ತ್ರೀ ವಿರೋಧಿ ಎಂಬ ಪೂರ್ವಗ್ರಹ ಪೀಡಿತ ಮಾತು ಇದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಮಧ್ಯಪ್ರದೇಶದಲ್ಲಿ ದೊರಕಿರುವ ಸಿಂಧೂ ನಾಗರಿಕತೆಗಿಂತ ಹಿಂದಿನ ಕಾಲದ ವಿಶಿಷ್ಟ ಬಣ್ಣದ ಕಲ್ಲಿನ ಸಾಕ್ಷ್ಯದ ಪ್ರಕಾರ, ಬಹಳ ಹಿಂದಿನಿಂದಲೂ ನಮ್ಮಲ್ಲಿ ದೇವತೆಗಳ ಆರಾಧನೆ ಇತ್ತು. ಆ ವಿಶಿಷ್ಟ ಬಣ್ಣದ ಕಲ್ಲನ್ನು ಈಗಲೂ ಮಾತೃದೇವತೆ ಎಂದು ಆರಾಧಿಸಲಾಗುತ್ತಿದೆ’ ಎಂದು ತಿಳಿಸಿದರು.
‘ಈ ರೀತಿಯ ಮಾತೃ ಆರಾಧನೆ ಬಹಳ ಹಳೆಯದು. ಇಂದಿನ ದಿನಮಾನಕ್ಕೆ ತಕ್ಕಂತೆ ನಾನು ಇತಿಹಾಸವನ್ನು ಪುನರ್ ರಚಿಸುತ್ತಿಲ್ಲ. ಹಿಂದಿನಿಂದಲೂ ಹೇಗಿದೆಯೋ ಅದನ್ನು ಹೇಳುತ್ತಿದ್ದೇನೆ’ ಎಂದರು.
ಪುರಾತತ್ವಶಾಸ್ತ್ರ, ಶಿಲಾಶಾಸನಶಾಸ್ತ್ರದ ಇತ್ತೀಚಿನ ಆವಿಷ್ಕಾರಗಳು ಹಾಗೂ ದೇಶದ ಇತಿಹಾಸದ ಕುರಿತ ಬರಹಗಳನ್ನು ಜನಪ್ರಿಯಗೊಳಿಸುವ ಮೂಲಕ ಸಾಮಾನ್ಯ ಜನರಿಗೂ ಮಾಹಿತಿ ತಲುಪಿಸಬೇಕು ಎಂದು ಸಲಹೆ ನೀಡಿದರು.
‘ಗ್ರೀಕ್, ಈಜಿಪ್ಟ್, ರೋಮ್ ನಾಗರಿಕತೆಯನ್ನು ಇಂದು ನಾವು ವಸ್ತು ಸಂಗ್ರಹಾಲಯದಲ್ಲಿ ನೋಡುವಂತಾಗಿದೆ. ಆದರೆ ಸಿಂಧೂ ಕಣಿವೆ ನಾಗರಿಕತೆ ವಿಭಿನ್ನವಾಗಿದೆ. ಆ ನಾಗರಿಕತೆಯು ಇಂದಿಗೂ ನಮ್ಮ ನಾಗರಿಕತೆಯಾಗಿ ಮುಂದುವರೆದಿದೆ’ ಎಂದರು.
ಆರ್.ಜಗನಾಥನ್ ಅವರು ಗೋಷ್ಠಿ ನಿರ್ವಹಣೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.