ADVERTISEMENT

ಕಾರ್ಯಗತಗೊಳ್ಳದ PSD, PGS: 2 ವರ್ಷದಲ್ಲಿ ಮೆಟ್ರೊ ಹಳಿಗೆ ಬಿದ್ದ 15 ಪ್ರಯಾಣಿಕರು

ಬಾಲಕೃಷ್ಣ ಪಿ.ಎಚ್‌
Published 5 ಡಿಸೆಂಬರ್ 2025, 23:30 IST
Last Updated 5 ಡಿಸೆಂಬರ್ 2025, 23:30 IST
ದೆಹಲಿಯ ಮೆಟ್ರೊ ನಿಲ್ದಾಣದಲ್ಲಿ ಇರುವ ಪ್ಲಾಟ್‌ಫಾರಂ ಸ್ಕ್ರೀನ್‌ ಡೋರ್‌ ವ್ಯವಸ್ಥೆ
ದೆಹಲಿಯ ಮೆಟ್ರೊ ನಿಲ್ದಾಣದಲ್ಲಿ ಇರುವ ಪ್ಲಾಟ್‌ಫಾರಂ ಸ್ಕ್ರೀನ್‌ ಡೋರ್‌ ವ್ಯವಸ್ಥೆ   

ಬೆಂಗಳೂರು: ನಮ್ಮ ಮೆಟ್ರೊ ನಿಲ್ದಾಣಗಳಲ್ಲಿ ಆಕಸ್ಮಿಕವಾಗಿ ಇಲ್ಲವೇ ಉದ್ದೇಶಪೂರ್ವಕವಾಗಿ ಹಳಿಗೆ ಪ್ರಯಾಣಿಕರು ಬೀಳುವ ಪ್ರಕರಣಗಳು ಹೆಚ್ಚುತ್ತಿವೆ. ಇದನ್ನು ತಪ್ಪಿಸಬಲ್ಲ ಪ್ಲಾಟ್‌ಫಾರ್ಮ್‌ ಸ್ಕ್ರೀನ್‌ ಡೋರ್‌ (ಪಿಎಸ್‌ಡಿ) ಇಲ್ಲವೇ ಪ್ಲಾಟ್‌ಫಾರ್ಮ್‌ ಸ್ಕ್ರೀನ್‌ ಗೇಟ್‌ (ಪಿಎಸ್‌ಜಿ) ಅಳವಡಿಸುವ ಯೋಜನೆ ಇನ್ನೂ ಕಾರ್ಯಗತಗೊಂಡಿಲ್ಲ.

ಎರಡು ವರ್ಷಗಳಲ್ಲಿ, ಆಯತಪ್ಪಿ ನಾಲ್ಕು ಮಂದಿ ಬಿದ್ದಿದ್ದೂ ಸೇರಿದಂತೆ 15 ಪ್ರಕರಣಗಳು ನಡೆದಿವೆ. ಉದ್ದೇಶಪೂರ್ವಕವಾಗಿ ಹಳಿಗೆ ಬಿದ್ದಿದ್ದ 11 ಮಂದಿಯಲ್ಲಿ ಮೂವರು ಮೃತಪಟ್ಟಿದ್ದರು.

ಹಳಿ ಕಡೆಗೆ ಯಾರೂ ನುಗ್ಗದಂತೆ ಮೆಟ್ರೊ ನಿಲ್ದಾಣಗಳಲ್ಲಿ ಗ್ಲಾಸ್‌ ಡೋರ್‌/ಗೇಟ್‌ಗಳು ಇರುತ್ತವೆ. ರೈಲು ಬಂದು ನಿಂತ ಮೇಲೆ ಇವು ಸ್ವಯಂಚಾಲಿತವಾಗಿ ತೆರೆದುಕೊಳ್ಳುತ್ತವೆ. ಪ್ರಯಾಣಿಕರು ಇಳಿದು ಹತ್ತುವ ಪ್ರಕ್ರಿಯೆ ಮುಗಿದು ರೈಲಿನ ಬಾಗಿಲು ಮುಚ್ಚಿಕೊಳ್ಳುವ ಹೊತ್ತಿಗೆ ಪ್ಲಾಟ್‌ಫಾರ್ಮ್‌ನಲ್ಲಿರುವ ಡೋರ್‌/ಗೇಟ್‌ಗಳೂ ಮುಚ್ಚಿಕೊಳ್ಳುತ್ತವೆ. ಈ ತಂತ್ರಜ್ಞಾನವು ಜಪಾನ್‌ ಸಹಿತ ಹಲವು ದೇಶಗಳಲ್ಲಿವೆ. ಭಾರತದಲ್ಲಿಯೂ ಚೆನ್ನೈ, ದೆಹಲಿ ಮತ್ತು ಮುಂಬೈನ ಕೆಲವು ಮೆಟ್ರೊ ನಿಲ್ದಾಣಗಳಲ್ಲಿ ಈ ತಂತ್ರಜ್ಞಾನ ಅಳವಡಿಸಲಾಗಿದೆ.

ADVERTISEMENT

ಹಳದಿ ಮಾರ್ಗದಲ್ಲಿ ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಕೋನಪ್ಪನ ಅಗ್ರಹಾರ ನಿಲ್ದಾಣದಲ್ಲಿ ಮೊದಲ ಪಿಎಸ್‌ಜಿ ಬರಲಿದೆ ಎಂದು ಎರಡು ವರ್ಷಗಳ ಹಿಂದೆ ಅಧಿಕಾರಿಗಳು ಹೇಳಿಕೊಂಡಿದ್ದರು. ಹಳದಿ ಮಾರ್ಗದಲ್ಲಿ ಮೆಟ್ರೊ ಸಂಚಾರ ಆರಂಭಗೊಂಡಿದ್ದರೂ ಪಿಎಸ್‌ಜಿ ಅಳವಡಿಕೆಯಾಗಿಲ್ಲ.

‘ಪ್ರತಿ ಬಾರಿ ಯಾರಾದರೂ ಹಳಿಗೆ ಬಿದ್ದಾಗ ಪಿಎಸ್‌ಡಿ ಮತ್ತು ಪಿಎಸ್‌ಜಿ ಅಳವಡಿಕೆ ಬಗ್ಗೆ ಚರ್ಚೆಗಳಾಗುತ್ತವೆ. ‘ಸುರಕ್ಷತೆಗಾಗಿ ಕ್ರಮ ಕೈಗೊಳ್ಳಬೇಕು’ ಎಂಬ ಕೂಗು ಪ್ರಯಾಣಿಕರಿಂದ ಬರುತ್ತದೆ. ಪಿಎಸ್‌ಡಿ ಹಾಗೂ ಪಿಎಸ್‌ಜಿ ನಿರ್ಮಿಸುವ ಯೋಜನೆ ಇದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಹೇಳುತ್ತಾರೆ. ದಿನ ಕಳೆದಂತೆ, ಪ್ರಯಾಣಿಕರು ಘಟನೆಯನ್ನು ಮರೆಯುತ್ತಾರೆ. ಅಧಿಕಾರಿಗಳಿಗೂ ಯೋಜನೆ ಮರೆತು ಹೋಗುತ್ತದೆ’ ಎಂದು ಮೆಟ್ರೊ ಪ್ರಯಾಣಿಕ ಪ್ರಮೋದ್‌ ದೂರಿದರು.

‘ಚೀನಾದ  ಪ್ಯಾನಾಸೋನಿಕ್ ಉಪ ಗುತ್ತಿಗೆ ಸಂಸ್ಥೆಯು ಗುಲಾಬಿ ಮಾರ್ಗದ ಎಂ.ಜಿ. ರಸ್ತೆಯಲ್ಲಿ ಮೊದಲ ಪಿಎಸ್‌ಡಿಯನ್ನು ನಿರ್ಮಿಸಲಿದೆ. ಕಾಳೇನ ಅಗ್ರಹಾರದಿಂದ ನಾಗವಾರ ಸಂಪರ್ಕಿಸುವ ಗುಲಾಬಿ ಮಾರ್ಗ ಮತ್ತು ಕೇಂದ್ರ ರೇಷ್ಮೆ ಮಂಡಳಿಯಿಂದ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನೀಲಿ ಮಾರ್ಗದಲ್ಲಿ 12 ಭೂಗತ ನಿಲ್ದಾಣಗಳಲ್ಲಿ ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಿಎಸ್‌ಡಿ ನಿರ್ಮಾಣಗೊಳ್ಳಲಿದೆ’ ಎಂದು ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಹಳದಿ ಮಾರ್ಗದ ಕೋನಪ್ಪನ ಅಗ್ರಹಾರ ನಿಲ್ದಾಣದಲ್ಲಿ ಯೋಜನೆಯಂತೆ ಪಿಎಸ್‌ಜಿ ನಿರ್ಮಾಣಗೊಳ್ಳಲಿದೆ. ವೈಟ್‌ಫೀಲ್ಡ್‌–ಚಲ್ಲಘಟ್ಟ ಸಂಪರ್ಕಿಸುವ ನೇರಳೆ ಮಾರ್ಗ ಮತ್ತು ರೇಷ್ಮೆ ಸಂಸ್ಥೆ–ಮಾದಾವರ ಸಂಪರ್ಕಿಸುವ ಹಸಿರು ಮಾರ್ಗದಲ್ಲಿರುವ ಕೆಲವು ನಿಲ್ದಾಣಗಳಲ್ಲಿ ಕೂಡ ಅಳವಡಿಸುವ ಯೋಜನೆ ಇದೆ’ ಎಂದು ಮಾಹಿತಿ ನೀಡಿದರು.

‘ಪಿಎಸ್‌ಡಿ, ಪಿಎಸ್‌ಜಿ ಅಳವಡಿಕೆ ಉತ್ತಮ ಕಾರ್ಯವಾದರೂ ವೆಚ್ಚದಾಯಕ. ರೈಲು ಸಂಚಾರವಿರುವ ನಿಲ್ದಾಣಗಳಲ್ಲಿ ಈ ತಂತ್ರಜ್ಞಾನ ಅಳವಡಿಕೆ ಕಷ್ಟ. ರಾತ್ರಿ ವೇಳೆ ಮಾತ್ರ ಕೆಲಸ ಮಾಡಬೇಕಾಗುತ್ತದೆ. ತಂತ್ರಜ್ಞಾನ, ಸಾಫ್ಟ್‌ವೇರ್‌ಗಳು ಬದಲಾಗಬೇಕಾಗುತ್ತದೆ. ಮೆಟ್ರೊ ಮಾರ್ಗ–ನಿಲ್ದಾಣಗಳ ಕಾಮಗಾರಿಗೆ ಮುನ್ನ, ವಿನ್ಯಾಸದಲ್ಲಿಯೇ ಈ ತಂತ್ರಜ್ಞಾನ ಅಳವಡಿಸಿಕೊಂಡರೆ ಸುಲಭವಾಗಲಿದೆ’ ಎಂದು ತಾಂತ್ರಿಕ ವಿಭಾಗದ ಎಂಜಿನಿಯರ್‌ ಒಬ್ಬರು ತಿಳಿಸಿದರು.

ಪ್ರಕರಣಗಳು

2024

  • ಜನವರಿಯಲ್ಲಿ ಇಂದಿರಾನಗರ ಮೆಟ್ರೊ ನಿಲ್ದಾಣದಲ್ಲಿ ಕೆಳಗೆ ಬಿದ್ದ ಮೊಬೈಲ್‌ ಎತ್ತಿಕೊಳ್ಳಲು ಮಹಿಳೆ ಹಾರಿದ್ದರು. ‌ಜಾಲಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ಕೇರಳದ ಯುವಕ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು.

  • ಮಾರ್ಚ್‌ನಲ್ಲಿ ಅತ್ತಿಗುಪ್ಪೆ ಮೆಟ್ರೊ ನಿಲ್ದಾಣದಲ್ಲಿ ಕಾನೂನು ವಿದ್ಯಾರ್ಥಿ ಹಾರಿ ಜೀವ ಕಳೆದುಕೊಂಡಿದ್ದರು. ಜ್ಞಾನಭಾರತಿ ನಿಲ್ದಾಣದಿಂದ ಪಟ್ಟಣಗೆರೆ ನಿಲ್ದಾಣ ನಡುವಿನ ಹಳಿ ಮೇಲೆ ಯುವಕರೊಬ್ಬರು ಓಡಾಡಿದ್ದರು.

  • ಜೂನ್‌ನಲ್ಲಿ ಹೊಸಹಳ್ಳಿ ನಿಲ್ದಾಣದಲ್ಲಿ ಯುವಕರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದ‌ರು.

  • ಆಗಸ್ಟ್‌ನಲ್ಲಿ ಬೈಯಪ್ಪನಹಳ್ಳಿಮೆಟ್ರೊ ನಿಲ್ದಾಣದಲ್ಲಿ ಆಯತಪ್ಪಿ ಹಳಿಗೆ ಬಿದ್ದಿದ್ದ ನಾಲ್ಕು ವರ್ಷದ ಬಾಲಕನನ್ನು ರಕ್ಷಿಸಲಾಗಿತ್ತು. ದೊಡ್ಡಕಲ್ಲಸಂದ್ರ ನಿಲ್ದಾಣದಲ್ಲಿ 57 ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದರು.ಮೆಜೆಸ್ಟಿಕ್‌ನಲ್ಲಿ ಅಂಧ ಪ್ರಯಾಣಿಕರಿಬ್ಬರು ಆಯ ತಪ್ಪಿ ಹಳಿಗೆ ಬಿದ್ದಿದ್ದರು.

  • ಸೆಪ್ಟೆಂಬರ್‌ನಲ್ಲಿ ಬಿಹಾರದ ಯುವಕ ಜ್ಞಾನಭಾರತಿ ಮೆಟ್ರೊ ನಿಲ್ದಾಣದಲ್ಲಿ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು.

2025

  • ಜನವರಿಯಲ್ಲಿ ನಿವೃತ್ತ ಸೇನಾಧಿಕಾರಿಯೊಬ್ಬರು ಜಾಲಹಳ್ಳಿ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು.

  • ಆಗಸ್ಟ್‌ನಲ್ಲಿ ಮೆಜೆಸ್ಟಿಕ್‌ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಹಾರಿದ್ದರು. ಮೆಟ್ರೊ ಭದ್ರತಾ ಸಿಬ್ಬಂದಿಯೇ ರಾಗಿಗುಡ್ಡ ನಿಲ್ದಾಣದಲ್ಲಿ ಆಕಸ್ಮಿಕವಾಗಿ ಹಳಿಗೆ ಬಿದ್ದಿದ್ದರು.

  • ಸೆಪ್ಟೆಂಬರ್‌ನಲ್ಲಿ ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಹಳಿಗೆ ಹಾರಿದ್ದರು.

  • ಡಿಸೆಂಬರ್‌ನಲ್ಲಿ ಕೆಂಗೇರಿ ನಿಲ್ದಾಣದಲ್ಲಿ ವಿಜಯಪುರ ಜಿಲ್ಲೆಯ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.