ADVERTISEMENT

ಬೆಂಗಳೂರು: ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮೆಟ್ರೊ ರೈಲು ಸೇವೆ ನಾಳೆಯಿಂದ

ಜುಲೈ 1ರಿಂದ ಸ್ಮಾರ್ಟ್ ಟೋಕನ್ ವಿತರಣೆ 

​ಪ್ರಜಾವಾಣಿ ವಾರ್ತೆ
Published 30 ಜೂನ್ 2021, 11:54 IST
Last Updated 30 ಜೂನ್ 2021, 11:54 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ನಗರದಲ್ಲಿ ಜುಲೈ 1ರಿಂದ‌ ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಅನಿಯಮಿತ ಮೆಟ್ರೊ ರೈಲು ಸೇವೆ ಇರಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಹೇಳಿದೆ.‌

ವಾರಾಂತ್ಯ ಕರ್ಫ್ಯೂ ಇರುವುದರಿಂದ ಶನಿವಾರ ಮತ್ತು ಭಾನುವಾರ ಮೆಟ್ರೊ ರೈಲು ಸಂಚಾರ ಇರುವುದಿಲ್ಲ ಎಂದೂ ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.

ಜನದಟ್ಟಣೆಯ ಸಂದರ್ಭದಲ್ಲಿ ಪ್ರತಿ ಐದು ನಿಮಿಷಗಳ ಅಂತರದಲ್ಲಿ, ಜನದಟ್ಟಣೆ ಇಲ್ಲದಾಗ 15 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸಲಿವೆ. ಆದಾಗ್ಯೂ, ಪ್ರಯಾಣಿಕರ ದಟ್ಟಣೆಯನ್ನು ಅವಲಂಬಿಸಿ, ರೈಲುಗಳ ಸಂಚಾರ ಸಮಯದಲ್ಲಿನ ಅಂತರವನ್ನು ಮರುಪರಿಶೀಲಿಸಲಾಗುವುದು ಎಂದು ನಿಗಮ ಹೇಳಿದೆ.

ADVERTISEMENT

ಸ್ಮಾರ್ಟ್ ಕಾರ್ಡ್‌ಗಳಲ್ಲದೆ ಸ್ಮಾರ್ಟ್ ಟೋಕನ್‌ಗಳನ್ನೂ ಬಳಸಿ ಪ್ರಯಾಣಿಸಲು ನಿಗಮ ಅವಕಾಶ ನೀಡಿದೆ. ಸ್ಮಾರ್ಟ್ ಕಾರ್ಡ್‌ಗಳನ್ನು ನಿಗಮದ ವೆಬ್‌ಸೈಟ್, ಆ್ಯಪ್ ಬಳಸಿ ರಿಚಾರ್ಜ್ ಮಾಡಿ ಕೊಳ್ಳಬಹುದು. ಅಲ್ಲದೆ, ಮೆಟ್ರೊ ನಿಲ್ದಾಣಗಳಲ್ಲಿನ ಕೌಂಟರ್‌ಗಳಲ್ಲಿಯೂ ಎಟಿಎಂ ಕಾರ್ಡ್ ಅಥವಾ ನಗದು ಬಳಸಿ ಖರೀದಿ ಅಥವಾ ರಿಚಾರ್ಜ್ ಮಾಡಿಸಬಹುದು. ಟೋಕನ್‌ಗಳನ್ನು ನಗದು ನೀಡಿ ಅಥವಾ ಸ್ಟಾಟಿಕ್‌ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಯೂ ಖರೀದಿಸಬಹುದು.

ಲಾಕ್‌ಡೌನ್ ಸಡಿಲಿಕೆ ನಂತರ, ಬೆಳಿಗ್ಗೆ 7ರಿಂದ 11ರವರೆಗೆ ಮತ್ತು ಮಧ್ಯಾಹ್ನ‌ 3ರಿಂದ 6ರವರೆಗೆ, ಅಂದರೆ ದಿನದಲ್ಲಿ 7 ತಾಸು ಮಾತ್ರ ಮೆಟ್ರೊ ರೈಲು ಸಂಚರಿಸುತ್ತಿದ್ದವು. ಜುಲೈ 1ರಿಂದ ದಿನದಲ್ಲಿ 11 ತಾಸು ಸೇವೆ ಲಭ್ಯವಾಗಲಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.