ADVERTISEMENT

ಬೆಂಗಳೂರು: ಹಣ ಕೊಡಲು ಒಪ್ಪದ ಪತಿಯನ್ನೇ ಕೊಂದ ಎರಡನೇ ಪತ್ನಿಯ ಬಂಧನ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 15:34 IST
Last Updated 17 ನವೆಂಬರ್ 2025, 15:34 IST
   

ಬೆಂಗಳೂರು: ಕೇಳಿದಷ್ಟು ಹಣ ಕೊಡಲು ಒಪ್ಪದ ಪತಿಯನ್ನು ಕಟ್ಟಡದ ಮೇಲಿಂದ ತಳ್ಳಿ ಕೊಲೆ ಮಾಡಿದ್ದ ಪತ್ನಿ ಹಾಗೂ ಆಕೆಯ ಸೋದರ ಮಾವನನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಂದ್ರಹಳ್ಳಿ ಸಮೀಪದ ಮಂಜುನಾಥ ಬಡಾವಣೆಯ ವೆಂಕಟೇಶ್‌ ಅವರನ್ನು ಕೊಲೆ ಮಾಡಿದ ಆರೋಪದಡಿ ಅವರ ಪತ್ನಿ ಪಾರ್ವತಿ, ಆಕೆಯ ಸೋದರ ಮಾವ ರಂಗಸ್ವಾಮಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ವೆಂಕಟೇಶ್ ಅವರು ಆಟೊ ಚಾಲಕರಾಗಿ ಕೆಲಸ ಮಾಡುತ್ತಿದ್ದರು. 10 ವರ್ಷಗಳ ಹಿಂದೆ ಮೊದಲ ಪತ್ನಿಗೆ ವಿಚ್ಛೇದನ ನೀಡಿ ಪಾರ್ವತಿ ಜತೆಗೆ ಎರಡನೇ ಮದುವೆ ಆಗಿದ್ದರು.

ADVERTISEMENT

‘ಮನೆಯನ್ನು ತನ್ನ ಹೆಸರಿಗೆ ಬರೆದುಕೊಡಬೇಕು. ಅದು ಸಾಧ್ಯ ಆಗದಿದ್ದರೆ ₹6 ಲಕ್ಷ ಕೊಡುವಂತೆ ಪತಿಯೊಂದಿಗೆ ಪಾರ್ವತಿ ಜಗಳ ಮಾಡಿದ್ದಳು. ಇದಕ್ಕೆ ವೆಂಕಟೇಶ್ ಅವರು ಒಪ್ಪಿರಲಿಲ್ಲ. ಕೊನೆಗೆ ಸಂಧಾನ ನಡೆದು ₹2.50 ಲಕ್ಷ ಕೊಡುವುದಾಗಿ ಭರವಸೆ ನೀಡಿದ್ದರು. ಕಡಿಮೆ ಹಣ ನೀಡಲು ಮುಂದಾಗಿದ್ದಕ್ಕೆ ಮತ್ತೆ ಜಗಳವಾಗಿತ್ತು. ಪತ್ನಿಯನ್ನು ವೆಂಕಟೇಶ್ ಅವರು ಹೊರಹಾಕಿದ್ದರು. ಇದರಿಂದ ಆಕ್ರೋಶಗೊಂಡ ಪಾರ್ವತಿ, ತನ್ನ ಸೋದರ ಮಾವನಿಗೆ ಕರೆ ಮಾಡಿ ಮನೆಯ ಬಳಿಗೆ ಕರೆಸಿಕೊಂಡಿದ್ದಳು. ಮನೆಯ ಬಾಗಿಲು ಒಡೆದು ಒಳಕ್ಕೆ ನುಗ್ಗಿದ್ದರು. ಇಬ್ಬರೂ ಸೇರಿಕೊಂಡು ವೆಂಕಟೇಶ್ ಅವರ ಮೇಲೆ ಹಲ್ಲೆ ನಡೆಸಿದ್ದರು. ನಂತರ, ಕಟ್ಟಡದ ಮೆಟ್ಟಿಲುಗಳ ಮೇಲಿಂದ ತಳ್ಳಿ ಕೊಲೆ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.