ಪೀಣ್ಯ ದಾಸರಹಳ್ಳಿ: ’ಪ್ರಧಾನಿ ನರೇಂದ್ರ ಮೋದಿಯವರು ಹತ್ತು ವರ್ಷಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸೋಣ. ಮತ್ತೊಮ್ಮೆ ಅವರನ್ನು ಪ್ರಧಾನಿ ಮಾಡೋಣ’ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಶೋಭಾ ಕರಂದ್ಲಾಜೆ ತಿಳಿಸಿದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಪ್ರಮುಖರ ಚುನಾವಣಾ ಕಾರ್ಯತಂತ್ರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ಹಳ್ಳಿಗಳಲ್ಲಿ ರಸ್ತೆ ನಿರ್ಮಾಣ, ಪಡಿತರಚೀಟಿದಾರರಿಗೆ ಕೋವಿಡ್ ಸಮಯದಿಂದ ಇಲ್ಲಿಯವರೆಗೂ 5 ಕೆಜಿ ಅಕ್ಕಿ ವಿತರಿಸುವಂತಹ ಹಲವು ಯೋಜನೆಗಳನ್ನು ಪ್ರಧಾನಿ ಮೋದಿಯವರು ಅನುಷ್ಠಾನಕ್ಕೆ ತಂದಿದ್ದಾರೆ. ಜನಸಾಮಾನ್ಯರಿಗೆ ಮನೆಗಳು, ಶೌಚಾಲಯಗಳು, ವಿದ್ಯುತ್ ಸೌಲಭ್ಯ, ಆಯುಷ್ಮಾನ್ ಕಾರ್ಡ್, ಜನೌಷಧಿ ಕೇಂದ್ರಗಳು, ಉಜ್ವಲದಂತಹ ಸೌಲಭ್ಯಗಳನ್ನು ನೀಡಿದ್ದಾರೆ. ಈ ಎಲ್ಲ ಸಾಧನೆಗಳನ್ನು ಜನರಿಗೆ ತಿಳಿಸುವ ಕೆಲಸವಾಗಬೇಕು‘ ಎಂದು ಹೇಳಿದರು.
ಶಾಸಕ ಎಸ್. ಮುನಿರಾಜು ಮಾತನಾಡಿ' ರಾಜ್ಯ ಸರ್ಕಾರಕ್ಕೆ ಕುಡಿಯುವುದಕ್ಕೆ ನೀರು ಕೊಡಲು ಆಗುತ್ತಿಲ್ಲ. ಬೆಂಗಳೂರಿನ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಸುಳ್ಳು ಹೇಳಿಕೊಂಡು ಸಿದ್ದರಾಮಯ್ಯ ಅವರು ಆಡಳಿತ ನಡೆಸುತ್ತಿದ್ದಾರೆ' ಎಂದು ದೂರಿದರು.
‘ಕೇಂದ್ರ ಸರ್ಕಾರದ ಸಾಧನೆ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸುವ ಮೂಲಕ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು' ಎಂದರು.
ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಅಂದಾನಪ್ಪ, ದಾಸರಹಳ್ಳಿ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಎಂ. ಮುನಿಸ್ವಾಮಿ ಅವರ ಮನೆಗೆ ಶೋಭಾ ಕರಂದ್ಲಾಜೆ ಮತ್ತು ಶಾಸಕ ಎಸ್. ಮುನಿರಾಜು ಭೇಟಿ ನೀಡಿ ಚುನಾವಣಾ ಪ್ರಚಾರದ ಬಗ್ಗೆ ಚರ್ಚಿಸಿದರು. ದಾಸರಹಳ್ಳಿ, ಮಲ್ಲಸಂದ್ರ, ಬಾಗಲಗುಂಟೆ, ಶೆಟ್ಟಿಹಳ್ಳಿ ವಾರ್ಡ್‌ಗಳಲ್ಲಿ ಎರಡು ಪಕ್ಷದ ಮುಖಂಡರ ಚುನಾವಣಾ ಸಭೆಯಲ್ಲಿ ಭಾಗವಹಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಸೋಮಶೇಖರ್, ಶೆಟ್ಟಿಹಳ್ಳಿ ವಾರ್ಡ್ ಅಧ್ಯಕ್ಷ ಬಿ ಸುರೇಶ್, ಪಿ.ಎಚ್. ರಾಜು, ಬಿ.ಎಂ. ನಾರಾಯಣ್, ಕೃಷ್ಣಮೂರ್ತಿ, ಭರತ್ ಸೌಂದರ್ಯ, ಉಮಾದೇವಿ ನಾಗರಾಜು, ಬಿ.ಟಿ. ಶ್ರೀನಿವಾಸ್, ಗಂಗರಾಜು, ಪಾಂಡುರಂಗ ರಾವ್, ಶಿವಕುಮಾರ್, ಕೆಂಪೇಗೌಡ ಸುರೇಶ್ ಮುಂತಾದವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.