
ಬೆಂಗಳೂರು: ನಗರದಲ್ಲಿನ ಪೇಯಿಂಗ್ ಗೆಸ್ಟ್‌ಗಳು (ಪಿ.ಜಿ) ಸಮಸ್ಯೆಗಳ ಆಗರವಾಗಿವೆ. ಅಲ್ಲಿ ತಂಗಿರುವ ನಿವಾಸಿಗಳಿಗೆ ಗುಣಮಟ್ಟದ ಆಹಾರ ನೀಡುತ್ತಿಲ್ಲ. ಅಡುಗೆಮನೆ ಮತ್ತು ಊಟದ ಕೋಣೆಯಲ್ಲಿ ಸ್ವಚ್ಚತೆ ಇಲ್ಲ, ಕಳಪೆ ಆಹಾರ ಸೇವನೆಯಿಂದ ನಿವಾಸಿಗಳ ಆರೋಗ್ಯ ಹದಗೆಡುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ನಗರದಲ್ಲಿ ಸುಮಾರು 20 ಸಾವಿರ ಪಿ.ಜಿಗಳು ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಣ, ಉದ್ಯೋಗ ಸೇರಿದಂತೆ ನಾನಾ ಕಾರಣಗಳಿಂದ ರಾಜಧಾನಿಗೆ ವಲಸೆ ಬಂದಿರುವ ಲಕ್ಷಾಂತರ ಮಂದಿ ಪಿ.ಜಿಗಳಲ್ಲಿ ವಾಸ ಮಾಡುತ್ತಿದ್ದಾರೆ. ಆದರೆ, ಬಹುತೇಕ ಪಿ.ಜಿಗಳಲ್ಲಿ ಮಾಲೀಕರು ಉತ್ತಮ ಸೌಕರ್ಯಗಳನ್ನು ನೀಡುತ್ತಿಲ್ಲ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ನಿಖರವಾಗಿ ಎಷ್ಟು ಪಿ.ಜಿಗಳಿವೆ ಎಂಬ ಅಂಕಿ ಅಂಶಗಳು ಸರ್ಕಾರದ ಬಳಿ ಲಭ್ಯವಿಲ್ಲ. ಈ ಬಗ್ಗೆ ಸಮಗ್ರ ಸಮೀಕ್ಷೆಯೂ ನಡೆದಿಲ್ಲ. ಲಭ್ಯ ಮಾಹಿತಿ ಪ್ರಕಾರ 2025ರ ಏಪ್ರಿಲ್‌ವರೆಗೆ ಜಿಬಿಎ ಅಡಿ 2,193 ಪಿ.ಜಿಗಳು ಅಧಿಕೃತವಾಗಿ ನೋಂದಣಿಯಾಗಿವೆ.
ಪಿ.ಜಿ ನಿವಾಸಿಗಳ ಆರೋಗ್ಯ ಮತ್ತು ಸುರಕ್ಷತೆಗಾಗಿ ‘ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2024’ರ ಅನ್ವಯ ನಿಯಮಗಳನ್ನು ರೂಪಿಸಲಾಗಿದೆ. ಅಡುಗೆಮನೆಯ ಸ್ವಚ್ಚತೆ ಮತ್ತು ಆಹಾರ ಗುಣಮಟ್ಟಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳು ಇವೆ. ಆದರೆ, ಇವುಗಳ ಪಾಲನೆ ಆಗುತ್ತಿಲ್ಲ ಎಂದು ಪಿ.ಜಿ ನಿವಾಸಿಗಳು ಆರೋಪಿಸಿದ್ದಾರೆ.
ಅಡುಗೆ ಮನೆಯಲ್ಲಿ ‘ಆಹಾರ ಸುರಕ್ಷತಾ ಪ್ರದರ್ಶನ ಫಲಕ’ (ಎಫ್‌ಎಸ್‌ಡಿಬಿ), ಪರವಾನಗಿ ಸಂಖ್ಯೆ, ಸ್ವಚ್ಚತೆಯ ನಿಯಮಗಳು ಮತ್ತು ನಿವಾಸಿಗಳು ದೂರು ನೀಡಲು ಸಹಾಯವಾಣಿ ಸಂಖ್ಯೆ, ಎಫ್‌ಎಸ್‌ಎಸ್‌ಎಐ ಪರವಾನಗಿ, ವಾರದ ಆಹಾರ ವೇಳಾಪಟ್ಟಿ, ಕುಡಿಯುವ ನೀರಿನ ಗುಣಮಟ್ಟದ ಲ್ಯಾಬ್ ವರದಿ, ಅಡುಗೆ ಮಾಡುವವರ ಹೆಸರು ಮತ್ತು ಆರೋಗ್ಯ ತಪಾಸಣಾ ವರದಿಗಳನ್ನು ಪ್ರದರ್ಶಿಸಬೇಕು. ನಿಯಮಿತವಾಗಿ ನವೀಕರಿಸಬೇಕು. ಆದರೆ, ಬಹುತೇಕ ಪಿ.ಜಿಗಳಲ್ಲಿ ಈ ನಿಯಮ ಪಾಲನೆ ಆಗುತ್ತಿಲ್ಲ.
‘ನಾನು ಕೆಂಗೇರಿಯಲ್ಲಿ ಇದ್ದ ಪಿ.ಜಿಯಲ್ಲಿ ಗುಣಮಟ್ಟದ ಆಹಾರ ನೀಡುತ್ತಿರಲಿಲ್ಲ. ಅಡುಗೆಮನೆ ಸ್ವಚ್ಚವಾಗಿ ಇರಲಿಲ್ಲ’ ಎಂದು ಸಾಫ್ಟ್‌ವೇರ್ ಕಂಪನಿಯೊಂದರ ಉದ್ಯೋಗಿ ದರ್ಶನ್ ಎಸ್. ಅನುಭವ ಹಂಚಿಕೊಂಡರು.
ಪರವಾನಗಿ ರದ್ದು
ನಿಯಮ ಉಲ್ಲಂಘನೆಯನ್ನು ‘ಸೇವಾ ನ್ಯೂನತೆ‘ ಎಂದು ಪರಿಗಣಿಸಿ ಪಿ.ಜಿಗಳಿಗೆ ಬೀಗಮುದ್ರೆ ಹಾಕುವ, ದಂಡ ವಿಧಿಸುವ ಮತ್ತು ಪರವಾನಗಿ ರದ್ದುಪಡಿಸುವ ಅಧಿಕಾರ ಜಿಬಿಎಗಿದೆ.
ಅದರಂತೆ 2025ರ ಏಪ್ರಿಲ್‌ನಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿ, ನಿಯಮ ಪಾಲಿಸದ 187 ಪಿ.ಜಿಗಳ ಪರವಾನಗಿ ರದ್ದು ಪಡಿಸಿದ್ದರು. ಅಕ್ಟೋಬರ್ ನಲ್ಲಿ ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ತಪಾಸಣೆ ನಡೆಸಿ 14 ಪಿಜಿಗಳ ಪರವಾನಗಿ ರದ್ದು ಮಾಡಿದ್ದರು. ಕೇಂದ್ರ ನಗರ ಪಾಲಿಕೆ ಅಧಿಕಾರಿಗಳು ವಾರದ ಹಿಂದೆ ತಪಾಸಣೆ ನಡೆಸಿದ್ದರು. ನಿಯಮ ಪಾಲಿಸದ 6 ಪಿ.ಜಿಗಳಿಗೆ ಬೀಗಮುದ್ರೆ ಹಾಕಿದ್ದು, ₹ 1.96 ಲಕ್ಷ ದಂಡ ವಿಧಿಸಿದ್ದರು.
ನಾನಿರುವ ಪಿ.ಜಿಯಲ್ಲಿ ಯಾವುದೇ ಕಡ್ಡಾಯ ದಾಖಲೆ ಪ್ರಮಾಣಪತ್ರಗಳನ್ನು ಪ್ರದರ್ಶಿಸಿಲ್ಲ. ನಿಲಯಪಾಲಕರಾಗಲಿ, ಮಾಲೀಕರಾಗಲಿ ಕಾಣುವುದಿಲ್ಲ. ಹಿಂದಿ ಮಾತನಾಡುವ ಸೇವಾಕರ್ತನೇ ಅವರ ಸಂಪರ್ಕಾಧಿಕಾರಿ. ಯಾರನ್ನು ಪ್ರಶ್ನಿಸೋದು? ಜಿಬಿಎ ಸಹಾಯವಾಣಿಗೆ ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ.– ಯುವರಾಜ್, ಅಕೌಂಟೆಂಟ್
150ಕ್ಕೂ ಹೆಚ್ಚಿನ ನಿವಾಸಿಗಳಿರುವ ಪಿ.ಜಿಯಲ್ಲಿ ವಾಸವಿದ್ದೇನೆ. ತರಕಾರಿ, ಕಾಳು, ಅಕ್ಕಿ ಇತ್ಯಾದಿಗಳನ್ನು ತೊಳೆಯದೆ ಅಡುಗೆ ಮಾಡುತ್ತಾರೆ. ಅಡುಗೆ ಮನೆಯಲ್ಲಿ ಜಿರಳೆ ಮತ್ತು ಇಲಿಗಳು ಓಡಾಡುತ್ತವೆ. ಆರೋಗ್ಯ ಕೆಡಿಸಿಕೊಳ್ಳಲು ಹಣ ವ್ಯಯಿಸುವಂತಾಗಿದೆ.– ರುಚಿತಾ, ಕಾಲೇಜು ವಿದ್ಯಾರ್ಥಿನಿ
ನಿರಂತರ ತಪಾಸಣೆ ನಡೆಸಲಾಗುತ್ತಿದ್ದು, ನಿಯಮ ಉಲ್ಲಂಘಿಸುವ ಪಿ.ಜಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.– ಮನೋಹರ ಹೆಗ್ಡೆ, ಆರೋಗ್ಯ ಅಧಿಕಾರಿ, ಪಶ್ಚಿಮ ನಗರ ಪಾಲಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.