ADVERTISEMENT

ನಗರದಲ್ಲಿ ಮಾಲಿನ್ಯ ತಡೆಗೆ ಸಿಗದ ಸ್ಪಂದನೆ: ಸುರೇಶ್‌ಕುಮಾರ್ ಬೇಸರ

ಸಚಿವ ಖಂಡ್ರೆ ನಡೆಗೆ ಸುರೇಶ್‌ಕುಮಾರ್ ಬೇಸರ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 19:42 IST
Last Updated 12 ಅಕ್ಟೋಬರ್ 2025, 19:42 IST
ಸುರೇಶ್‌ಕುಮಾರ್
ಸುರೇಶ್‌ಕುಮಾರ್   

ಬೆಂಗಳೂರು: ‘ನಗರದಲ್ಲಿನ ಪರಿಸರ ಮಾಲಿನ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಭೆ ನಡೆಸುವುದಾಗಿ ಹೇಳಿದ್ದ ಅರಣ್ಯ, ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಇದುವರೆಗೂ ಸ್ಪಂದಿಸಿಲ್ಲ. ಇದೇ ವಿಚಾರದಲ್ಲಿ ವಿಧಾನಸಭೆ ಸ್ಪೀಕರ್‌ ನೀಡಿದ ಸೂಚನೆಗೂ ಬೆಲೆ ಇಲ್ಲವೇ‘ ಎಂದು ಶಾಸಕ ಎಸ್‌.ಸುರೇಶ್‌ಕುಮಾರ್ ಪ್ರಶ್ನಿಸಿದ್ದಾರೆ.

‘ಮಾಲಿನ್ಯ ಸಮಸ್ಯೆ ತೀವ್ರವಾಗುತ್ತಿರುವುದು ಹಾಗೂ ಇದನ್ನು ತಡೆಗಟ್ಟಲು ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಆಗಸ್ಟ್‌ನಲ್ಲಿ ನಡೆದ ಅಧಿವೇಶನದಲ್ಲಿ ಪ್ರಶ್ನೆ ಕೇಳಿದ್ದೆ. ಆಗ ಸಚಿವರು ಇದಕ್ಕೆ ಉತ್ತರಿಸಲು 15 ದಿನಗಳ ಕಾಲಾವಕಾಶ ಕೇಳಿದ್ದರು. ಆಗ, ನಾನು ಉತ್ತರ ನೀಡುವಾಗ ಅಧಿಕಾರಿಗಳೊಂದಿಗೆ ಸಭೆ ಕರೆಯಿರಿ ಎಂದು ಹೇಳಿದ್ದೆ. ಇದಕ್ಕೆ ಸಮ್ಮತಿಸಿದ್ದರು. ಆದರೆ, ಇದುವರೆಗೂ ಸಭೆ ಕರೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೆಪ್ಟೆಂಬರ್‌ನಲ್ಲಿ ನನ್ನ ಕ್ಷೇತ್ರದಲ್ಲಿ ಎರಡು ಬಾರಿ ಕಾರ್ಯಕ್ರಮ ನಡೆದಾಗ ಈ ಬಗ್ಗೆ ಸಚಿವರಿಗೆ ನೆನಪು ಮಾಡಿದ್ದೆ. ಪ್ರಶ್ನೆ ಕೇಳಿ 50 ದಿನವಾದರೂ  ಲಿಖಿತ ಉತ್ತರವಾಗಲಿ, ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲು ಸಭೆಯನ್ನಾಗಲಿ ಸಚಿವರು ಏರ್ಪಡಿಸಿಲ್ಲ’ ಎಂದು ಸುರೇಶ್‌ ಕುಮಾರ್ ಅವರು ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಸದನದಲ್ಲಿ ಪ್ರಶ್ನೆಗಳಿಗೆ ನಿಗದಿತ ದಿನದಂದು ಉತ್ತರ ಕೊಡಲು ಸಾಧ್ಯವಾಗದಿದ್ದರೆ ತಿಂಗಳ ಒಳಗೆ ಉತ್ತರ ನೀಡಲೇಬೇಕು ಎಂದು ಸಚಿವರು ಮತ್ತು ಇಲಾಖಾ ಮುಖ್ಯಸ್ಥರಿಗೆ ವಿಧಾನ ಸಭೆ ಸಭಾಧ್ಯಕ್ಷರು ಕಟ್ಟುನಿಟ್ಟಾಗಿ ಸೂಚಿಸಿದ್ದರು. ಸಭಾಧ್ಯಕ್ಷರ ಆದೇಶಕ್ಕೂ ಬೆಲೆ ಇಲ್ಲ. ಸದಸ್ಯರ ಕಳಿಕಳಿಗೂ ಸ್ಪಂದನೆ ಇಲ್ಲದ ಆಡಳಿತ ವ್ಯವಸ್ಥೆ ರಾಜ್ಯದಲ್ಲಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.