ADVERTISEMENT

ಬೆಂಗಳೂರು: ಸುರಂಗ ರಸ್ತೆ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 22:52 IST
Last Updated 16 ಆಗಸ್ಟ್ 2025, 22:52 IST
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೆಂಗಳೂರು ಟೌನ್‌ಹಾಲ್ ಸಂಘಟನೆ ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿದರು.  ಪ್ರಜಾವಾಣಿ ಚಿತ್ರ
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೆಂಗಳೂರು ಟೌನ್‌ಹಾಲ್ ಸಂಘಟನೆ ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿದರು.  ಪ್ರಜಾವಾಣಿ ಚಿತ್ರ   

ಬೆಂಗಳೂರು: ಸುರಂಗ ರಸ್ತೆ, ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ ಮತ್ತು ಕೆರೆಗಳ ಬಫರ್ ವಲಯ ತಿದ್ದುಪಡಿ ಮಸೂದೆ ವಿರೋಧಿಸಿ ಬೆಂಗಳೂರು ಟೌನ್‌ಹಾಲ್ ಸಂಘಟನೆ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ‘ನಮ್ಮ ನಗರ, ನಮ್ಮ ಹಕ್ಕು, ನಮ್ಮ ಆಯ್ಕೆ‘ ಎಂಬ ಘೋಷ ವಾಕ್ಯದೊಂದಿಗೆ ಸಂಘಟನೆಯ ನೂರಾರು ಸದಸ್ಯರು ಪ್ರತಿಭಟನೆ ನಡೆಸಿದರು. 

‘ನಗರಕ್ಕೆ ಸುರಂಗ ರಸ್ತೆ ಬೇಡ, ಸಾರ್ವಜನಿಕ ಸಾರಿಗೆ ಬೇಕು, ಬಫರ್‌ ವಲಯ ತಿದ್ದುಪಡಿ ಬೇಡ, 74ನೇ ತಿದ್ದುಪಡಿ ಅನುಷ್ಠಾನ ಬೇಕು ಹಾಗೂ ಕೆರೆ, ಕಾಲುವೆಗಳು ಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ADVERTISEMENT

‘ಸುರಂಗ ರಸ್ತೆಯ  ಪ್ರಯಾಣ ಶುಲ್ಕ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಿಂತ ದುಬಾರಿಯಾಗುತ್ತದೆ. ಹಾಗಾಗಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮೂಲಸೌಕರ್ಯ ಯೋಜನೆಗಳನ್ನು ಮೊದಲು ಪೂರ್ಣಗೊಳಿಸಬೇಕು. ಸುರಂಗ ರಸ್ತೆಯಿಂದ ಲಾಲ್‌ಬಾಗ್ ಒಳಗೊಂಡಂತೆ ಹಲವಾರು ಸ್ಥಳಗಳಿಗೆ ಧಕ್ಕೆ ಉಂಟಾಗುತ್ತದೆ. ಮರಗಳನ್ನು ಕಡಿಯುವುದರಿಂದ ಶುದ್ಧ ಗಾಳಿ ಮತ್ತು ನೀರು ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮರಗಳನ್ನು ಉಳಿಸುವುದು, ಸೈಕಲ್ ಪಥಗಳ ಪ್ರಚಾರ ಮತ್ತು ಸೈಕ್ಲಿಂಗ್‌ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಸಾರ್ವಜನಿಕರಿಗೆ ಸಾರಿಗೆ ಸೌಲಭ್ಯ, ಕಚೇರಿ ಮತ್ತು ಕಂಪನಿಗಳಿಗೆ ಬಸ್‌ ಮತ್ತು ಕ್ಯಾಬ್ ಸೌಲಭ್ಯ ಒದಗಿಸಬೇಕು. ಅಪಾರ್ಟ್‌ಮೆಂಟ್‌ಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಜಾರಿಗೊಳಿಸಬೇಕು. ಪ್ರತಿ ಫ್ಲ್ಯಾಟ್‌ಗೆ ಒಂದು ಮರ ಹಾಗೂ ವಿಲ್ಲಾಗೆ ಐದು ಮರಗಳನ್ನು ಬೆಳೆಸಬೇಕು’ ಎಂದು ಸಲಹೆ ನೀಡಿದರು.

ಪ್ರತಿಭಟನೆಯಲ್ಲಿ ನಟ ಪ್ರಕಾಶ್ ಬೆಳವಾಡಿ, ಸಾರ್ವಜನಿಕ ಸಾರಿಗೆಯ ಪ್ರಚಾರಕ ರಾಜ್‌ಕುಮಾರ್ ದುಗರ್, ಬೆಂಗಳೂರಿನ ನಾಗರಿಕರ ಕಾರ್ಯಸೂಚಿಯ ಸಂದೀಪ್ ಅನಿರುದ್ಧನ್, ಸಿವಿಕ್ ಬೆಂಗಳೂರಿನ ಕಾತ್ಯಾಯಿನಿ ಚಾಮರಾಜ್, ಪ್ರಿಯಾ ಚೆಟ್ಟಿ ರಾಜಗೋಪಾಲ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.