ADVERTISEMENT

2,008 ಕಿ.ಮೀ ರಸ್ತೆ ಅಭಿವೃದ್ಧಿ, ₹4,808 ಕೋಟಿ ವೆಚ್ಚ: ತುಷಾರ್‌ ಗಿರಿನಾಥ್‌

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 16:21 IST
Last Updated 6 ಡಿಸೆಂಬರ್ 2025, 16:21 IST
   

ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ 2026ರ ಮೇ ಅಂತ್ಯಕ್ಕೆ ಎರಡು ಸಾವಿರಕ್ಕೂ ಹೆಚ್ಚು ಕಿ.ಮೀ ಉದ್ದದ ರಸ್ತೆಗಳು ಅತ್ಯುನ್ನತ ದರ್ಜೆಯಲ್ಲಿ ಅಭಿವೃದ್ಧಿಯಾಗಲಿವೆ.

ವೈಟ್‌ ಟಾಪಿಂಗ್‌, ಡಾಂಬರೀಕರಣ, ಹೈಡೆನ್ಸಿಟಿ ಕಾರಿಡಾರ್‌, ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ₹4 ಸಾವಿರಕ್ಕೂ ಹೆಚ್ಚು ಹಣ ವ್ಯಯಿಸಲಾಗುತ್ತಿದೆ. ಈ ಕಾಮಗಾರಿಗಳೆಲ್ಲ 2026ರ ಮೇ ಅಂತ್ಯಕ್ಕೆ ಮುಗಿಯಲಿವೆ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದರು.

₹1,700 ಕೋಟಿ ವೆಚ್ಚದಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿ ನಡೆಯುತ್ತಿದ್ದು, ಮಾರ್ಚ್‌ನೊಳಗೆ 157.39 ಕಿ.ಮೀ ರಸ್ತೆ ವೈಟ್‌ ಟಾಪಿಂಗ್‌ ಆಗಲಿದೆ. ₹694 ಕೋಟಿ ವೆಚ್ಚದಲ್ಲಿ 392.39 ಕಿ.ಮೀ ರಸ್ತೆಯನ್ನು 2026ರ ಜನವರಿ ಅಂತ್ಯಕ್ಕೆ ಡಾಂಬರೀಕರಣ ಮಾಡಲಾಗುತ್ತಿದೆ. ₹273 ಕೋಟಿ ವೆಚ್ಚದ 78.98 ಕಿ.ಮೀ ಹೈಡೆನ್ಸಿಟಿ ಕಾರಿಡಾರ್‌ ಕಾಮಗಾರಿಯೂ 2026 ಜನವರಿ ಅಂತ್ಯಕ್ಕೆ ಮುಗಿಯಲಿದೆ ಎಂದರು.

ADVERTISEMENT

701.12 ಕಿ.ಮೀ ಉದ್ದದ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳಿಗೆ ಬಿಟುಮಿನಸ್‌ ಕಾಂಕ್ರೀಟ್‌, ಚರಂಡಿ ಹೂಳು ತೆಗೆಯುವುದು, ಶೋಲ್ಡರ್‌ ಡ್ರೈನ್‌ ನಿರ್ಮಾಣ, ಪಾದಚಾರಿ ಮಾರ್ಗ ದುರಸ್ತಿ ಕಾಮಗಾರಿಗಳನ್ನು ₹1,241 ಕೋಟಿ ವೆಚ್ಚದಲ್ಲಿ 2026ರ ಮೇ ಅಂತ್ಯಕ್ಕೆ ಮುಗಿಸಲಾಗುವುದು ಎಂದು ತಿಳಿಸಿದರು.

678.93 ಕಿ.ಮೀ ಉದ್ದ ವಾರ್ಡ್‌ ರಸ್ತೆಗಳಿಗೆ ಬಿಟುಮಿನಸ್‌ ಕಾಂಕ್ರೀಟ್‌, ಚರಂಡಿ ಹೂಳು ತೆಗೆಯುವುದು, ಶೋಲ್ಡರ್‌ ಡ್ರೈನ್‌ ನಿರ್ಮಾಣ, ಪಾದಚಾರಿ ಮಾರ್ಗ ದುರಸ್ತಿ ಕಾಮಗಾರಿಗಳನ್ನು ₹900 ಕೋಟಿ ವೆಚ್ಚದಲ್ಲಿ 2026ರ ಮೇ ಅಂತ್ಯಕ್ಕೆ ಮುಗಿಸಲಾಗುವುದು ಎಂದರು.

ಎಂ.ಜಿ. ರಸ್ತೆಗೆ ವೈಟ್‌ಟಾಪಿಂಗ್ ಇಲ್ಲ: ಅತಿ ಹೆಚ್ಚು ವಾಹನ ಸಂಚಾರವಿರುವ ಎಂ.ಜಿ.ರಸ್ತೆಯನ್ನು ವೈಟ್‌ಟಾಪಿಂಗ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದಕ್ಕೆ ತೀರ್ಮಾನಿಸಲಾಗಿತ್ತು. ಆದರೆ, ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ಸಂಚಾರ ಪೊಲೀಸರು ಅವಕಾಶ ನೀಡುತ್ತಿಲ್ಲ. ಹೀಗಾಗಿ, ಡಾಂಬರೀಕರಣ ಮಾಡುವುದಕ್ಕೆ ಚಿಂತನೆ ನಡೆಸಲಾಗಿದೆ ಎಂದು ತುಷಾರ್‌ ಗಿರಿನಾಥ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.