ಬೆಂಗಳೂರು: ನಗರದಲ್ಲಿ 2008ರಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟ ಸಂಬಂಧ ಬಂಧಿಸಲಾಗಿರುವ ಆರೋಪಿ ಶೋಯಬ್‌ನನ್ನು ಸಿಸಿಬಿ ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದು, ಆತ ಕೃತ್ಯದಲ್ಲಿ ಭಾಗಿಯಾಗಲು ಕಾರಣವೇನು ಎಂಬುದನ್ನು ತಿಳಿದುಕೊಳ್ಳುತ್ತಿದ್ದಾರೆ.
ಕೃತ್ಯದ ನಂತರ ತಲೆಮರೆಸಿಕೊಂಡು ದುಬೈನಲ್ಲಿ ನೆಲೆಸಿದ್ದ ಶೋಯಬ್, ಕೇರಳದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಆತನನ್ನು ಸಿಸಿಬಿ ಪೊಲೀಸರು ನಗರದ ಅಜ್ಞಾತ ಸ್ಥಳದಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ.
‘ಬಾಂಬ್ ಸ್ಫೋಟಿಸಲು ಸ್ಥಳ ಗುರುತಿಸುವಲ್ಲಿ ಶೋಯಬ್ ಪ್ರಮುಖ ಪಾತ್ರ ವಹಿಸಿದ್ದ. ಸ್ಫೋಟಕ್ಕೂ ವಾರದ ಮುನ್ನವೇ ಇತರೆ ಆರೋಪಿಗಳ ಜೊತೆ ನಗರಕ್ಕೆ ಬಂದಿದ್ದ ಆತ, ಸ್ಥಳ ಗುರುತಿಸಿ ವಾಪಸು ಹೋಗಿದ್ದ. ಸ್ಫೋಟದ ದಿನವೇ ನಗರಕ್ಕೆ ಆತ ಬಂದಿದ್ದ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
‘ಶೋಯಬ್‌ನ ಪೋಷಕರು ಕೇರಳದ ಕಣ್ಣೂರಿನಲ್ಲಿದ್ದಾರೆ. ದ್ವಿತೀಯ ಪಿಯುಸಿ ಓದಿದ್ದ ಆತ, ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸಿ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ. ಅದೇ ಸಂದರ್ಭದಲ್ಲೇ ಆತನಿಗೆ ಕೆಲ ಯುವಕರ ಸ್ನೇಹ ಬೆಳೆದಿತ್ತು. ಅವರ ಜೊತೆಯಲ್ಲಿ ಆತ ಹೆಚ್ಚು ಓಡಾಡಲಾರಂಭಿಸಿದ್ದ. ಆ ಮೂಲಕ ಧಾರ್ಮಿಕವಾಗಿ ಆಕರ್ಷಿತಗೊಂಡಿದ್ದ. ಸ್ಥಳೀಯ ಧಾರ್ಮಿಕ ಪ್ರಾರ್ಥನಾ ಸ್ಥಳವೊಂದಕ್ಕೆ ನಿತ್ಯವೂ ಹೋಗುತ್ತಿದ್ದ ಆತ, ಅಲ್ಲಿಯ ಪ್ರವಚನಗಳನ್ನು ಕೇಳಿ ಪ್ರಚೋದನೆಗೊಂಡಿದ್ದ.’
‘ಧಾರ್ಮಿಕ ಸಂಘಟನೆಗೆ ಮುಂದಾಗಿದ್ದ ಆತ, ಕೇರಳದ ಸಂಘಟನೆಯೊಂದಕ್ಕೆ ಸೇರಿದ್ದ. ಅದರ ಮೂಲಕ ಹಲವು ಹೋರಾಟಗಳಲ್ಲಿ ಪಾಲ್ಗೊಂಡಿದ್ದ. ನಂತರ ಬಾಂಬ್ ಸ್ಫೋಟದ ಸಂಚಿನಲ್ಲಿ ಭಾಗಿಯಾಗಿದ್ದ’ ಎಂದೂ ಮೂಲಗಳು ತಿಳಿಸಿವೆ.
ಉಳಿದ ಆರೋಪಿಗಳು ನಾಪತ್ತೆ: ಸರಣಿ ಬಾಂಬ್ ಸ್ಫೋಟದಲ್ಲಿ 40ಕ್ಕೂ ಹೆಚ್ಚು ಆರೋಪಿಗಳು ಭಾಗಿಯಾಗಿದ್ದ ಮಾಹಿತಿ ಇದೆ. ಶೋಯಬ್ ಸೇರಿದಂತೆ 21 ಮಂದಿಯನ್ನಷ್ಟೇ ಬಂಧಿಸಲಾಗಿದೆ. ನಾಲ್ವರು ಆರೋಪಿಗಳು ತೀರಿಕೊಂಡಿದ್ದಾರೆ. ಉಳಿದ ಆರೋಪಿಗಳು ನಾಪತ್ತೆಯಾಗಿದ್ದು, ಅವರ ಪತ್ತೆಗೂ ಸಿಸಿಬಿ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.