
ಬೆಂಗಳೂರು: ರಾಮನಾರಾಯಣ ಚೆಲ್ಲಾರಾಂ (ಆರ್.ಸಿ) ಕಾಲೇಜು ಮತ್ತು ಸರ್ಕಾರಿ ಕಲಾ ಕಾಲೇಜುಗಳನ್ನು ಬೆಂಗಳೂರು ನಗರ ವಿ.ವಿಯ ಘಟಕಕ್ಕೆ ಸೇರಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿ ಎಐಡಿಎಸ್‌ಒ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬುಧವಾರ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯಿತು.
ಸಮಿತಿಯ ಜಿಲ್ಲಾ ಅಧ್ಯಕ್ಷೆ ಅಪೂರ್ವ ಮಾತನಾಡಿ, ‘ರಾಜ್ಯ ಸರ್ಕಾರ ಬಡ ವಿದ್ಯಾರ್ಥಿಗಳ ವಿರೋಧಿಯಾಗಿದೆ. ಒಂದರ ಮೇಲೊಂದು ಶಿಕ್ಷಣ ವಿರೋಧಿ ನೀತಿಗಳನ್ನು ಜಾರಿ ಮಾಡುತ್ತಾ ರೈತರು ಹಾಗೂ ಕಾರ್ಮಿಕರ ಮಕ್ಕಳನ್ನು ಶಿಕ್ಷಣ ವಲಯದಿಂದ ದೂರವಿಡುತ್ತಿದೆ’ ಎಂದು ಆಕ್ರೋಶ ಹೊರಹಾಕಿದರು.
‘ಸರ್ಕಾರಿ ಆರ್.ಸಿ ಹಾಗೂ ಸರ್ಕಾರಿ ಕಲಾ ಕಾಲೇಜುಗಳು ಸರ್ಕಾರಿ ಕಾಲೇಜುಗಳಾಗಿಯೇ ಉಳಿಯಬೇಕೆಂದು ಕಳೆದ ವರ್ಷದಿಂದ ಪ್ರತಿಭಟನೆಗಳು ನಡೆಯುತ್ತಾ ಬಂದಿವೆ. ಆದರೂ, ಸರ್ಕಾರದಲ್ಲಿನ ಕೆಲವು ಶಕ್ತಿಗಳು ಇದೇ ಕಾಲೇಜುಗಳ ಒಳಗೆ ಇದ್ದು, ಈ ಕಾಲೇಜುಗಳನ್ನು ಘಟಕ ಕಾಲೇಜುಗಳನ್ನಾಗಿ ಮಾಡಲು ಸರ್ವಪ್ರಯತ್ನ ಮಾಡುತ್ತಿವೆ. ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.
ಜಿಲ್ಲಾ ಕಾರ್ಯದರ್ಶಿ ಕಲ್ಯಾಣ್ ಕುಮಾರ್, ‘ಘಟಕ ಕಾಲೇಜುಗಳನ್ನಾಗಿ ಪರಿವರ್ತಿಸುವುದು ಖಂಡನೀಯ. ಕೇವಲ ಆರು ತಿಂಗಳ ಹಿಂದೆಯಷ್ಟೇ ಹೋರಾಟಕ್ಕೆ ಮಣಿದು ನಿಲುವಿನಿಂದ ಹಿಂದೆ ಸರಿದಿದ್ದ ಸರ್ಕಾರ ಈಗ ಮತ್ತೆ ಅದೇ ಯೋಜನೆಯನ್ನು ಜಾರಿಗೆ ತರುತ್ತಿರುವುದು ವಿದ್ಯಾರ್ಥಿ ಸಮುದಾಯದ ಬೆನ್ನಿಗೆ ಚೂರಿ ಹಾಕಿದಂತಾಗಿದೆ’ ಎಂದು ಆಕ್ರೋಶ ಹೊರಹಾಕಿದರು.
ಪ್ರತಿಭಟನೆಯಲ್ಲಿ ನವಾಜ್, ಕಿರಣ್, ರೋಹಿತ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.