ಬೆಂಗಳೂರು: ನಗರದಲ್ಲಿ ಶೌಚಗುಂಡಿ(ಮ್ಯಾನ್‌ಹೋಲ್) ಸ್ವಚ್ಛಗೊಳಿಸಲು ರೊಬೊಟಿಕ್ ತಂತ್ರಜ್ಞಾನವನ್ನು ಬಳಸಲು ಬೆಂಗಳೂರು ಜಲಮಂಡಳಿ ನಿರ್ಧರಿಸಿದೆ.
ಶೌಚಗುಂಡಿ ಸ್ವಚ್ಛಗೊಳಿಸುವ ಪ್ರಕ್ರಿಯೆಯಲ್ಲಿ ಸಾಧ್ಯವಾದಷ್ಟೂ ಮಾನವ ಹಸ್ತಕ್ಷೇಪವನ್ನು ಕಡಿಮೆ ಮಾಡುವುದಕ್ಕಾಗಿ ಈ ಯಂತ್ರಗಳ ಬಳಕೆಗೆ ಮುಂದಾಗಿದೆ.
ರೊಬೊಟಿಕ್ ತಂತ್ರಜ್ಞಾನ ಅಳವಡಿಕೆಗೆ ಮಿನಿ ರೊಬೊಗಳನ್ನು ಖರೀದಿಸಬೇಕಾಗುತ್ತದೆ. ಇದು ಜಲಮಂಡಳಿಗೆ ತುಸು ‘ಹೊರೆ’ಯಾಗುವ ಕಾರಣ, ರೊಬೊಟಿಕ್ ತಂತ್ರಜ್ಞಾನದ ಸೇವೆ ನೀಡುವ ಕಂಪನಿಗಳ ಮೊರೆ ಹೋಗಲು ತೀರ್ಮಾನಿಸಿದೆ. ಈ ಸಂಬಂಧ ಶೀಘ್ರದಲ್ಲೇ ಟೆಂಡರ್ ಕರೆಯುವ ನಿರೀಕ್ಷೆ ಇದೆ.
‘ಈಗಾಗಲೇ ಕೆಲವು ನಗರಗಳಲ್ಲಿ ಶೌಚಗುಂಡಿಗಳನ್ನು ಸ್ವಚ್ಛಗೊಳಿಸಲು ಈ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ರೊಬೊಟಿಕ್ ಯಂತ್ರ ಖರೀದಿ ಜಲಮಂಡಳಿಗೆ ಆರ್ಥಿಕವಾಗಿ ಹೊರೆಯಾಗುತ್ತದೆ. ಹಾಗೆಯೇ, ಈ ಯಂತ್ರ ಬಳಕೆಗೆ ನಮ್ಮ ಸಿಬ್ಬಂದಿ ಇನ್ನೂ ತಯಾರಾಗಬೇಕಿದೆ. ಹೀಗಾಗಿ ರೊಬೊಟಿಕ್ ತಂತ್ರಜ್ಞಾನ ಸೇವೆ ನೀಡುವ ಕಂಪನಿಗಳ ಸೇವೆಯನ್ನು ಬಳಸಿಕೊಳ್ಳಲು ಯೋಚಿಸಿದ್ದೇವೆ ’ ಎಂದು ಜಲಮಂಡಳಿಯ ಅಧ್ಯಕ್ಷ ರಾಮ್‌ಪ್ರಸಾತ್ ಮನೋಹರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ರೊಬೊಟಿಕ್ ಯಂತ್ರಗಳ ಬಳಕೆಯು ಸುರಕ್ಷಿತವಾಗಿರುವುದರ ಜೊತೆಗೆ, ಜೆಟ್ಟಿಂಗ್ ಯಂತ್ರಗಳು ಸ್ವಚ್ಛಗೊಳಿಸಲು ಸಾಧ್ಯವಾಗದ (ಕಿರಿದಾದ) ಜಾಗಗಳನ್ನೂ ಇವು ಸ್ವಚ್ಛಗೊಳಿಸುತ್ತವೆ. ರೊಬೊಟಿಕ್ ಯಂತ್ರಗಳನ್ನು 25 ಮೀಟರ್ ದೂರದಿಂದಲೇ ನಿರ್ವಹಣೆ ಮಾಡಬಹುದು’ ಎಂದು ಮನೋಹರ್ ವಿವರಿಸಿದರು.
ಸದ್ಯ ಶೌಚಗುಂಡಿಗಳನ್ನು ಸ್ವಚ್ಛಗೊಳಿಸಲು 169 ಒಳಚರಂಡಿ ಜೆಟ್ಟಿಂಗ್ ಯಂತ್ರಗಳು ಮತ್ತು ಆರು ಸೂಪರ್ ಸಕ್ಕಿಂಗ್ ಯಂತ್ರಗಳನ್ನು ಜಲಮಂಡಳಿ ಬಳಸುತ್ತಿದೆ. ಇದಲ್ಲದೇ, 1,500 ಕಬ್ಬಿಣದ ಹಾಗೂ ಬಿಗಿಯಾದ ಮ್ಯಾನ್‌ಹೋಲ್ ಮುಚ್ಚಳಗಳನ್ನು (ಡಕ್ಟೈಲ್ ಐರನ್ ಪ್ರೆಷರ್) ಖರೀದಿಸಿದೆ. ಇದು ಮ್ಯಾನ್‌ಹೋಲ್‌ಗಳು ಭರ್ತಿಯಾಗಿ ರಸ್ತೆಗಳಲ್ಲಿ ಕೊಳಚೆ ನೀರು ಹರಿಯುವುದನ್ನು ತಡೆಯುತ್ತದೆ ಎಂದು ಜಲಮಂಡಳಿ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.