ADVERTISEMENT

ಸುರಂಗ ರಸ್ತೆ | ಲಾಲ್‌ಬಾಗ್‌ ಬಳಿ ಸರಿಯಾದ ಅಧ್ಯಯನ ಆಗಿಲ್ಲ: ತಜ್ಞರ ಸಮಿತಿ

121 ನ್ಯೂನತೆ ಪತ್ತೆಹಚ್ಚಿದ ತಜ್ಞರ ಸಮಿತಿ

ನವೀನ್‌ ಮಿನೇಜಸ್‌
Published 14 ಅಕ್ಟೋಬರ್ 2025, 0:02 IST
Last Updated 14 ಅಕ್ಟೋಬರ್ 2025, 0:02 IST
<div class="paragraphs"><p>ಲಾಲ್‌ಬಾಗ್‌ </p></div>

ಲಾಲ್‌ಬಾಗ್‌

   

ಬೆಂಗಳೂರು: ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ನಿಂದ ಹೆಬ್ಬಾಳದವರೆಗಿನ 16.5 ಕಿ.ಮೀ ಸುರಂಗ ರಸ್ತೆ ಅನುಷ್ಠಾನದಲ್ಲಿ ಅನಿಶ್ಚಿತತೆ ಕಂಡುಬಂದಿದೆ. ಸರ್ಕಾರವೇ ರಚಿಸಿರುವ ತಜ್ಞರ ಸಮಿತಿ ಯೋಜನೆಯಲ್ಲಿ 121 ನ್ಯೂನತೆಗಳನ್ನು ಗುರುತಿಸಿದೆ.

ಸುರಂಗ ರಸ್ತೆಯ ವಿಸ್ತೃತಾ ಯೋಜನಾ ವರದಿಯಲ್ಲಿ (ಡಿಪಿಆರ್‌) ತಜ್ಞರ ಸಮಿತಿ ಸಮಸ್ಯೆಗಳನ್ನು ಗುರುತಿಸಿರುವುದರಿಂದ ಸರ್ಕಾರ ಸುರಂಗ ರಸ್ತೆ ಯೋಜನೆ ಮುಂದುವರಿಸವ ಬಗ್ಗೆ ಮತ್ತೊಮ್ಮೆ ಆಲೋಚಿಸುವಂತಾಗಿದೆ.

ADVERTISEMENT

ಸುರಂಗ ರಸ್ತೆ ಯೋಜನೆಯನ್ನು ರೂಪಿಸಿರುವವರು, ತಜ್ಞರ ಸಮಿತಿಯ ಕಳವಳವನ್ನು ದೂರ ಮಾಡಿದ್ದೇವೆ ಎಂದು ಹೇಳಿದ್ದರೂ, ಎಲ್ಲ ನ್ಯೂನತೆಗೂ ಸರಿಯಾದ ವಿವರಣೆ ಸಿಕ್ಕಿಲ್ಲ. ಪ್ರಮುಖವಾಗಿ, ಲಾಲ್‌ಬಾಗ್‌ ಬಳಿ ಸುರಂಗ ರಸ್ತೆಯ ಪ್ರವೇಶ–ನಿರ್ಗಮನ ಸೌಲಭ್ಯವನ್ನು ಕಲ್ಪಿಸುವ ಪ್ರಸ್ತಾವದಲ್ಲಿ ಸಮಗ್ರ ಭೂತಾಂತ್ರಿಕ ಅಧ್ಯಯನಗಳಾಗಿಲ್ಲ ಎಂಬುದನ್ನು ತಜ್ಞರ ಸಮಿತಿ ಹೇಳಿದೆ.

ಯೋಜನೆ ಅನುಷ್ಠಾನವಾಗುವ ಶೇ 90ರಷ್ಟು ಪ್ರದೇಶದಲ್ಲಿ ಎಲ್ಲ ರೀತಿಯ ಸ್ವಾಧೀನ ಪ್ರಕ್ರಿಯೆಯನ್ನು ಮುಗಿಸಿರಬೇಕು. ಇದರಿಂದ ಸಮಯ ಹಾಗೂ ವೆಚ್ಚ ಹೆಚ್ಚಾಗುವುದನ್ನು ತಪ್ಪಿಸಬಹುದು ಎಂದು ತಜ್ಞರ ಸಮಿತಿ ಹೇಳಿದ್ದು, ಇದನ್ನು ಈವರೆಗೂ ಯೋಜನೆ ರೂಪಿಸಿದವರು ಪಾಲಿಸಿಲ್ಲ.

ಡಿಪಿಆರ್‌ನಲ್ಲಿ ಲೋಪ ಕಂಡಬಂದ ಸಂದರ್ಭದಲ್ಲಿ, ಬೆಂಗಳೂರು ಮೆಟ್ರೊ ರೈಲ್‌ ಕಾರ್ಪೊರೇಷನ್‌ ಲಿಮಿಟೆಡ್‌ನ (ಬಿಎಂಆರ್‌ಸಿಎಲ್‌) ಕಾರ್ಯಕಾರಿ ನಿರ್ದೇಶಕ (ಸಿವಿಲ್‌) ಎಸ್‌. ಹೆಗ್ಗರೆಡ್ಡಿ ನೇತೃತ್ವದಲ್ಲಿ  ಈ ವರ್ಷದ ಏಪ್ರಿಲ್‌ನಲ್ಲಿ ತಜ್ಞರ ಸಮಿತಿಯನ್ನು ಸರ್ಕಾರ ರಚಿಸಿತ್ತು. ಸುರಂಗ ರಸ್ತೆ ತಜ್ಞ ವಿನೋದ್‌ ಶುಲ್ಕ, ರಸ್ತೆ ಸುರಕ್ಷತೆ ತಜ್ಞ ಬಿ. ಅಶ್ವತ್ಥ್‌ ಕುಮಾರ್‌, ಲೋಕೋಪಯೋಗಿ ಇಲಾಖೆಯ ನಿವೃತ್ತ ಮುಖ್ಯ ಎಂಜಿನಿಯರ್‌ ಮಾಧವ ಅವರು ಸಮಿತಿ ಸದಸ್ಯರಾಗಿದ್ದಾರೆ.

ತಜ್ಞರ ಸಮಿತಿ 89 ಪುಟಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಡಿಪಿಆರ್‌ನಲ್ಲಿ 121 ನ್ಯೂನತೆಗಳನ್ನು 50 ಪುಟಗಳಲ್ಲಿ ವಿವರಿಸಿದೆ. ಪ್ರಮುಖವಾಗಿ, ಯೋಜನೆಯ ಪ್ರದೇಶ, ಅಲೈನ್‌ಮೆಂಟ್‌, ಭೂಲಭ್ಯತೆ, ಸಂಚಾರ, ಪ್ರವೇಶ–ನಿರ್ಗಮನ ಸ್ಥಳಗಳಲ್ಲಿ ಹಲವು ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ತಜ್ಞರ ಸಮಿತಿ ಕಂಡುಹಿಡಿದ ನ್ಯೂನತೆಗಳಲ್ಲಿ ಬಹುತೇಕ ಸಮಸ್ಯೆಗಳಿಗೆ ಬಿ–ಸ್ಮೈಲ್‌ ಪರಿಹಾರಗಳನ್ನು ನೀಡಿದೆಯಾದರೂ, ಭೂವೈಜ್ಞಾನಿಕ ಮತ್ತು ಭೂತಾಂತ್ರಿಕ ತಪಾಸಣೆಗಳನ್ನು ಡಿಪಿಆರ್‌ ತಯಾಸಿರುವ ಸಮಯದಲ್ಲಿ ನಡೆಸಿಲ್ಲ. ಇದು ಸಾಮಾನ್ಯ ಪ್ರಕ್ರಿಯೆಗೆ ವಿರುದ್ಧವಾಗಿದೆ. ಬೆಂಗಳೂರಿನಲ್ಲಿ ಮೆಟ್ರೊ ಸುರಂಗದ ಅನುಭವದ ಮೇಲೆ ಸುರಂಗ ರಸ್ತೆ ಯೋಜನೆ ಅನುಷ್ಠಾನದಲ್ಲಿ ಸಮಯ ಹೆಚ್ಚಾಗಲಿದೆ. ಸುರಂಗ ರಸ್ತೆ ಯೋಜನೆಯ ವೆಚ್ಚವೂ ಶೇ 10ರಿಂದ ಶೇ 15ರಷ್ಟು ಹೆಚ್ಚಾಗಲಿದೆ ಎಂದು ಸಮಿತಿ ತಿಳಿಸಿದೆ.

‘ಭೂತಾಂತ್ರಿಕ ಸಮೀಕ್ಷೆಯನ್ನು ನಾವೂ ನಡೆಸಿದ್ದೇವೆ. ಟೆಂಡರ್‌ ಪಡೆಯುವ ಗುತ್ತಿಗೆದಾರರು ಇದೇ ರೀತಿಯ ಸಮೀಕ್ಷೆಯನ್ನು ಕಾಮಗಾರಿ ಆರಂಭಕ್ಕೆ ಮುನ್ನ ನಡೆಸಬೇಕಾಗಿರುವುದು ಸಾಮಾನ್ಯ ಪ್ರಕ್ರಿಯೆ. ತಜ್ಞರ ಸಮಿತಿ ಕೇಳಿರುವ ಎಲ್ಲ ಪ್ರಶ್ನೆಗಳಿಗೂ ಸಮಂಜಸವಾಗಿ ಉತ್ತರ ನೀಡಲಾಗಿದೆ’ ಎಂದು ಬಿ–ಸ್ಮೈಲ್‌ನ ತಾಂತ್ರಿಕ ನಿರ್ದೇಶಕ ಬಿ.ಎಸ್‌. ಪ್ರಹ್ಲಾದ್ ತಿಳಿಸಿದರು.

‘ಸರ್ಕಾರ ಸುರಂಗ ರಸ್ತೆ ಯೋಜನೆಯನ್ನು ಕೈಬಿಡಬೇಕು. ಟೆಂಡರ್ ಆಹ್ವಾನಕ್ಕೂ ಮುನ್ನ ಅತ್ಯಂತ ಅಗತ್ಯವಾಗಿರುವ ಭೂವೈಜ್ಞಾನಿಕ ಅಧ್ಯಯನ ಮಾಡದಿರುವುದನ್ನು ಸರ್ಕಾರ ನಿರ್ಲಕ್ಷಿಸಬಾರದು’ ಎಂದು ತಜ್ಞರ ಸಮಿತಿ ವರದಿಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದಿರುವ ಪರಿಸರ ಕಾರ್ಯಕರ್ತ ಡಿ.ಟಿ. ದೇವರೆ ಹೇಳಿದರು.

ತಜ್ಞರ ಸಮಿತಿ ಗುರುತಿಸಿರುವ ಪ್ರಮುಖ ನ್ಯೂನತೆಗಳು

  • ಮೆಟ್ರೊ ಮಾರ್ಗಕ್ಕೆ ಪರ್ಯಾಯವಾಗಿರುವ ಸುರಂಗ ರಸ್ತೆಯ ಸಂಚಾರ ದಟ್ಟಣೆ ವೇಳೆ ಹೇಗಿರುತ್ತದೆ ಎಂಬ ದತ್ತಾಂಶ ಇಲ್ಲ

  • ಪ್ರವೇಶ ಮತ್ತು ನಿರ್ಗಮನ ರ‍್ಯಾಂಪ್‌ಗಳ ಸ್ಥಳವನ್ನು ಇನ್ನಷ್ಟು ವಿಸ್ತರಿಸದಿದ್ದರೆ ವಾಹನ ದಟ್ಟಣೆ ಉಂಟಾಗುತ್ತದೆ

  • ಹೆಬ್ಬಾಳ ಕೆರೆಯ ಕಾಲುವೆಯ ಮಾರ್ಗ ಬದಲಾಯಿಸುವುದರಿಂದ ವಿಮಾನ ನಿಲ್ದಾಣದ ರಸ್ತೆಯಲ್ಲಿ ಅಡಚಣೆ ಉಂಟಾಗುತ್ತದೆ

  • ಅಂತರ್ಜಲ ಸೇರಿದಂತೆ ಪರಿಸರದ ಮೇಲಾಗುವ ಪರಿಣಾಮದ ಮಾಹಿತಿ ಲಭ್ಯವಿಲ್ಲ

  • ಭೂಸ್ವಾಧೀನ, ಸೌಲಭ್ಯ ವರ್ಗಾವಣೆ, ಉಪಕರಣ, ಶುಲ್ಕ ಸಂಗ್ರಹ ವ್ಯವಸ್ಥೆ ಇತ್ಯಾದಿಗೆ ಒಟ್ಟಾರೆ ತಗಲುವ ವೆಚ್ಚವನ್ನು ಅಂದಾಜಿಸಿ, ಒದಗಿಸುವುದು ಸಾಮಾನ್ಯ ಪ್ರಕ್ರಿಯೆಗೆ ವಿರುದ್ಧವಾಗಿದೆ

  • ಸುರಂಗ ರಸ್ತೆಯಲ್ಲಿ ಮುಂದಿನ 25 ವರ್ಷಗಳಲ್ಲಿನ ಸಂಚಾರದ ದೂರದೃಷ್ಟಿ ಇಟ್ಟುಕೊಂಡು ಪಥಗಳ ಸಂಖ್ಯೆಯನ್ನು ನಿರ್ಧರಿಸಬೇಕು. ಸಂಚಾರ ದತ್ತಾಂಶದ ಪ್ರಕಾರ, 2041ರ ವೇಳೆಗೆ 2+2 ಪಥಗಳ ಅಗತ್ಯವಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.