ADVERTISEMENT

ಬೆಂಗಳೂರು VV ಗ್ರಂಥಾಲಯ ವಿಭಾಗ: ಸಂಶೋಧನಾರ್ಥಿಗಳಿಗೆ, ಅಧ್ಯಾಪಕರಿಗೆ ‘ಇ–ಸಂಪನ್ಮೂಲ’

ಗಾಣಧಾಳು ಶ್ರೀಕಂಠ
Published 29 ಜುಲೈ 2025, 23:15 IST
Last Updated 29 ಜುಲೈ 2025, 23:15 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಎ.ಐ ಚಿತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ, ಡಾ.ಬಿ.ಆರ್‌. ಅಂಬೇಡ್ಕರ್‌ ಕೇಂದ್ರ ಗ್ರಂಥಾಲಯದ ಮೂಲಕ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ 'ಇ- ಸಂಪನ್ಮೂಲ'ಗಳ ಮೂಲಕ ಉಚಿತವಾಗಿ ಗುಣಮಟ್ಟದ ಆಕರ ಗ್ರಂಥಗಳನ್ನು ಪೂರೈಸಲು ಆರಂಭಿಸಿದೆ.

ADVERTISEMENT

ವಿಶ್ವವಿದ್ಯಾಲಯದ ಸಂಶೋಧನೆ ಮತ್ತು ಅಧ್ಯಯನಕ್ಕೆ ಡಿಜಿಟಲ್ ಶಕ್ತಿ ತುಂಬುವುದು ಹಾಗೂ ಸಂಶೋಧನಾ ವಿದ್ಯಾರ್ಥಿಗಳು, ಅಧ್ಯಾಪಕರಿಗೆ ಮತ್ತು ಅತಿಥಿ ಉಪನ್ಯಾಸಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಡಿಜಿಟಲ್‌ ಅಥವಾ ಎಲೆಕ್ಟ್ರಾನಿಕ್‌ ಸಂಪನ್ಮೂಲಗಳನ್ನು  ದೊರೆಯುವಂತೆ ಮಾಡುವುದು, ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವೆ ಇರುವ ಶೈಕ್ಷಣಿಕ ಅಂತರವನ್ನು ಕಡಿಮೆ ಮಾಡುವುದು ಈ ಯೋಜನೆಯ ಉದ್ದೇಶ.

ಏನೇನಿವೆ ‘ಸಂಪನ್ಮೂಲಗಳು’?

‘ಇ–ಸಂಪನ್ಮೂಲ’ದಲ್ಲಿ ಸಮಾಜ ವಿಜ್ಞಾನ, ಮಾನವಿಕ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಡಿಜಿಟಲ್‌ ಸಂಪನ್ಮೂಲಗಳಿವೆ. ‘ಸ್ಪ್ರಿಂಗರ್‌ ನೇಚರ್’, ‘ಟೇಲರ್‌ ಆ್ಯಂಡ್ ಫ್ರಾನ್ಸಿಸ್‌’, ‘ಪಿಯರ್‌ಸನ್‌’, ‘ಮ್ಯಾಕ್‌ಗ್ರಾ ಹಿಲ್‌ ’ನಂತಹ ಅಂತರರಾಷ್ಟ್ರೀಯ ಪ್ರಕಾಶಕರ 50 ಸಾವಿರಕ್ಕೂ ಹೆಚ್ಚು ಇ–ಪುಸ್ತಕಗಳಿವೆ. ವ್ಯಾಕರಣ ಕಲಿಕೆ, ವಿಶ್ವಾಸಾರ್ಹ ದತ್ತಾಂಶ, ಆರ್ಥಿಕತೆ ಮತ್ತು ಹಣಕಾಸು ಸಂಶೋಧನೆಗೆ ಅಗತ್ಯವಿರುವ ದತ್ತಾಂಶಗಳನ್ನು ನೀಡುವ ಪರಿಕರಗಳೂ ಲಭ್ಯವಿವೆ’ ಎಂದು ಯೋಜನೆಯ ರೂವಾರಿ ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಕೇಂದ್ರ ಗ್ರಂಥಾಲಯದ ಗ್ರಂಥಪಾಲಕ ಎಂ.ರಘುನಂದನ್ ‘ಪ್ರಜಾವಾಣಿ’ಗೆ ವಿವರಿಸಿದರು.

ಕೇಂದ್ರ ಸರ್ಕಾರದ ‘ಒನ್ ನೇಷನ್ ಒನ್ ಸಬ್‌ಸ್ಕ್ರಿಪ್ಷನ್’ (ಒಎನ್‌ಒಎಸ್‌) ಯೋಜನೆಯಡಿ, 13,236 ಅಂತರರಾಷ್ಟ್ರೀಯ ಇ-ಜರ್ನಲ್‌ಗಳು ಮತ್ತು 30 ಪ್ರಮುಖ ಪತ್ರಿಕೆಗಳ ಪ್ರಕಾಶಕರಿಂದ ಪರವಾನಗಿ ಪಡೆದುಕೊಂಡಿದೆ. ಈ ಸೌಲಭ್ಯವನ್ನು ವಿಶ್ವವಿದ್ಯಾಲಯಕ್ಕೆ ಸೇರಿರುವ ಸುಮಾರು 300 ಅನುಬಂಧಿತ ಕಾಲೇಜುಗಳಿಗೂ ಉಚಿತವಾಗಿ ಲಭ್ಯವಿರುವಂತೆ ಮಾಡಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

‘ಇ–ಸಂಪನ್ಮೂಲ’ ಪ್ರವೇಶ 

‘ಪುಸ್ತಕಗಳನ್ನು ಬಳಸುವ ಪರವಾನಗಿ ಮತ್ತು ನಿಯತಕಾಲಿಕೆಗಳ ಚಂದಾದಾರಿಕೆಯನ್ನು ವಿಶ್ವವಿದ್ಯಾಲಯ ಪಡೆದುಕೊಂಡು, ಬಳಕೆಗಾಗಿರುವ ಕೋಡ್‌ (ಐಪಿ) ಗಳನ್ನು ಸಂಶೋಧನಾ ವಿದ್ಯಾರ್ಥಿಗಳು, ಅಧ್ಯಾಪಕರಿಗೆ ನೀಡಲಾಗುತ್ತದೆ. ಆ ಕೋಡ್‌ ಬಳಸಿ ಎಲ್ಲ ಆಕರ ಗ್ರಂಥಗಳನ್ನು ಓದಬಹುದು. ‘ಇ–ಸಂಪನ್ಮೂಲ’ಗಳಿಗಾಗಿಯೇ ಗ್ರಂಥಾಲಯ ವಿಭಾಗವು ಪ್ರತ್ಯೇಕ ಜಾಲತಾಣವನ್ನು ಆರಂಭಿಸಿದೆ. ಇತ್ತೀಚೆಗೆ ‘ಇ–ಸಂಪನ್ಮೂಲ’ ಬಳಕೆಯ ಪುನರ್‌ ಮನನ ಕಾರ್ಯಾಗಾರದಲ್ಲಿ ಈ ಜಾಲತಾಣವನ್ನು ಉದ್ಘಾಟಿಸಲಾಗಿದೆ’ ಎಂದು ರಘನಂದನ್ ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಂಥ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕಾಗಿ ಆಕರ ಗ್ರಂಥಗಳು ಸಿಗುವುದು ಕಷ್ಟ. ಹೀಗಾಗಿ, ಇ–ಸಂಪನ್ಮೂಲದ ಮೂಲಕ ಗುಣಮಟ್ಟದ ಕೃತಿಗಳು, ನಿಯತಕಾಲಿಕೆಗಳು ಅವರಿಗೆ ಸುಲಭವಾಗಿ ಸಿಗುತ್ತವೆ. ಪ್ರಸ್ತುತ, ವಿಶ್ವವಿದ್ಯಾಲಯದ 1,500 ವಿದ್ಯಾರ್ಥಿಗಳು ಹಾಗೂ 500 ಅಧ್ಯಾಪಕರಿಗೆ ಈ ಸೌಲಭ್ಯವನ್ನು ಬಳಸಿಕೊಳ್ಳಲಿದ್ದಾರೆ’ ಎಂದು ಅವರು ವಿವರಿಸಿದರು.

ಡಿಜಿಟಲ್ ಪರಿಕರ ‘ಇ–ಸಂಪನ್ಮೂಲ‘ ವಿರುವ ಜಾಲತಾಣದಿಂದ ಸಂಶೋಧನಾ ಪ್ರಬಂಧ ಮತ್ತು ಲೇಖನ ತಯಾರಿಕೆಗಾಗಿ ಬೆರಳ ತುದಿಯಲ್ಲೇ ಭರಪೂರ ಮಾಹಿತಿ ಲಭ್ಯವಾಗುತ್ತಿದೆ.
ಸತೀಶ್ ಕೆ.ಆರ್. ಸಂಶೋಧನಾ ವಿದ್ಯಾರ್ಥಿ ಬೆಂವಿವಿ
‘ಇ - ಸಂಪನ್ಮೂಲ’ಗಳಿಂದ ಆಳವಾದ ಮತ್ತು ಸುಧೀರ್ಘ ಅಧ್ಯಯನಕ್ಕೆ ಅನುಕೂಲವಾಗುತ್ತಿದೆ. ಸ್ವ ಕಲಿಕೆಗೆ ಮತ್ತು ಬೋಧನೆಗೂ ಸಹಾಯಕವಾಗುತ್ತಿದೆ.
ಸಿ.ಎಸ್.ಗೀತಾ ಅತಿಥಿ ಉಪನ್ಯಾಸಕಿ ಬೆಂವಿವಿ
‘ಇ–ಸಂಪನ್ಮೂಲ’ ಜಾಲತಾಣ ಶುರುವಾಗಿ ಒಂದು ತಿಂಗಳಾಗಿದೆ. ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನಷ್ಟು ಉನ್ನತೀಕರಿಸುವ ಪ್ರಯತ್ನ ಮಾಡಲಾಗುತ್ತಿದೆ.
ಜಯಕರ ಎಂ.ಎಸ್. ಕುಲಪತಿ ಬೆಂಗಳೂರು ವಿಶ್ವವಿದ್ಯಾಲಯ

‘ಪೇಟೆಂಟ್‌’ ಅಧ್ಯಯನಕ್ಕೆ ಅನುಕೂಲ

ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಲ್ಲಿ ಹಲವರು ‘ಬೌದ್ಧಿಕ ಆಸ್ತಿ ಹಕ್ಕು(ಪೇಟೆಂಟ್‌)’ಗಳಿಗೆ ಸಂಬಂಧಿಸಿದಂತೆ ಅಧ್ಯಯನ ಮಾಡುತ್ತಿದ್ದಾರೆ. ಅಂಥವರಿಗೆ ‘ಇ–ಸಂಪನ್ಮೂಲ’ ತುಂಬಾ ಸಹಾಯವಾಗುತ್ತದೆ. ಶಿಕ್ಷಕರಿಗಿಂತ ಉದಯೋನ್ಮುಖ ಸಂಶೋಧಕರಿಗೆ(ಸ್ಕಾಲರ್ಸ್‌) ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ ಎಂದು ರಘುನಂದನ್ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.