ADVERTISEMENT

ಗದ್ದಲದಲ್ಲಿ ಕಳೆದು ಹೋಯ್ತು ಜಿಲ್ಲಾ ಪಂಚಾಯಿತಿ ‘ಸಾಮಾನ್ಯ ಸಭೆ’

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 20:15 IST
Last Updated 31 ಆಗಸ್ಟ್ 2018, 20:15 IST
ಅಧ್ಯಕ್ಷ ಸಿ. ಮುನಿರಾಜು ಮಾತನಾಡಿದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ಅರ್ಚನಾ ಇದ್ದರು –ಪ್ರಜಾವಾಣಿ ಚಿತ್ರ
ಅಧ್ಯಕ್ಷ ಸಿ. ಮುನಿರಾಜು ಮಾತನಾಡಿದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ಅರ್ಚನಾ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಯಾವೊಂದು ವಿಷಯದ ಬಗ್ಗೆಯೂ ಗಂಭೀರ ಚರ್ಚೆ ನಡೆಯದೆ, ಕೇವಲ ಸದಸ್ಯರ ಗದ್ದಲದಲ್ಲಿಯೇ ಕಳೆದು ಹೋಯ್ತು ಶುಕ್ರವಾರ ನಡೆದ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಸಭೆ.

ಕೃಷಿ ಇಲಾಖೆಯಲ್ಲಿ ನಡೆದ ಅವ್ಯವಹಾರ, ಸರ್ಕಾರಿ ಶಾಲೆಯಲ್ಲಿ ಶಾಸಕರೊಬ್ಬರ ಭಾವಚಿತ್ರ ಹಾಕಿರುವುದು, ಅರಣ್ಯ ಇಲಾಖೆಯಲ್ಲಿನ ಕರ್ತವ್ಯ ಲೋಪ... ಹೀಗೆ ನಾನಾ ವಿಷಯಗಳ ಬಗ್ಗೆ ಚರ್ಚೆ ಪ್ರಾರಂಭಗೊಂಡವು. ಆದರೆ, ನಂತರ ಅವು ವಿಷಯಾಂತರಗೊಂಡು ಅಡ್ಡಾದಿಡ್ಡಿಯಾಗಿ ಸಾಗಿದವು.

ಕೃಷಿ ಇಲಾಖೆಯಲ್ಲಿ ಅವ್ಯವಹಾರ:ಕೃಷಿ ಇಲಾಖೆ ವಿವಿಧ ಯೋಜನೆಗಳ ಅಡಿ ನೀಡುವ ಯಂತ್ರೋಪಕರಣಗಳು ಸರಿಯಾದ ಫಲಾನುಭವಿಗಳಿಗೆ ಸಿಗುತ್ತಿಲ್ಲ, ಆ ಇಲಾಖೆಯಲ್ಲಿ ಅಕ್ರಮಗಳು ಹೆಚ್ಚಾಗಿವೆ ಎಂದು ಕೆಲವು ಸದಸ್ಯರು ಆರೋಪಿಸಿದರು.

ADVERTISEMENT

‘ಅಧಿಕಾರಿಗಳ ಮತ್ತು ಬ್ರೋಕರ್‌ಗಳ ಮಧ್ಯವಸ್ಥಿಕೆಯಲ್ಲಿಯೇ ಟರ್ಪಾಲಿನ್, ಪಂಪ್ ಸೆಟ್ ಸೇರಿ ವಿವಿಧ ಯಂತ್ರೋಪಕರಣಗಳನ್ನು ನೀಡಲಾಗುತ್ತಿದೆ. ಹೋಬಳಿಗೆ 15 ರೈತರಿದ್ದಾರೆ. ಐದು ವರ್ಷದಿಂದ ಅವರೇ ಎಲ್ಲಾ ಯಂತ್ರೋಪಕರಣಗಳನ್ನ ಪಡೆಯುತ್ತಿದ್ದಾರೆ. ಇದು ಸುಳ್ಳು ಎನ್ನುವುದಾದರೆ ಮೂರು ವರ್ಷದ ಫಲಾನುಭವಿಗಳ ಪಟ್ಟಿ ಕೊಡಿ’ ಎಂದು ಆಗ್ರಹಿಸಿದರು.

ಈ ಬಗ್ಗೆ ಉತ್ತರಿಸಿದ ಕೃಷಿ ಇಲಾಖೆಯ ಅಧಿಕಾರಿ ಗಿರೀಶ್‌, ‘ದಯವಿಟ್ಟು, ಹಾಗೆಲ್ಲ ಆರೋಪ ಮಾಡಬೇಡಿ ಸರ್. ಮನಸ್ಸಿಗೆ ನೋವಾಗುತ್ತದೆ. ಇನ್ನುಮುಂದೆ ಸದಸ್ಯರ ಪತ್ರವಿದ್ದವರಿಗೆ ಮಾತ್ರ ಯಂತ್ರೋಪಕರಣಗಳನ್ನು ನೀಡುತ್ತೇವೆ’ ಎಂದು ಉತ್ತರಿಸಿದರು.

ಪರವಾನಿಗೆ ಇಲ್ಲದ ಶಾಲೆಗಳ ವಿರುದ್ಧ ಕ್ರಮ: ಕೆಲ ಖಾಸಗಿ ಶಾಲೆಗಳು ಒಂದು ಶಾಲೆಗೆ ಅನುಮತಿ ಪಡೆದು 2–3 ಶಾಲೆಗಳನ್ನು ನಡೆಯುತ್ತಿದ್ದಾರೆ ಎಂದುಜಿಲ್ಲಾ ಪಂಚಾಯಿತಿ ಸದಸ್ಯ ಚೊಕ್ಕನಹಳ್ಳಿ ವೆಂಕಟೇಶ್ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಬೆಂಗಳೂರು ದಕ್ಷಿಣ ಜಿಲ್ಲೆಯ ಡಿಡಿಪಿಐ ರಾಜೇಂದ್ರ, ‘ಈ ರೀತಿಯ ಶಾಲೆಗಳನ್ನು ಪತ್ತೆ ಹಚ್ಚಿ, ಶೀಘ್ರ ಕ್ರಮ ಕೈಗೊಳ್ಳುತ್ತೇವೆ’ ಎಂದರು.
**
‘ಮಾತಾಡಬೇಡ್ರಿ ರಕ್ತಪಾತವಾಗುತ್ತೆ’
‘ಬೆಂಗಳೂರು ದಕ್ಷಿಣ ವಲಯದಲ್ಲಿನ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯದ್ವಾರದ ಕಮಾನಿನಲ್ಲಿ ಶಾಸಕ ಅರವಿಂದ ಲಿಂಬಾವಳಿ ಅವರ ಭಾವಚಿತ್ರವಿದೆ. ಅದು ನಿಯಮ ಬಾಹಿರವಾಗಿದೆ. 3 ತಿಂಗಳ ಹಿಂದೆಯೇ ಈ ಬಗ್ಗೆ ದೂರು ನೀಡಿದ್ದರೂ ಇನ್ನೂ ಕ್ರಮ ಕೈಗೊಂಡಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಪಿ.ಶೇಖರ್‌ ದೂರಿದರು.

‘ಬಿಇಒಗಳಿಗೆ ಕೇಳಿದರೆ, ಶಾಸಕರು ತೆಗೆಯಬೇಡಿ ಎಂದಿದ್ದಾರೆ. ಅವರು ಸರ್ಕಾರದ ಅಧಿಕಾರಿಗಳೋ ಅಥವಾ ಶಾಸಕರ ಅಧಿಕಾರಿಗಳೋ ಉತ್ತರ ನೀಡಿ’ ಎಂದು ಶೇಖರ್‌ ಪಟ್ಟು ಹಿಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮುನಿರಾಜು, ‘ಕಾನೂನಿನ ಪ್ರಕಾರ ಏನು ಕ್ರಮ ಕೈಗೊಳ್ಳಬೇಕೊ ಅದನ್ನು ಮಾಡುತ್ತಾರೆ. ರಾಜಕೀಯದ ಬಗ್ಗೆಯಲ್ಲ ಮಾತಾಡಬೇಡ್ರಿ, ರಕ್ತಪಾತವೇ ನಡೆಯುತ್ತದೆ’ ಎಂದು ಹೇಳಿದರು.
**
ಪ್ರತಿಸಭೆಗೂ ಹೊಸ ಅಧಿಕಾರಿಗಳು
ಜಿಲ್ಲಾ ಪಂಚಾಯಿತಿ ಸದಸ್ಯರು ಯಾವೊಂದು ವಿಷಯ ಪ್ರಸ್ತಾಪಿಸಿದರೂ ವಿವಿಧ ಇಲಾಖೆಯಿಂದ ಬಂದಿದ್ದ ಅಧಿಕಾರಿಗಳು ‘ಸರ್‌, ನಾನು ಇತ್ತೀಚೆಗಷ್ಟೇ ಇಲ್ಲಿಗೆ ಬಂದಿದ್ದೇನೆ. ತಿಳಿದುಕೊಂಡು ಹೇಳುತ್ತೇನೆ’ ಎನ್ನುವ ಉತ್ತರ ಬರುತ್ತಿತ್ತು.

ಇದರಿಂದ ಕೋಪಗೊಂಡ ಸದಸ್ಯ ಚೊಕ್ಕನಹಳ್ಳಿ ವೆಂಕಟೇಶ್‌, ‘ಪ್ರತಿ ಸಭೆಗೂ ಹೊಸ ಅಧಿಕಾರಿಗಳು ಬರುತ್ತಾರೆ. ನಗರ ಜಿಲ್ಲೆಯಲ್ಲಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳು ಎಷ್ಟಿವೆ ಎಂಬ ಮಾಹಿತಿ ಕೇಳಿದ ನಂತರ ಶಿಕ್ಷಣ ಇಲಾಖೆಯಲ್ಲಿ ಮೂರು ಡಿಡಿಪಿಐಗಳು ಬದಲಾಗಿದ್ದಾರೆ. ಇಬ್ಬರು ಸಿಇಒಗಳು ಬಂದಿದ್ದಾರೆ. ಮಾಹಿತಿ ಮಾತ್ರ ಸಿಗಲಿಲ್ಲ’ ಎಂದರು.
**
‘ಇದು ಮಾಡಿ ಅದಾಗುತ್ತದೆ’
‘ಇದನ್ನು ಮಾಡಿ, ಅದನ್ನು ಮಾಡಿಕೊಳ್ಳಿ, ಇದು ಮಾಡಿ ಅದಾಗುತ್ತದೆ...’ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಮುನಿರಾಜು ಅವರ ಬಹುತೇಕ ಮಾತುಗಳು ಹೀಗೆ ಇದ್ದವು. ಸದಸ್ಯರು ಕೇಳಿದ ಪ್ರಶ್ನೆಗಳಿಗೆಲ್ಲ ಅವರು ಉತ್ತರ ನೀಡುತ್ತಿದ್ದುದು ಈ ಧಾಟಿಯಲ್ಲಿಯೇ.

ಅವರ ಈ ಮಾತುಗಳನ್ನು ಕೇಳುತ್ತಿದ್ದ ಕೆಲ ಸದಸ್ಯರು ಮುಖ–ಮುಖ ನೋಡಿಕೊಂಡು ನಕ್ಕು ಸುಮ್ಮನಾಗುತ್ತಿದ್ದ ದೃಶ್ಯವೂ ಸಭೆಯಲ್ಲಿ ಕಂಡುಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.