ADVERTISEMENT

ಬೆಂಗಳೂರು | ಹಣ ಪಾವತಿಸಿದರೂ ಬಾರದ ‘ಕಾವೇರಿ’: ಒಳಚರಂಡಿಯೂ ಅವ್ಯವಸ್ಥೆ

ಹೊರಮಾವು ಸಮೀಪದ ಬಂಜಾರ ಬಡಾವಣೆ ನಿವಾಸಿಗಳ ಅಳಲು

ಗಾಣಧಾಳು ಶ್ರೀಕಂಠ
Published 8 ಮೇ 2025, 3:59 IST
Last Updated 8 ಮೇ 2025, 3:59 IST
<div class="paragraphs"><p>ಕಲ್ಕೆರೆ ರಸ್ತೆಯಲ್ಲಿ ಕೊಳವೆ ಒಡೆದು ನೀರು ಪೋಲಾಗುತ್ತಿರುವ ದೃಶ್ಯ</p></div>

ಕಲ್ಕೆರೆ ರಸ್ತೆಯಲ್ಲಿ ಕೊಳವೆ ಒಡೆದು ನೀರು ಪೋಲಾಗುತ್ತಿರುವ ದೃಶ್ಯ

   

ಬೆಂಗಳೂರು: ನಗರದ 110 ಹಳ್ಳಿಗಳ ವ್ಯಾಪ್ತಿಗೆ ಸೇರುವ ಹೊರಮಾವು ಕಲ್ಕೆರೆ ಬಳಿಯ ಬಂಜಾರ ಬಡಾವಣೆಯಲ್ಲಿ ಹಣ ಪಾವತಿಸಿದರೂ ಕೆಲವರಿಗೆ ಕಾವೇರಿ ನೀರು ಬರುತ್ತಿಲ್ಲ. ಬಡಾವಣೆಯಲ್ಲಿ ಒಳಚರಂಡಿ ವ್ಯವಸ್ಥೆಯೂ ಅಧ್ವಾನವಾಗಿದೆ ಎಂದು ಅಲ್ಲಿನ ನಿವಾಸಿಗಳು ದೂರುತ್ತಿದ್ದಾರೆ.

ಬೆಂಗಳೂರು ಪೂರ್ವ ತಾಲ್ಲೂಕು ವ್ಯಾಪ್ತಿಯ ಬಂಜಾರ ಬಡಾವಣೆಯಲ್ಲಿ (ಓಂಶಕ್ತಿ ದೇವಾಲಯದ ಸಮೀಪ) ಕಾವೇರಿ ನೀರು ಪೂರೈಕೆಗೆ ಕೊಳವೆ ಮಾರ್ಗ ಅಳವಡಿಸಿದ್ದಾರೆ. ಈ ಭಾಗದಲ್ಲಿ ಜಲಮಂಡಳಿ ಯವರು ಕಾವೇರಿ ಸಂಪರ್ಕ ಅಭಿಯಾನ ನಡೆಸಿದ ನಂತರ ನಿವಾಸಿಗಳು ಠೇವಣಿ ಪಾವತಿಸಿ ನೀರಿನ ಸಂಪರ್ಕ ಪಡೆದಿದ್ದಾರೆ. ಆದರೆ, ಈವರೆಗೂ ಹಲವು ಮನೆಗಳಿಗೆ ಸಮರ್ಪಕವಾಗಿ ನೀರು ಪೂರೈಕೆ ಯಾಗುತ್ತಿಲ್ಲ. ಎಂದಿನಂತೆ, ಟ್ಯಾಂಕರ್ ನೀರು ತರಿಸಿಕೊಳ್ಳುವುದು ತಪ್ಪಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ADVERTISEMENT

‘ಈ ಬಡಾವಣೆಯಲ್ಲಿ ನೀರು ಪೂರೈಕೆ ಸಮಸ್ಯೆ ಮಾತ್ರ ಇಲ್ಲ. ಒಳಚರಂಡಿ ವ್ಯವಸ್ಥೆಯದ್ದು ದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆಯಿಂದ ನಾವು ರೋಸಿ ಹೋಗಿದ್ದೇವೆ’ ಎಂದು ನಿವಾಸಿಗಳು ಹೇಳುತ್ತಾರೆ.

ಈ ಬಡಾವಣೆ ಹಿಂದೆ ಕಂದಾಯ ಬಡಾವಣೆ ಆಗಿದ್ದಾಗ ಎಲ್ಲರೂ ತಮ್ಮ ಮನೆಗಳ ಎದುರು ಶೌಚಗುಂಡಿ ಮಾಡಿಸಿಕೊಂಡಿದ್ದರು. ಆಗ ನಾಲ್ಕೈದು ವರ್ಷಗಳಿಗೊಮ್ಮೆ ಈ ಗುಂಡಿಗಳು ತುಂಬುತ್ತಿದ್ದವು. ಇತ್ತೀಚೆಗೆ ಒಳಚರಂಡಿ ಕಾಮಗಾರಿ ಕೈಗೊಂಡಾಗ, ಈ ಗುಂಡಿಗಳಿಗೆ ಹಾನಿಯಾಗಿದೆ. ಈಗ ಒಳಚರಂಡಿಯೂ ಸರಿ ಇಲ್ಲ, ಹಾನಿಯಾದ ಗುಂಡಿಗಳೂ ಬೇಗ ಬೇಗ ತುಂಬುತ್ತಿವೆ. ವಿಲೇವಾರಿ ಮಾಡಲು ಸಾವಿರಾರು ರೂಪಾಯಿ ಖರ್ಚು ಮಾಡುವಂತಾಗಿದೆ ಎಂದು ಸ್ಥಳೀಯ ನಿವಾಸಿಗಳು ‘ಪ್ರಜಾವಾಣಿ’ ಜೊತೆ ಅಳಲು ತೋಡಿಕೊಂಡರು.

‘ಲಕ್ಷ ಹಣ ಪಾವತಿಸಿ ಕಾವೇರಿ ನೀರಿನ ಸಂಪರ್ಕ ಪಡೆದಿದ್ದೇವೆ. ಆದರೆ, ನೀರೇ ಬರುತ್ತಿಲ್ಲ. ಒಳಚರಂಡಿ ವ್ಯವಸ್ಥೆಯೂ ಸರಿ ಇಲ್ಲದೇ, ಮನೆಯ ಶೌಚ ಗುಂಡಿಯನ್ನು ಖಾಲಿ ಮಾಡಿಸಲು ಈಗಲೂ ಸಾವಿರಾರು ರೂಪಾಯಿ ಖರ್ಚು ಮಾಡುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು ನಿವಾಸಿ ಇಂದಿರಾ.

‘ಕಾವೇರಿ ನೀರು ಮತ್ತು ಒಳಚರಂಡಿ ಸಮಸ್ಯೆಗೆ ಸಂಬಂಧಿಸಿದಂತೆ ಇಲ್ಲಿನ ನಿವಾಸಿಗಳು ಜಲಮಂಡಳಿಯ ಎಲ್ಲ ಹಂತದ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ದೂರು ಕೊಟ್ಟಾಗ ಬಂದು ನೋಡಿ ಹೋಗುತ್ತಾರೆ. ಶಾಶ್ವತ ಪರಿಹಾರ ನೀಡಿಲ್ಲ. ಸಮಸ್ಯೆ ಮಾತ್ರ ನಿರಂತರವಾಗಿ ಮುಂದುವರಿದಿದೆ’ ಎಂದು ಸ್ಥಳೀಯರಾದ ಶ್ರೀನಿವಾಸ್, ಮನೋಹರನ್ ದೂರುತ್ತಾರೆ.

ಕಾವೇರಿ ಸಂ‍‍‍ಪರ್ಕ ಪಡೆಯಲು ಪ್ರೋರೇಟಾ ಶುಲ್ಕ, ಮೀಟರ್‌ಗೆ ಶುಲ್ಕ, ಪ್ಲಂಬರ್‌ಗೆ, ಕಂಟ್ರಾಕ್ಟರ್‌ಗೆ ಕಮಿಷನ್‌ ಹೀಗೆ ಪ್ರತಿ ಮನೆಯವರು ಸಾವಿರಾರು ರೂಪಾಯಿ ಹಣ ಖರ್ಚು ಮಾಡಿದ್ದಾರೆ. ಆದರೆ, ಕಾವೇರಿ ನೀರು ಬಾರದೇ ಟ್ಯಾಂಕರ್‌ ನೀರು ತರಿಸಲು ಹಣ ತೆತ್ತುವುದು ತಪ್ಪಿಲ್ಲ. ಒಳಚರಂಡಿ ವ್ಯವಸ್ಥೆ ಸರಿ ಇಲ್ಲದೇ ಶೌಚ ಗುಂಡಿಗಳನ್ನು ಸ್ವಚ್ಛಗೊಳಿಸಲು ಸಾವಿರಾರು ರೂಪಾಯಿ ಹಣ ವ್ಯಯಿಸುವುದು ನಿಂತಿಲ್ಲ. ಇದು ನಿತ್ಯದ ಹೋರಾಟವಾಗಿದೆ ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ಬಂಜಾರ ಬಡಾವಣೆಗೆ ಕಾವೇರಿ ನೀರಿನ ಪೂರೈಕೆ ಆರಂಭವಾಗಿದೆ. ಒಂದೆರಡು ಕಡೆಗಳಲ್ಲಿ ಕೊಳವೆಗಳ ಸಂಪರ್ಕ ತಪ್ಪಿರಬಹುದು. ಅಂಥದ್ದನ್ನು ಜಲಮಂಡಳಿ ಗಮನಕ್ಕೆ ತಂದರೆ ಒಂದೆರಡು ದಿನಗಳಲ್ಲೇ ಸರಿಪಡಿಸಲಾಗುತ್ತದೆ. ಸದ್ಯ ಈ ಬಡಾವಣೆಯಲ್ಲಿ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿಲ್ಲ. ತಾಜ್ಯ ನೀರು ಸಂಸ್ಕರಣಾ ಘಟಕ(ಎಸ್‌ಟಿಪಿ) ನಿರ್ಮಾಣವಾಗಬೇಕಿದೆ. ಹಂತ ಹಂತವಾಗಿ ಸರಿಪಡಿಸಲಾಗುತ್ತದೆ.
-ಜಲಮಂಡಳಿ ಅಧಿಕಾರಿಗಳು, ಬೆಂಗಳೂರು ಪೂರ್ವ ವಲಯ

ಕೊಳವೆ ಒಡೆದು ನೀರುಪೋಲು

ಕೆ.ಆರ್‌.ಪುರ: ಹೊರಮಾವು ವಾರ್ಡ್‌ ವ್ಯಾಪ್ತಿಯ ಬಂಜಾರ ಬಡಾವಣೆ ಪಕ್ಕದ ಕಲ್ಕೆರೆಯ ಮುಖ್ಯರಸ್ತೆಯಲ್ಲಿ ಕಾವೇರಿ 5ನೇ ಹಂತದ ಯೋಜನೆಯಡಿ ಅಳವಡಿಸಿರುವ ಕೊಳವೆಗಳು ಸಮರ್ಪಕವಾಗಿ ಜೋಡಣೆಯಾಗಿಲ್ಲ. ಈ ಕೊಳವೆಗಳಲ್ಲಿ ಪರೀಕ್ಷಾರ್ಥವಾಗಿ ನೀರು ಹರಿಸಿದಾಗ ಅಲ್ಲಲ್ಲೇ ಸೋರಿಕೆಯಾಗುತ್ತದೆ. ಇದರಿಂದ ನೀರು ಪೋಲಾಗುತ್ತಿದೆ ಎಂದು ಸ್ಥಳೀಯರು ದೂರುತ್ತಾರೆ.

‘ಮುಖ್ಯರಸ್ತೆಯಲ್ಲಿ ಗುಂಡಿ ತೆಗೆದು ಪೈಪ್ ಅಳವಡಿಸಲಾಗಿದೆ. ಭಾರವಾದ ವಾಹನಗಳು ಸಂಚರಿಸಿದಾಗ ಪೈಪ್ ಒಡೆದು ನೀರು ರಸ್ತೆಗೆ ಹರಿಯುತ್ತದೆ. ನೀರು ಪೋಲಾಗುವ ಕುರಿತು ಅಧಿಕಾರಿಗಳಿಗೆ ತಿಳಿಸಿದ್ದೇವೆ. ಯಾವುದೇ ಪ್ರಯೋಜನವಾಗಿಲ್ಲ. ನಾವು ರಸ್ತೆಯಲ್ಲಿ ಹರಿಯುವ ನೀರನ್ನೇ ನಿತ್ಯದ ಕೆಲಸಗಳಿಗೆ ಬಳಸುತ್ತಿದ್ದೇವೆ’ ಎಂದು ಕಲ್ಕೆರೆಯ ಕನಕದಾಸ ಬೀದಿಯ ನರೇಶ್ ಹೇಳಿದರು.

‘ಎರಡು ತಿಂಗಳಲ್ಲಿ ಹತ್ತರಿಂದ ಹದಿನೈದು ಬಾರಿ ಹೀಗೆ ಪೈಪ್ ಒಡೆದಿದೆ. ಇದು ಮುಖ್ಯ ಕೊಳವೆಯಾಗಿರುವುದರಿಂದ ದೊಡ್ಡ ಪ್ರಮಾಣದಲ್ಲಿ ನೀರು ಸೋರಿಕೆಯಾಗುತ್ತದೆ. ಸರಿಯಾದ ರೀತಿಯಲ್ಲಿ ಕೊಳವೆ ಅಳವಡಿಸದಿರುವುದು ಹೀಗೆ ಆಗಲು ಮುಖ್ಯ ಕಾರಣ. ನಿತ್ಯ ಸಾವಿರಾರು ಲೀಟರ್ ನೀರು ರಸ್ತೆ ಮೂಲಕ ಚರಂಡಿ ಸೇರುತ್ತಿದೆ. ಹೀಗಾಗಿ ಮನೆಗಳಿಗೆ ಹರಿಯುವ ನೀರು ಕಡಿಮೆಯಾಗಿದೆ. ಕುಡಿಯುವ ನೀರಿನ ಯೋಜನೆ ಪೂರ್ಣಪ್ರಮಾಣದಲ್ಲಿ ಜನರಿಗೆ ಸಿಗುತ್ತಿಲ್ಲ’ ಎಂದು ಇದೇ ಗ್ರಾಮದ ಹಳೇ ಫ್ಲೋರ್‌ಮಿಲ್ ರಸ್ತೆಯ ಕೃಷ್ಣಮೂರ್ತಿ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.