‘ಬಾಂಗ್ಲಾದೇಶದಲ್ಲಿನ ಹಿಂದೂಗಳು: ವರ್ತಮಾನದ ಸ್ಥಿತಿಗತಿ, ಸವಾಲುಗಳು ಮತ್ತು ಮುಂದಿನ ಹಾದಿ’ ಕುರಿತು ಶಾಮಪ್ರಸಾದ್ ಮುಖರ್ಜಿ ಸಂಶೋಧನಾ ಫೌಂಡೇಷನ್ ಅಧ್ಯಕ್ಷ ಅನಿರ್ಬನ್ ಗಂಗೂಲಿ ಮಾತನಾಡಿದರು. ಮಂಥನ ಕರ್ನಾಟಕದ ಸದಸ್ಯ ದೇವದಾಸ ಬಾಳಿಗ ಉಪಸ್ಥಿತರಿದ್ದರು
ಬೆಂಗಳೂರು: ‘ಬಾಂಗ್ಲಾದೇಶದಲ್ಲಿ ಹಿಂದೂಗಳು, ಕ್ರಿಶ್ಚಿಯನ್ನರು, ಬೌದ್ಧರು, ಬುಡಕಟ್ಟು ಜನರು ಸೇರಿದಂತೆ ಎಲ್ಲ ಅಲ್ಪಸಂಖ್ಯಾತರ ಸ್ಥಿತಿ ಶೋಚನೀಯ ವಾಗಿದೆ’ ಎಂದು ಶಾಮಪ್ರಸಾದ್ ಮುಖರ್ಜಿ ಸಂಶೋಧನಾ ಫೌಂಡೇಷನ್ ಅಧ್ಯಕ್ಷ ಅನಿರ್ಬನ್ ಗಂಗೂಲಿ ಅವರು ತಿಳಿಸಿದರು.
ಮಂಥನ ಬೆಂಗಳೂರು ವತಿಯಿಂದ ‘ಬಾಂಗ್ಲಾದೇಶದಲ್ಲಿನ ಹಿಂದೂಗಳು: ವರ್ತಮಾನದ ಸ್ಥಿತಿಗತಿ, ಸವಾಲುಗಳು ಮತ್ತು ಮುಂದಿನ ಹಾದಿ’ ವಿಷಯದ ಕುರಿತು ಆಯೋಜಿಸಲಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅಲ್ಪಸಂಖ್ಯಾತರ ಮೇಲೆ ಕೆಲವೇ ತಿಂಗಳಲ್ಲಿ 2000ಕ್ಕೂ ಅಧಿಕ ಆಕ್ರಮಣಗಳಾಗಿವೆ. ಚರ್ಚ್‌ಗಳ ಮೇಲೆ ದಾಳಿಗಳಾಗಿವೆ. ಬೌದ್ಧರ ಗ್ರಾಮಗಳಲ್ಲೂ ದಾಳಿ ನಡೆಸಿ ಹಿಂಸಿಸಲಾಗಿದೆ. ಬುಡಕಟ್ಟು ಸಮುದಾಯಗಳ ಮೇಲೆ ದಾಳಿ ನಡೆಸಿ ಅವರ ಜಮೀನುಗಳನ್ನು ಅತಿಕ್ರಮಿಸಲಾಗಿದೆ’ ಎಂದು ಹೇಳಿದರು.
‘ಅಲ್ಲಿನ ವಿಶ್ವವಿದ್ಯಾಲಯ ಕುಲಪತಿಗಳು, ಸಹಕುಲಪತಿಗಳು ಹಿಂದೂಗಳಾಗಿದ್ದಲ್ಲಿ ಅವರಿಗೆ ಬಂದೂಕು ತೋರಿಸಿ ರಾಜೀನಾಮೆ ಕೊಡಿಸಲಾಗಿದೆ. ಬೇರೆ ಬೇರೆ ಶೈಕ್ಷಣಿಕ ಸಂಸ್ಥೆಗಳಲ್ಲಿ 1500ಕ್ಕೂ ಅಧಿಕ ಶಿಕ್ಷಕರ ರಾಜೀನಾಮೆ ಪಡೆಯಲಾಗಿದೆ. ಪೊಲೀಸ್ ಇಲಾಖೆಯಲ್ಲಿರುವ ಹಿಂದೂಗಳನ್ನು ಅಮಾನತು ಮಾಡಲಾಗಿದೆ. ದುರ್ಗಾಪೂಜೆಗಳನ್ನು ನಿಯಂತ್ರಿಸಲಾಗಿದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.