ಪ್ರಾತಿನಿಧಿಕ ಚಿತ್ರ
– ಪ್ರಜಾವಾಣಿ ಚಿತ್ರ
ಬೆಂಗಳೂರು: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ಹಿಂಸಾಚಾರ ಖಂಡಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಕಾರ್ಯಕರ್ತರು ನಗರ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಬಾಂಗ್ಲಾದೇಶದ ಮೈಮನ್‌ಸಿಂಗ್ ಪ್ರದೇಶದಲ್ಲಿ ದೀಪುಚಂದ್ರ ದಾಸ್ ಅವರನ್ನು ಗುಂಪೊಂದು ಮರಕ್ಕೆ ಕಟ್ಟಿಹಾಕಿ ಜೀವಂತ ದಹನ ಮಾಡಿದೆ. ಅಲ್ಲದೇ ಬಾಂಗ್ಲಾದೇಶದಲ್ಲಿ ಹಿಂದೂ ಸಮಾಜದವರನ್ನು ಗುರಿಯಾಗಿಸಿಕೊಂಡು ಅವರ ಮನೆಗಳು ಹಾಗೂ ಅಂಗಡಿಗಳನ್ನು ಸುಟ್ಟು ಹಾಕಲಾಗುತ್ತಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ವಿರೋಧಿ ಹಿಂಸಾಚಾರವನ್ನು ತಡೆಯಲು ಭಾರತ ಸರ್ಕಾರವು ಬಾಂಗ್ಲಾದೇಶದ ಮೇಲೆ ಆರ್ಥಿಕ, ವ್ಯಾಪಾರ ಹಾಗೂ ರಾಜಕೀಯ ನಿರ್ಬಂಧಗಳನ್ನು ವಿಧಿಸಬೇಕು. ಬಾಂಗ್ಲಾದೇಶದ ಉಗ್ರ ಹಾಗೂ ಮತೀಯ ಗುಂಪುಗಳ ವಿರುದ್ಧ ಕಠಿಣ ಮಿಲಿಟರಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಾಂಗ್ಲಾದೇಶದಲ್ಲಿನ ಹಿಂದೂಗಳ ಸುರಕ್ಷತೆಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಪ್ರಯತ್ನಿಸಬೇಕು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಾಂಗ್ಲಾದೇಶದ ಹೈ ಕಮಿಷನರ್ ಅವರಿಗೆ ಬೆಂಗಳೂರು ಜಿಲ್ಲಾಧಿಕಾರಿ ಮೂಲಕ ಮನವಿ ಪತ್ರ ಸಲ್ಲಿಸಿದರು.
ಶ್ರೀರಾಮ ಸೇನೆಯ ಮುಖಂಡ ಸುಂದರೇಶ್ ನರ್ಗಲ್, ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ ಗೌಡ, ಶ್ರೀರಾಮ ಸೇನೆಯ ನಗರ ಅಧ್ಯಕ್ಷ ಮಂಜುನಾಥ, ದುರ್ಗಾ ಸೇನೆಯ ಸರಸ್ವತಿ ಪ್ರವೀಣ, ಮಲ್ಲಿಕಾರ್ಜುನ ರಾಜು, ವಕೀಲರಾದ ಕೆ.ಕೃಷ್ಣಸ್ವಾಮಿ ಸೇರಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.