ADVERTISEMENT

‘ಮಾಧ್ಯಮ ಜ್ಞಾನ’ ಹೊಸ ಕೋರ್ಸ್ ಸೇರ್ಪಡೆಗೆ ಕ್ರಮ: ಪ್ರೊ‌.ಎಸ್.ಆರ್.ನಿರಂಜನ

ಸಂವಹನ ವಿಭಾಗದ ಸುವರ್ಣ ಮಹೋತ್ಸವ: ಪ್ರೊ.ಎಸ್.ಆರ್.ನಿರಂಜನ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 15:45 IST
Last Updated 22 ಜುಲೈ 2024, 15:45 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಬೆಂಗಳೂರು: ವಿದ್ಯಾರ್ಥಿಗಳಲ್ಲಿ ಮಾಧ್ಯಮ ಸಾಕ್ಷರತೆ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಹಾಗಾಗಿ ಮಾಧ್ಯಮ ಸಾಕ್ಷರತೆ, ಸಂವಹನದ ಪ್ರಾಮುಖ್ಯ ಕುರಿತು ಹೊಸ ಕೋರ್ಸ್‌ಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕುರಿತು ಗಂಭೀರ ಚಿಂತನೆ ನಡೆದಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ‌.ಎಸ್.ಆರ್.ನಿರಂಜನ ಹೇಳಿದರು.

ಭಾರತೀಯ ಸಂವಹನ ಕಾಂಗ್ರೆಸ್ (ಐಸಿಸಿ) ಹಾಗೂ ಕರ್ನಾಟಕ ರಾಜ್ಯ ಪತ್ರಿಕೋದ್ಯಮ ಮತ್ತು ಸಂವಹನ ಶಿಕ್ಷಕರ ಸಂಘದ (ಕೆಎಸ್ ಜೆಸಿಟಿಎ) ಸಹಯೋಗದೊಂದಿಗೆ ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದ ಸುವರ್ಣ ಮಹೋತ್ಸವದ (1973-2023) ಪ್ರಯುಕ್ತ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.

ADVERTISEMENT

ಮಾಧ್ಯಮ ಸಾಕ್ಷರತೆ ಮತ್ತು ಸಂವಹನ ಜ್ಞಾನ ಪ್ರಮುಖ ಕೌಶಲವಾಗಿದ್ದು, ಪಠ್ಯಕ್ರಮದಲ್ಲಿ ಮಾಧ್ಯಮ ಜ್ಞಾನವನ್ನು ಕೂಡ ಬೋಧನಾ ವಿಷಯವಾಗಿ ಸೇರಿಸಲಾಗುವುದು. ನಿರ್ದಿಷ್ಟ ವಿಷಯದ ಕುರಿತು ಮಾಹಿತಿ ತಿಳಿದುಕೊಳ್ಳುವುದಕ್ಕಷ್ಟೇ ಸೀಮಿತವಾಗಿದ್ದ ಮಾಧ್ಯಮ ಇಂದು ಬಹು ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ. ದೇಶದ ನಿವ್ವಳ ಆಂತರಿಕ ಉತ್ಪನ್ನ (ಜಿಡಿಪಿ) ಏರಿಕೆಗೆ ಮನರಂಜನಾ ಮತ್ತು ಮಾಧ್ಯಮ ಕ್ಷೇತ್ರಗಳ ಕೊಡುಗೆ ಕೂಡ ಅಪಾರವಾಗಿದೆ ಎಂದರು.

ಮಾಧ್ಯಮದ ಪಾತ್ರ, ಶಕ್ತಿ, ಬಳಕೆ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗವು ಪ್ರಸ್ತಾವ ಸಲ್ಲಿಸಿದರೆ, ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ಈ ಕುರಿತು ಚರ್ಚಿಸಿ ಅನುಷ್ಠಾನಕ್ಕೆ ಕ್ರಮ‌ ವಹಿಸಲಾಗುವುದು ಎಂದು ಭರವಸೆ ಕೂಡ ನೀಡಿದರು.

ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಬಿ.ಕೆ. ರವಿ, ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಶೇಕ್ ಲತೀಫ್, ಮೌಲ್ಯಮಾಪನ ಕುಲಸಚಿವ ಶ್ರೀನಿವಾಸ್ ಚೌಡಪ್ಪ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥೆ ಬಿ.ಶೈಲಶ್ರೀ, ಪಶ್ಚಿಮ ಬಂಗಾಳದ ವಿಶ್ವ ಭಾರತಿ ಕೇಂದ್ರೀಯ ವಿಶ್ವವಿದ್ಯಾಲಯದ ಮುಖ್ಯಸ್ಥ ಬಿಪ್ಲಾಬ್ ಲೋಹೋ ಚೌದರಿ, ಭುವನೇಶ್ವರದ ಉತ್ಕಲ್ ವಿಶ್ವವಿದ್ಯಾಲಯದ ಮಾಧ್ಯಮ ಅಧ್ಯಯನ ಸಂಸ್ಥೆಯ ನಿರ್ದೇಶಕ ಉಪೇಂದ್ರ ಪಾಢಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.