ಬಾನು ಮುಷ್ತಾಕ್
ಬೆಂಗಳೂರು: ನಾಡಹಬ್ಬವಾಗಿರುವ ಮೈಸೂರು ದಸರಾ ಉದ್ಘಾಟಿಸಲು ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದು ಸ್ವಾಗತಾರ್ಹ. ಕೋಮುವಾದಿಗಳು, ಮತೀಯ ಮೂಲಭೂತವಾದಿಗಳ ದಾಳಿ ಖಂಡನಾರ್ಹ ಎಂದು ‘ನಾವೆದ್ದು ನಿಲ್ಲದಿದ್ದರೆ–ಕರ್ನಾಟಕ’ ಸಂಘಟನೆ ತಿಳಿಸಿದೆ.
ರಾಜರ ಕಾಲದಲ್ಲಿಯೇ ಮಿರ್ಜಾ ಇಸ್ಮಾಯಿಲ್ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಜರೊಂದಿಗೆ ಕುಳಿತು ಮೆರವಣಿಗೆಯಲ್ಲಿ ಹೋಗಿದ್ದರು. 2017ರಲ್ಲಿ ಕವಿ ನಿಸಾರ್ ಅಹಮದ್ ದಸರಾ ಉದ್ಘಾಟಿಸಿದ್ದರು. ಆಗ ಇಲ್ಲದ ರಾದ್ಧಾಂತ ಈಗ ಯಾಕೆ ಎಂದು ನಾವೆದ್ದು ನಿಲ್ಲದಿದ್ದರೆ–ಕರ್ನಾಟಕ’ ಸಂಘಟನೆಯ ಸದಸ್ಯರು, ಲೇಖಕಿಯರಾದ ಸುನಂದಮ್ಮ, ವಸುಂಧರಾ ಭೂಪತಿ, ಅಕ್ಕೈ ಪದ್ಮಶಾಲಿ, ಆರ್. ಪೂರ್ಣಿಮಾ, ಗೌರಮ್ಮ, ಮಮತಾ ಯಜಮಾನ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಬಾನು ಮುಷ್ತಾಕ್ ಅವರು ಮುಸ್ಲಿಂ ಎನ್ನುವ ಕಾರಣಕ್ಕಾಗಿ ಮತ್ತು ಮಹಿಳೆ ಎಂಬ ಕಾರಣಕ್ಕಾಗಿ ಎರಡೆರಡು ಹಿಂಸೆಯನ್ನು ಅನುಭವಿಸುವಂತಾಗಿದೆ. ಕನ್ನಡಕ್ಕೆ ಬುಕರ್ ಪ್ರಶಸ್ತಿಯನ್ನು ತಂದು ಕೊಟ್ಟ ಸಾಹಿತಿ ಅವರು. ಕನ್ನಡ ಲೋಕಕ್ಕೆ ಅವರ ಕೊಡುಗೆ ಅಪಾರ. ನಾಡು, ನುಡಿ, ಬಹುತ್ವದ ಸೌಂದರ್ಯ, ಸಂಸ್ಕೃತಿಯನ್ನು ಉಳಿಸಲು ಬಾನು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳ ವಿರುದ್ಧ ನ್ಯಾಯವಾದಿಯಾಗಿಯೂ ದಿಟ್ಟತನದಿಂದ ಸೆಣೆಸುತ್ತಿದ್ದಾರೆ. ಅವರು ದಸರಾ ಉದ್ಘಾಟಿಸಬಾರದು ಎಂದು ಕೆಲವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವುದು ಹಾಸ್ಯಾಸ್ಪದ ಎಂದು ಹೇಳಿದರು.
ರಾಜ್ಯದಲ್ಲಿ ನಡೆದಿರುವ ನೂರಾರು ಮಹಿಳೆಯರ ಮತ್ತು ಬಾಲಕಿಯರ ಅತ್ಯಾಚಾರ, ಹತ್ಯೆಗಳನ್ನು ಪ್ರಶ್ನಿಸುವ ಬದಲು, ಕನ್ನಡ ನಾಡಿಗೆ ಹೆಮ್ಮೆಯನ್ನು ತಂದುಕೊಟ್ಟಿರುವ ಲೇಖಕಿಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿರುವುದು ಬೇಜವಾಬ್ದಾರಿತನ ಎಂದು ಟೀಕಿಸಿದರು.
‘ಅನುವಾದಕಿ ದೀಪಾ ಭಾಸ್ತಿ ಅವರನ್ನು ಕರೆದಿಲ್ಲ ಎಂಬ ತಕರಾರು ಸರಿಯಲ್ಲ. ಉದ್ಘಾಟಕರು ಯಾವಾಗಲೂ ಒಬ್ಬರೇ ಇರುತ್ತಾರೆ. ದೀಪಾ ಅವರನ್ನು ಮುಂದೆ ಬೇರೆ ಕಾರ್ಯಕ್ರಮಗಳಿಗೆ ಕರೆಯಬಹುದು. ಚಾಮುಂಡಿ ಬೆಟ್ಟಕ್ಕೆ ಹೋಗುವುದನ್ನು ತಡೆಯುತ್ತೇವೆ ಎಂದು ಕೆಲವರು ಹೇಳಿದ್ದಾರೆ. ತಾಕತ್ತಿದ್ದರೆ ತಡೆಯಲಿ’ ಎಂದು ಸವಾಲು ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.