ADVERTISEMENT

ಗಾಂಧೀಜಿ ವ್ಯಕ್ವಿತ್ವ ಭಂಜನೆ ಮಾಡುವ ಪಕ್ಷಗಳ ಮೇಲೆ ಎಚ್ಚರವಿಡಿ: ಸಾಹಿತಿ ಬರಗೂರು

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 16:12 IST
Last Updated 30 ಜನವರಿ 2026, 16:12 IST
ನಗರದ ಸಂಸ ಬಯಲು ರಂಗಮಂದಿರದಲ್ಲಿ ಸೌಹಾರ್ದ ಕರ್ನಾಟಕ ಆಯೋಜಿಸಿದ್ದ ‘ಮಹಾತ್ಮ ಹುತಾತ್ಮ’ ಸೌಹಾರ್ದ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಎಚ್.ಎನ್. ನಾಗಮೋಹನ ದಾಸ್, ಬರಗೂರು ರಾಮಚಂದ್ರಪ್ಪ, ಮಾವಳ್ಳಿ ಶಂಕರ್, ಕೆ.ಆರ್. ಸಂಧ್ಯಾ ರೆಡ್ಡಿ, ಎನ್‌.ಆರ್. ವಿಶುಕುಮಾರ್, ಆರ್. ಮೋಹನರಾಜು ಗಾಂಧೀಜಿ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು   ಪ್ರಜಾವಾಣಿ ಚಿತ್ರ
ನಗರದ ಸಂಸ ಬಯಲು ರಂಗಮಂದಿರದಲ್ಲಿ ಸೌಹಾರ್ದ ಕರ್ನಾಟಕ ಆಯೋಜಿಸಿದ್ದ ‘ಮಹಾತ್ಮ ಹುತಾತ್ಮ’ ಸೌಹಾರ್ದ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಎಚ್.ಎನ್. ನಾಗಮೋಹನ ದಾಸ್, ಬರಗೂರು ರಾಮಚಂದ್ರಪ್ಪ, ಮಾವಳ್ಳಿ ಶಂಕರ್, ಕೆ.ಆರ್. ಸಂಧ್ಯಾ ರೆಡ್ಡಿ, ಎನ್‌.ಆರ್. ವಿಶುಕುಮಾರ್, ಆರ್. ಮೋಹನರಾಜು ಗಾಂಧೀಜಿ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು   ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಾಜಕಾರಣಕ್ಕೋಸ್ಕರ ಮಹಾತ್ಮ ಗಾಂಧಿ ಅವರನ್ನು ಅಪ್ಪಿಕೊಳ್ಳುವ, ಅವರ ವ್ಯಕ್ತಿತ್ವ ಭಂಜನೆ ಮಾಡುವ ಪಕ್ಷಗಳ ನಡೆಯನ್ನು ಎಚ್ಚರಿಕೆಯಿಂದ ನೋಡಬೇಕು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.

ಸೌಹಾರ್ದ ಕರ್ನಾಟಕವು ಸಂಸ ಬಯಲು ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮಹಾತ್ಮ ಹುತಾತ್ಮ’ ಸೌಹಾರ್ದ ಸಂಕಲ್ಪ ದಿನದಲ್ಲಿ ಅವರು ಆಶಯ ಭಾಷಣ ಮಾಡಿದರು.

‘ಗಾಂಧಿ ಜಯಂತಿ, ಪುಣ್ಯ ಸ್ಮರಣೆ ವೇಳೆ ರಾಜಕೀಯ ನಾಯಕರು, ಪಕ್ಷಗಳು ಅವರನ್ನು ನೆನಪು ಮಾಡಿಕೊಳ್ಳುತ್ತವೆ. ಸಾಂಕೇತಿಕವಾಗಿ ಸ್ಮರಣೆ ಮಾಡುವ ಸ್ಥಿತಿಗೆ ನಾವು ತಲುಪಿದ್ದೇವೆ. ಗಾಂಧಿಯನ್ನು ಈ ರೀತಿ ನೋಡುವುದಕ್ಕಿಂತ ಅವರ ವಿಚಾರಗಳೊಂದಿಗೆ ಮುಖಾಮುಖಿ ಆಗಬೇಕಿದೆ’ ಎಂದು ನುಡಿದರು.

ADVERTISEMENT

‘ಧರ್ಮ ಹಾಗೂ ರಾಷ್ಟ್ರೀಯತೆ ಎನ್ನುವುದು ಬೇರೆಯೇ. ಅವುಗಳನ್ನು ಒಂದೇ ನೆಲೆಯಲ್ಲಿ ನೋಡುವ ಕ್ರಮ ಸರಿಯಲ್ಲ. ಎರಡರ ವಿಚಾರದಲ್ಲಿ ಗಾಂಧೀಜಿ ಚಿಂತನೆ ಸ್ಪಷ್ಟವಾಗಿತ್ತು. ಸಾಮಾಜಿಕ, ಸಮಾನತೆ, ಸೌಹಾರ್ದತೆ, ಸಾಮರಸ್ಯದ ನೆಲೆಯಲ್ಲಿ ಭಾರತ ನೋಡುವ ಅವರ ವಿಚಾರ ಎಂದಿಗೂ ಪ್ರಸ್ತುತವೇ. ಅವರ ಆ ವಿಚಾರಗಳನ್ನು ಪ್ರಸ್ತುತ ನೆಲೆಯಲ್ಲಿ ನೋಡಬೇಕಿದೆ’ ಎಂದರು.

ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್ ಮಾತನಾಡಿ, ‘ರಾಜಕೀಯ ನೇತಾರರು ರಾಜ್‌ಘಾಟ್‌ಗೆ ಹೋಗಿ ಗಾಂಧೀಜಿಗೆ ನಮಿಸುತ್ತಾರೆ. ಆದರೆ ಅವರ ಚಿಂತನೆಗಳನ್ನು ಎಂದಿಗೂ ತಮ್ಮ ಆಡಳಿತದಲ್ಲಿ ಅಳವಡಿಸಿಕೊಳ್ಳುವುದಿಲ್ಲ. ಇದು ಆತ್ಮವಂಚನೆ’ ಎಂದರು.

ಸಾಹಿತಿ ಕೆ.ಮರುಳಸಿದ್ದಪ್ಪ, ಕೆ.ಆರ್.ಸಂಧ್ಯಾರೆಡ್ಡಿ, ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್‌ , ಆರ್. ಮೋಹನರಾಜು ಉಪಸ್ಥಿತರಿದ್ದರು. ವಾರ್ತಾ ಇಲಾಖೆ ನಿವೃತ್ತ ನಿರ್ದೇಶಕ ಎನ್‌.ಆರ್.ವಿಶುಕುಮಾರ್ ಸೌಹಾರ್ದ ಸಂಕಲ್ಪ ಬೋಧಿಸಿದರು. ಗಾಂಧೀಜಿ ಕುರಿತು ಸುಬ್ಬು ಹೊಲೆಯಾರ್, ಆರ್.ಜಿ.ಹಳ್ಳಿ ನಾಗರಾಜ್‌, ಎಚ್‌.ಆರ್.ಸುಜಾತ ಕವನ ವಾಚಿಸಿದರು. ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.