ನೆಲಮಂಗಲ: ಬಸವತತ್ವಗಳು ಸರ್ವ ಜನಾಂಗದ ಆಸ್ತಿ, ಬಸವತತ್ವದ ಆರಾಧಕರು ನಾವಾಗಿ, ಜಗ ಸರ್ವಜನಾಂಗದ ಶಾಂತಿಯ ತೋಟವಾಗಬೇಕು, ವಿಶಾಲತತ್ವದ ಅಡಿಯಲ್ಲಿ ಸಮಾಜ ಸೃಷ್ಟಿಯಾಗಬೇಕು ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ತಿಳಿಸಿದರು.
ಬಸವಣ್ಣದೇವರ ಮಠದಲ್ಲಿ ಆಯೋಜಿಸಿದ್ದ ಬಸವಜಯಂತಿ ಉತ್ಸವದಲ್ಲಿ ‘ಪವಾಡ ಶ್ರೀ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಯಲಹಂಕ ಶಾಸಕ ಎಸ್. ಆರ್. ವಿಶ್ವನಾಥ್ ಅವರು ‘ಎಡೆಯೂರು ಸಿದ್ದಲಿಂಗೇಶ್ವರ‘, ‘ಶ್ರೀ ಶಿವಕುಮಾರ ದರ್ಶನ’, ‘ವಚನ ಶಿಕ್ಷಣ’ ಕೃತಿಗಳನ್ನು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಲೋಕಾರ್ಪಣೆ ಮಾಡಿದರು. ನಂತರ ಮಾತನಾಡಿದ ಅವರು ‘ಬಸವ ಸಂವಿಧಾನದ ಮೂಲಮಂತ್ರವಾದ್ದರಿಂದ ಬಸವ ಸ್ಮರಣೆಗಾಗಿ ನನ್ನ ಕ್ಷೇತ್ರದಲ್ಲಿ ಬಸವ ಭವನ, ಬಸವ ವೃತ್ತ, ಬಸವ ಪುತ್ಥಳಿಗಳನ್ನು ನಿರ್ಮಿಸಿ ಕಾಯಕ ದಾಸೋಹ ಸಮಾನತೆಯ ತತ್ವಕ್ಕೆ ಸ್ಪೂರ್ತಿ ನೀಡಿದ್ದೇನೆ ’ ಎಂದರು.
ಸ್ಥಳೀಯ ಶಾಸಕ ಎನ್.ಶ್ರೀನಿವಾಸ್ ಯುವಜನ ಕ್ಷೇಮಾಭಿವೃದ್ಧಿ ಟ್ರಸ್ಟ್ ಲಾಂಛನ ಅನಾವರಣಗೊಳಿಸಿದರು. ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ವಿವರ ನೀಡಿದರು.
ನಗರಸಭೆ ಅಧ್ಯಕ್ಷ ಎನ್.ಗಣೇಶ್, ಉಪಾಧ್ಯಕ್ಷ ಆನಂದ್, ಸದಸ್ಯರಾದ ಲತಾ ಹೇಮಂತ್ ಕುಮಾರ್, ಪೂರ್ಣಿಮಾ ಸುಗ್ಗರಾಜು ಇದ್ದರು.
ಸಂಜೆ ಅಶ್ವಾರೂಢ ಬಸವೇಶ್ವರ ಹಾಗೂ 30 ಹಳ್ಳಿಗಳಿಂದ ಎತ್ತಿನಗಾಡಿಗಳಲ್ಲಿ ಬಂದಿದ್ದ ಬಸವಣ್ಣನ ಮೂರ್ತಿಗಳನ್ನು ವಿವಿಧ ಕಲಾಪ್ರಕಾರಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಬಹುಮಾನ ವಿತರಣೆ
ಬಸವ ಜಯಂತಿ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಕಂಠಪಾಠ ಸ್ಪರ್ಧೆಯಲ್ಲಿ 1040 ವಚನಗಳನ್ನು ನಿರಂತರವಾಗಿ ವಾಚಿಸಿದ ಹಿರೆಬಾಗವಾಡಿಯ ಲಾವಣ್ಯ ಅಂಗಡಿ ಅವರಿಗೆ ಪ್ರಥಮ ಬಹುಮಾನವಾಗಿ ₹1 ಲಕ್ಷ ನಗದು ಹಾಗೂ ‘ವಚನ ರತ್ನ’ ಪ್ರಶಸ್ತಿ ನೀಡಲಾಯಿತು.
990 ವಚನಗಳನ್ನು ವಾಚಿಸಿದ ಬೇಲೂರಿನ ವೈ.ಎನ್.ನೀಲಾ ಅವರಿಗೆ ದ್ವಿತೀಯ ಬಹುಮಾನವಾಗಿ ₹75 ಸಾವಿರ ನಗದು 465 ವಚನಗಳನ್ನು ವಾಚಿಸಿದ ಬೈಲಹೊಂಗಲದ ಮದನಬಾವಿಯ ವಿನಾಯಕ ಗುಜನಾಳ ಅವರಿಗೆ ತೃತೀಯ ಬಹುಮಾನವಾಗಿ ₹50 ಸಾವಿರ ನಗದು ನೀಡಲಾಯಿತು.
ತೆಲಂಗಾಣದ ಜ್ಯೋತಿ ಅವರಿಗೆ (444 ವಚನ ವಾಚನ) ಸಮಾಧಾನಕರ ಬಹುಮಾನವಾಗಿ ₹25 ಸಾವಿರ ನಗದು ಹಾಗೂ ಪ್ರದೀಪ್ ಅವರಿಗೆ ಮತ್ತೊಂದು ಸಮಾಧಾನಕರ ಬಹುಮಾನವಾಗಿ ₹10 ಸಾವಿರ ನೀಡಿ ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.