ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್
ಚಿತ್ರಗಳು: ಸತೀಶ್ ಬಡಿಗೇರ್
ಬೆಂಗಳೂರು: ಬಸವ ಪರಿಷತ್ ನೀಡುವ 2025ನೇ ಸಾಲಿನ ‘ಬಸವ ಪುರಸ್ಕಾರ’ಕ್ಕೆ ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಸೇರಿ 15 ಮಂದಿ ಆಯ್ಕೆಯಾಗಿದ್ದಾರೆ.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ಹಿರೇಮಠ, ‘ವಿವಿಧ ಕ್ಷೇತ್ರಗಳ ಸಾಧಕರನ್ನು ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಪರಿಸರ ಕ್ಷೇತ್ರದಿಂದ ಅಲ್ಮಿತ್ರಾ ಪಟೇಲ್, ನ್ಯಾಯಾಂಗ ಕ್ಷೇತ್ರದಿಂದ ರವಿವರ್ಮ ಕುಮಾರ್, ಶಿಕ್ಷಣ ಹಾಗೂ ಸಹಕಾರ ಕ್ಷೇತ್ರದಿಂದ ಎಸ್.ಆರ್.ಪಾಟೀಲ, ಸಹಕಾರ ಮಹಿಳಾ ಸಬಲೀಕರಣ ಕ್ಷೇತ್ರದಿಂದ ಎಂ.ಎನ್.ರಾಜೇಂದ್ರ ಕುಮಾರ್, ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರದಿಂದ ಉಮಾಶ್ರೀ, ಸಮಾಜ ಸೇವೆ ಹಾಗೂ ಉದ್ಯಮ ಕ್ಷೇತ್ರದಿಂದ ಮಾನಂದಿ ರಮೇಶ್, ಬಸವರಾಜ ಎಸ್. ದೇಶಮುಖ, ವಿ.ಎಸ್.ವಿ. ಪ್ರಸಾದ್, ಎಸ್.ಪಿ. ದಯಾನಂದ್ ಹಾಗೂ ಬಸವರಾಜ ಧನ್ನೂರ ಆಯ್ಕೆಯಾಗಿದ್ದಾರೆ’ ಎಂದು ತಿಳಿಸಿದರು.
‘ಉದ್ಯಮ ಹಾಗೂ ಶಿಕ್ಷಣ ಕ್ಷೇತ್ರದಿಂದ ಶಾಮನೂರು ಎಸ್. ಗಣೇಶ್, ಶಿಕ್ಷಣ ಹಾಗೂ ಸಮಾಜ ಸೇವೆ ಕ್ಷೇತ್ರದಿಂದ ಬಸವರಾಜ್ ಎಸ್. ದೇಶಮುಖ, ವೈದ್ಯಕೀಯ ಕ್ಷೇತ್ರದಿಂದ ಡಾ. ನಾಗರಾಜಯ್ಯ ಎನ್., ಸಮಾಜ ಸೇವೆ ಕ್ಷೇತ್ರದಿಂದ ರವಿಕುಮಾರ ಸ್ವಾಮಿ ಹಿರೇಮಠ, ಸಾಹಿತ್ಯ ಮತ್ತು ಸರ್ಕಾರಿ ಸೇವೆ ಕ್ಷೇತ್ರದಿಂದ ಬಸವರಾಜ ಯಲಿಗಾರ ಅವರು ಈ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ’ ಎಂದು ಮಾಹಿತಿ ನೀಡಿದರು.
‘ಇದೇ 9ರಂದು ಅರಮನೆ ರಸ್ತೆಯಲ್ಲಿರುವ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಸಮಾರಂಭದ ಸಾನ್ನಿಧ್ಯ ವಹಿಸುತ್ತಾರೆ. ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು ಸಮಾರಂಭದ ಅಧ್ಯಕ್ಷತೆ ವಹಿಸುತ್ತಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.