
ಯಲಹಂಕ: ‘ಬಸವಲಿಂಗಪ್ಪನವರ ಸ್ಮಾರಕ ನಿರ್ಮಿಸುವುದಕ್ಕೆ ಸರ್ಕಾರ ₹1 ಕೋಟಿ ಅನುದಾನ ಬಿಡುಗಡೆ ಮಾಡಿದೆ’ ಎಂದು ಮಾಜಿ ಶಾಸಕ ಬಿ. ಪ್ರಸನ್ನ ಕುಮಾರ್ ತಿಳಿಸಿದರು.
ಮಾಜಿ ಸಚಿವ ಬಿ. ಬಸವಲಿಂಗಪ್ಪ ಅವರ 33ನೇ ಪುಣ್ಯಸ್ಮರಣೆಯ ಅಂಗವಾಗಿ ಅಲ್ಲಾಳಸಂದ್ರ ಸಮೀಪದಲ್ಲಿರುವ ಬಸವಲಿಂಗಪ್ಪನವರ ಸಮಾಧಿಯ ಸ್ಥಳದಲ್ಲಿ ಆಯೋಜಿಸಿದ್ದ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸ್ಮಾರಕ ನಿರ್ಮಾಣಕ್ಕಾಗಿ 2013ರ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡಲಾಗಿತ್ತು. ಆದರೆ, ಇದುವರೆಗೆ ಬಿಡುಗಡೆ ಆಗಿರಲಿಲ್ಲ. ಈಗ ಅನುದಾನ ಬಿಡುಗಡೆಯಾಗಿದ್ದು, 2026ರ ಮೇ ತಿಂಗಳ ಅಂತ್ಯದೊಳಗೆ ಸ್ಮಾರಕ ನಿರ್ಮಿಸಲಾಗುವುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ದಲಿತ ಸಂಘರ್ಷ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಎಚ್. ಮಾರಪ್ಪ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಕಾಲ್ನಡಿಗೆ ಜಾಥಾದಲ್ಲಿ ನೂರಾರು ಜನ ಕೈಯಲ್ಲಿ ಕೆಂಪುಗುಲಾಬಿ ಹೂ ಹಿಡಿದು ಸಾಗಿದರು. ಜಾಥಾವು ಯಲಹಂಕ ಉಪನಗರದ ನ್ಯೂಟೌನ್ ಕ್ಲಬ್‌ನಿಂದ ಶೇಷಾದ್ರಿಪುರಂ ಕಾಲೇಜು, ಎನ್.ಇ.ಎಸ್.ವೃತ್ತ ಹಾಗೂ ಯಲಹಂಕ ಪೊಲೀಸ್ ಠಾಣೆ ವೃತ್ತದ ಮಾರ್ಗವಾಗಿ ಅಲ್ಲಾಳಸಂದ್ರ ಗೇಟ್ ಬಳಿಯಿರುವ ಬಿ.ಬಸವಲಿಂಗಪ್ಪನವರ ಸಮಾಧಿ ಸ್ಥಳದವರೆಗೆ ಆಗಮಿಸಿದರು. ನಂತರ ಸಮಾಧಿಗೆ ಗುಲಾಬಿ ಹೂ ಅರ್ಪಿಸಿ, ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.