ADVERTISEMENT

ಹಬ್ಬದ ದಿನವೇ ಪತ್ನಿಗೆ ಗುಂಡಿಕ್ಕಿ ಹತ್ಯೆ, ಆತ್ಮಹತ್ಯೆಗೆ ಯತ್ನಿಸಿದ ಆರೋಪಿ

ಬಸವೇಶ್ವರನಗರದಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2020, 20:45 IST
Last Updated 17 ನವೆಂಬರ್ 2020, 20:45 IST

ಬೆಂಗಳೂರು: ಬಸವೇಶ್ವರನಗರ ಠಾಣೆ ವ್ಯಾಪ್ತಿಯಲ್ಲಿ ಸುಮಿತ್ರಾ (62) ಎಂಬುವರನ್ನು ಸೋಮವಾರ ಬೆಳಿಗ್ಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಕೃತ್ಯ ಎಸಗಿದ್ದಾನೆ ಎನ್ನಲಾದ ಅವರ ಪತಿ ಕಾಳಪ್ಪ (68) ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

‘ಸ್ಥಳೀಯ ನಿವಾಸಿಯಾದ ಕಾಳಪ್ಪ, ಸೆಕ್ಯುರಿಟಿ ಏಜೆನ್ಸಿಯೊಂದರಲ್ಲಿ ಗನ್‌ಮ್ಯಾನ್ ಆಗಿ ಕೆಲಸ ಮಾಡಿ ನಿವೃತ್ತನಾಗಿದ್ದ. ಪತ್ನಿ ಜೊತೆ ಬಾಡಿಗೆ ಮನೆಯಲ್ಲಿ ವಾಸವಿದ್ದ. ಸೋಮವಾರ ಬೆಳಿಗ್ಗೆ ದಂಪತಿ ನಡುವೆ ಜಗಳ ಆಗಿತ್ತು. ಅದೇ ಸಂದರ್ಭದಲ್ಲಿ ಆರೋಪಿ, ತನ್ನ ಬಳಿಯ ಗನ್‌ನಿಂದ ಪತ್ನಿಗೆ ಗುಂಡು ಹಾರಿಸಿ ಕೊಂದಿದ್ದಾನೆ. ನಂತರ, ತಾನೂ ಹೊಟ್ಟೆಗೆ ಗುಂಡು ಹೊಡೆದುಕೊಂಡಿದ್ದಾನೆ. ಗಾಯಗೊಂಡಿರುವ ಆತ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ಕೊಡಗಿನ ಕಾಳಪ್ಪ, ಹಲವು ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದ. ಸುಮಿತ್ರಾ ಅವರನ್ನು ಮದುವೆಯಾಗಿದ್ದ. ದಂಪತಿಗೆ ಮೂವರು ಪುತ್ರಿಯರು ಇದ್ದು, ಅವರನ್ನು ಮದುವೆ ಮಾಡಿಕೊಡಲಾಗಿದೆ.’

ADVERTISEMENT

‘ಪತ್ನಿ ಮೇಲೆ ಅನುಮಾನಪಡುತ್ತಿದ್ದ ಆರೋಪಿ, ಆಗಾಗ ಜಗಳ ಮಾಡುತ್ತಿದ್ದ. ಪತ್ನಿಯನ್ನು ಮನೆಯಲ್ಲೇ ಕೂಡಿ
ಹಾಕಿ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗುತ್ತಿದ್ದ. ಕೆಲಸದಿಂದ ಬಂದ ನಂತರ ಬೀಗ ತೆರೆಯುತ್ತಿದ್ದ. ಇದರಿಂದ ಪತ್ನಿ ಮಾನಸಿಕವಾಗಿ ನೊಂದಿದ್ದರು. ಈ ಬಗ್ಗೆ ಮಕ್ಕಳ ಬಳಿ ಅಳಲು ತೋಡಿಕೊಂಡಿದ್ದರು’ ಎಂದೂ ತಿಳಿಸಿದರು.

‘ಪತ್ನಿ ಯಾರ ಜೊತೆಯೂ ಮಾತನಾಡುವಂತಿರಲಿಲ್ಲ. ಮಾತನಾಡಿದರೆ, ಅವರ ಜೊತೆ ಸಂಬಂಧವಿರುವುದಾಗಿ ಹೇಳಿ ಕಿರುಕುಳ ನೀಡುತ್ತಿದ್ದ. ಇದೇ ಕಾರಣಕ್ಕೆ ನಿತ್ಯವೂ ಮನೆಯಲ್ಲಿ ಜಗಳ ಆಗುತ್ತಿತ್ತು. ಅಕ್ಕ–ಪಕ್ಕದ ಮನೆಯವರು ಬುದ್ದಿವಾದ ಹೇಳಿದರೂ ಆರೋಪಿ ಕಾಳಪ್ಪ ಸುಧಾರಿಸಿರಲಿಲ್ಲ’ ಎಂದೂ ಹೇಳಿದರು.

ಪರವಾನಗಿ ಪಡೆದಿದ್ದ ಗನ್: ‘ತನ್ನ ರಕ್ಷಣೆಗಾಗಿ ಸಿಂಗಲ್ ಬ್ಯಾರಲ್ ಗನ್ ಇಟ್ಟುಕೊಂಡಿದ್ದ ಆರೋಪಿ, ಪರವಾನಗಿ ಸಹ ಪಡೆದಿದ್ದ. ಹಲವು ಬಾರಿ ಗನ್‌ ತೋರಿಸಿ ಪತ್ನಿಯನ್ನು ಬೆದರಿಸಿದ್ದ. ಸೋಮವಾರ ಅದೇ ಗನ್‌ನಿಂದ ಗುಂಡು ಹಾರಿಸಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಮಂಚದ ಮೇಲೆ ನರಳಿ ಸುಮಿತ್ರಾ ಪ್ರಾಣ ಬಿಟ್ಟಿದ್ದಾರೆ’ ಎಂದೂ ತಿಳಿಸಿದರು.

‘ಗಾಯಗೊಂಡಿದ್ದ ಕಾಳಪ್ಪನನ್ನು ಸ್ಥಳೀಯರೇ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ, ಠಾಣೆಗೆ ಮಾಹಿತಿ ನೀಡಿದ್ದರು. ಕೊಲೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಕಾಳಪ್ಪನ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದ ನಂತರ ಹೇಳಿಕೆ ಪಡೆದು ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.