
ಬೆಂಗಳೂರು: ‘ರಾಜ್ಯದ ಎಲ್ಲಾ ಸೌರ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್ ವ್ಯವಸ್ಥೆಯನ್ನು ಸ್ಥಾಪಿಸಲಾಗುವುದು’ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಬಿಡದಿಯಲ್ಲಿ ಪೇಸ್ ಡಿಜಿಟೆಕ್- ಲಿನೇಜ್ ಪವರ್ ಸಂಸ್ಥೆ ಸ್ಥಾಪಿಸಿರುವ ಸಂಪೂರ್ಣ ಸ್ವಯಂಚಾಲಿತ 5 ಗಿಗಾವಾಟ್ ಅವರ್ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಸೌರ ವಿದ್ಯುತ್ ಅನ್ನು ರಾತ್ರಿ ವೇಳೆಯಲ್ಲೂ ಬಳಸುವಂತಾಗಬೇಕು. ಈ ನಿಟ್ಟಿನಲ್ಲಿ, ಕನಿಷ್ಠ 2 ತಾಸು ಬಳಸುವಷ್ಟು ಸೌರ ವಿದ್ಯುತ್ತಿನ ಸಂಗ್ರಹಣೆಗಾಗಿ ಎಲ್ಲಾ ಸೌರ ಘಟಕಗಳಲ್ಲಿ ಬ್ಯಾಟರಿ ಸ್ಟೋರೇಜ್ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದರು.
‘ಸೌರ ಹಾಗೂ ಪವನ ವಿದ್ಯುತ್ ಉತ್ಪಾದನೆಯ ಪ್ರಮಾಣ ಗಣನೀಯವಾಗಿ ಹೆಚ್ಚಿದ್ದು, ಅವುಗಳಿಂದ ಉತ್ಪಾದನೆಯಾಗುವ ವಿದ್ಯುತ್ತನ್ನು ಸಂಗ್ರಹಿಸಿ ಅಗತ್ಯವಿದ್ದಾಗ ಪೂರೈಸಲು ಬೇಕಾದ ಸೂಕ್ತ ಶೇಖರಣಾ ವ್ಯವಸ್ಥೆ ಮಾಡಿಕೊಳ್ಳುವುದು ಅನಿವಾರ್ಯ’ ಎಂದು ಹೇಳಿದರು.
‘ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚು ವಿದ್ಯುತ್ ಉತ್ಪಾದನೆ ಆದರೂ, ಸಂಗ್ರಹಣೆಗೆ ಅವಕಾಶ ಇಲ್ಲ. ಹೀಗಾಗಿ, ಶರಾವತಿ ಪಂಪ್ಡ್ ಸ್ಟೋರೇಜ್ ಮೂಲಕ 2000 ಮೆಗಾವಾಟ್, ವಾರಾಹಿ ಪಂಪ್ಡ್ ಸ್ಟೋರೇಜ್ ಮೂಲಕ 1500 ಮೆಗಾವಾಟ್, ಪಾವಗಡದಲ್ಲಿ 1000 ಮೆಗಾವಾಟ್ ಸಾಮರ್ಥ್ಯ ಹಾಗೂ ರ‍್ಯಾಪ್ಟೆಯಲ್ಲಿ 2000 ಮೆಗಾವಾಟ್ ಸಾಮರ್ಥ್ಯದ ಬ್ಯಾಟರಿ ಸ್ಟೋರೇಜ್ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ತೀರ್ಮಾನಿಸಿದೆ’ ಎಂದರು.
ಬ್ಯಾಟರಿ ಸ್ಟೋರೇಜ್ ಘಟಕವನ್ನು ಉದ್ಘಾಟಿಸಿದ ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ, ‘ಸೌರ ಮತ್ತು ಪವನ ವಿದ್ಯುತ್ ಲಭ್ಯವಿಲ್ಲದ ಸಮಯದಲ್ಲಿ ಇವುಗಳಿಂದ ಉತ್ಪಾದನೆಯಾದ ವಿದ್ಯುತ್ ಅನ್ನು ಸಂಗ್ರಹಿಸಿ ಬಳಸಲು ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತದೆ’ ಎಂದರು.
‘ಬ್ಯಾಟರಿ ಸ್ಟೋರೇಜ್ ಕ್ಷೇತ್ರದಲ್ಲಿ ಹೂಡಿಕೆಗೂ ವಿಫುಲ ಅವಕಾಶಗಳಿವೆ. ಉದ್ಯಮಿಗಳು ಈ ಬಗ್ಗೆ ಗಮನ ಹರಿಸಬೇಕು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕ್ರೆಡಲ್ ಅಧ್ಯಕ್ಷರೂ ಆದ ಶಾಸಕ ಟಿ.ಡಿ. ರಾಜೇಗೌಡ, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.