ADVERTISEMENT

ಬಿಬಿಎಂಪಿ ಆಡಳಿತ ವಿಕೇಂದ್ರೀಕರಣಕ್ಕೆ ಶಿಫಾರಸು

2ನೇ ಆಡಳಿತ ಸುಧಾರಣಾ ಆಯೋಗದಿಂದ ಮುಖ್ಯಮಂತ್ರಿಗೆ ವರದಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2023, 19:31 IST
Last Updated 10 ಫೆಬ್ರುವರಿ 2023, 19:31 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಜಯಭಾಸ್ಕರ್ ವರದಿ ಸಲ್ಲಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಜಯಭಾಸ್ಕರ್ ವರದಿ ಸಲ್ಲಿಸಿದರು.   

ಬೆಂಗಳೂರು: ಬಿಬಿಎಂಪಿ ಆಡಳಿತ ಸುಧಾರಿಸಲು ವಿಭಾಗೀಯ ಮಟ್ಟದಲ್ಲಿ 30 ಡೆಪ್ಯುಟಿ ಕಮಿಷನರ್‌ ಹುದ್ದೆ ಸೃಷ್ಟಿ ಸೇರಿ 700ಕ್ಕೂ ಹೆಚ್ಚು ಹುದ್ದೆಗಳನ್ನು ಸೃಜಿಸಿಕೊಳ್ಳಬಹುದು ಎಂದು ಬಿಬಿಎಂಪಿ 2ನೇ ಆಡಳಿತ ಸುಧಾರಣಾ ಆಯೋಗ ಅಭಿಪ್ರಾಯಪಟ್ಟಿದೆ.

ಟಿ.ಎಂ.ವಿಜಯಭಾಸ್ಕರ್ ಅಧ್ಯಕ್ಷತೆಯ ಆಯೋಗವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಬಿಎಂಪಿ ಆಡಳಿತ ಸುಧಾರಣೆ ಕುರಿತ ವರದಿಯನ್ನು ಶುಕ್ರವಾರ ಸಲ್ಲಿಸಿತು. ಅಧಿಕಾರ ವಿಕೇಂದ್ರೀಕರಣ ಸಂಬಂಧ ಹಲವು ಶಿಫಾರಸುಗಳನ್ನು ಆಯೋಗ ಮಾಡಿದೆ.

ನೇರ ನೇಮಕಾತಿಯಾಗುವ ಸಾಮಾನ್ಯ ವರ್ಗದ ಕೆಎಎಸ್‌ ಎ–ಗುಂಪಿನ ಕಿರಿಯ ವೇತನ ಶ್ರೇಣಿಯ ಅಧಿಕಾರಿಗಳ ಮಾದರಿಯಲ್ಲಿ ಬಿಬಿಎಂಪಿಯಲ್ಲಿ ಸಹಾಯಕ ಆಯುಕ್ತರ ಹುದ್ದೆಗಳನ್ನು ಸೃಜಿಸಬಹುದು. ಪಾಲಿಕೆಯ ಕಂದಾಯ ಇಲಾಖೆಯನ್ನು ಸ್ಥಳೀಯವಾಗಿ ಬಲಪಡಿಸುವ ಅಗತ್ಯವಿದೆ. 70 ಹೆಚ್ಚುವರಿ ಕಂದಾಯ ನಿರೀಕ್ಷಕರ ಮತ್ತು 94 ಹೆಚ್ಚುವರಿ ತೆರಿಗೆ ನಿರೀಕ್ಷಕರ ಹುದ್ದೆಗಳನ್ನು ಬಿಬಿಎಂಪಿ ಸೃಜಿಸಬಹುದು ಮತ್ತು ನೇಮಕಾತಿ ಮಾಡಿಕೊಳ್ಳಬಹುದು ಎಂದು ಶಿಫಾರಸು ಮಾಡಿದೆ.

ADVERTISEMENT

ಪ್ರತಿ ಮೂರು ವಾರ್ಡ್‌ಗಳಿಗೆ ಒಂದು ಸಹಾಯಕ ಕಂದಾಯ ಅಧಿಕಾರಿ ಹುದ್ದೆ ಇರಬಹುದು. ಹೊಸದಾಗಿ 17 ಸಹಾಯಕ ಕಂದಾಯ ಅಧಿಕಾರಿ ಹುದ್ದೆಗಳನ್ನು ಸೃಜಿಸಬಹುದು ಮತ್ತು ಕೆಲಸದ ಹೊರೆಯ ಆಧಾರದ ಮೇಲೆ ಮರು ಹಂಚಿಕೆ ಮಾಡಬಹುದು. ಎಲ್ಲ ಕಂದಾಯ ನಿರೀಕ್ಷಕರು ಮತ್ತು ತೆರಿಗೆ ನಿರೀಕ್ಷಕರನ್ನು ಕಡ್ಡಾಯವಾಗಿ ಪ್ರತಿ 5 ವರ್ಷಗಳಿಗೊಮ್ಮೆ, ಅದೇ ವಲಯದೊಳಗಿನ ಮತ್ತೊಂದು ವಾರ್ಡ್‌ಗೆ, ಪ್ರತಿ 10 ವರ್ಷಗಳಿಗೊಮ್ಮೆ ಬೇರೆ ವಲಯಗಳ ಮತ್ತೊಂದು ವಾರ್ಡ್‌ಗೆ ವರ್ಗಾಯಿಸಬಹುದು. ತೆರಿಗೆ ಪ್ರಮಾಣ ಹೆಚ್ಚಿಸಲು ಜಾರಿ ಕೋಶ ಒಂದನ್ನು ರಚಿಸಬಹುದು ಎಂದು ವರದಿಯಲ್ಲಿ ತಿಳಿಸಿದೆ.

ಎಲ್ಲಾ 243 ವಾರ್ಡ್‌ಗಳಿಗೆ ಪ್ರತಿ ವಾರ್ಡ್‌ಗೆ 1–ಕಿರಿಯ(‌ಸಹಾಯಕ) ಎಂಜಿನಿಯರ್‌ ಹುದ್ದೆ ಮತ್ತು ವರ್ಕ್ ಇನ್‌ಸ್ಪೆಕ್ಟರ್‌ ಹುದ್ದೆ ಇರಬಹುದು. ಹೆಚ್ಚುವರಿಯಾಗಿ 214 ವರ್ಕ್ ಇನ್‌ಸ್ಪೆಕ್ಟರ್‌ ಮತ್ತು 89 ಕಿರಿಯ ಎಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳಬಹುದು. ತುರ್ತು ಕಾಮಗಾರಿಗಳಿಗೆ ಬಳಸಿಕೊಳ್ಳಲು ಪ್ರತಿ ವಾರ್ಡ್‌ ಎಂಜಿನಿಯರ್‌ಗೆ, ಹೊಸ ವಾರ್ಡ್‌ಗಳಿಗೆ ವಾರ್ಷಿಕ ಗರಿಷ್ಠ ₹10 ಲಕ್ಷದವರೆಗೆ ಮತ್ತು ಕೋರ್ ವಾರ್ಡ್‌ಗಳಿಗೆ ವಾರ್ಷಿಕ ₹5 ಲಕ್ಷದವರೆಗೆ ಆವರ್ತ ನಿಧಿ ಒದಗಿಸಬೇಕು ಎಂದು ಶಿಫಾರಸು ಮಾಡಿದೆ.

192 ಹೆಚ್ಚುವರಿ ಕಿರಿಯ ಆರೋಗ್ಯ ನಿರೀಕ್ಷಕರ ಹುದ್ದೆಗಳನ್ನು ಸೃಜಿಸಿ ಭರ್ತಿ ಮಾಡಿಕೊಳ್ಳಬಹುದು. ಹಿರಿಯ ಆರೋಗ್ಯ ನಿರೀಕ್ಷಕ ಹುದ್ದೆಗಳನ್ನು ಬೇರೆ ವಲಯಗಳಿಗೆ ಮರು ನಿಯೋಜನೆ ಮಾಡಿಕೊಳ್ಳಲು ಅವಕಾಶ ಇದೆ ಎಂದು ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.