ADVERTISEMENT

ಬಿಬಿಎಂಪಿ ಆದಾಯದ ಮೂಲ ಹೆಚ್ಚಿಸಲು ಕ್ರಮ: ಆಡಳಿತಾಧಿಕಾರಿ ಗೌರವ ಗುಪ್ತ

ಬಿಬಿಎಂಪಿ ಆಡಳಿತಾಧಿಕಾರಿ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 19:04 IST
Last Updated 11 ಸೆಪ್ಟೆಂಬರ್ 2020, 19:04 IST
ಗೌರವ ಗುಪ್ತ
ಗೌರವ ಗುಪ್ತ   

ಬೆಂಗಳೂರು:‘ಬಿಬಿಎಂಪಿಗೆ ಜವಾಬ್ದಾರಿ ಹೆಚ್ಚಿದೆ, ಸಂಪನ್ಮೂಲ ಕಡಿಮೆ ಇದೆ. ಆದಾಯದ ಮೂಲ ಇನ್ನಷ್ಟು ಬಲಿಷ್ಠಗೊಳಿಸಬೇಕಾಗಿದೆ’ ಎಂದು ಬಿಬಿಎಂಪಿಯ ಆಡಳಿತಾಧಿಕಾರಿಗೌರವ ಗುಪ್ತ ಹೇಳಿದರು.

ಶುಕ್ರವಾರ ಅಧಿಕಾರ ವಹಿಸಿಕೊಂಡ ಅವರು, ‘ಕೋವಿಡ್ ಕಾರಣಕ್ಕಾಗಿ ತೆರಿಗೆ ಸಂಗ್ರಹ ಪ್ರಮಾಣ ಕಡಿಮೆಯಾಗಿರುವ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಜತೆ ಚರ್ಚೆ ನಡೆಸಿದ್ದೇನೆ. ಆದಾಯದ ಮೂಲ ಹೆಚ್ಚಿಸುವ ಕೆಲಸ ನಡೆಯುತ್ತಿದೆ ಎಂಬುದು ತಿಳಿದಿದೆ. ಪರಿಶೀಲನೆ ನಡೆಸುತ್ತೇನೆ’ ಎಂದರು.

‘ಆಸ್ತಿ ತೆರಿಗೆ ಹೆಚ್ಚಳ ಮಾಡಬೇಕು ಎಂಬ ಪ್ರಸ್ತಾವನೆ ಸರ್ಕಾರದ ಮುಂದೆ ಮೂರು ವರ್ಷಗಳಿಂದ ಇದೆ. ಈ ಬಗ್ಗೆ ಸರ್ಕಾರದ ಜತೆ ಚರ್ಚೆ ನಡೆಸುವ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳುತ್ತೇನೆ’ ಎಂದು ಹೇಳಿದರು.

ADVERTISEMENT

‘ಕೋವಿಡ್ ವಿಷಯವನ್ನು ಪಾಲಿಕೆ ಗಂಭೀರವಾಗಿ ಪರಿಗಣಿಸಿದ್ದು, ನಿಯಂತ್ರಣಕ್ಕಾಗಿ ಸಾಕಷ್ಟು ಕೆಲಸ ಮಾಡಿದೆ. ಈಗಾಗಲೇ ಆಗಿರುವ ಕೆಲಸದ ಬಗ್ಗೆ ತಿಳಿದುಕೊಳ್ಳುತ್ತೇನೆ. ಆಗಬೇಕಿರುವ ಕೆಲಸಗಳ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜತೆ ಚರ್ಚೆ ನಡೆಸುತ್ತೇನೆ’ ಎಂದರು.

‘ಕೋವಿಡ್ ಕರ್ತವ್ಯಕ್ಕೆ ಬೇರೆ ಇಲಾಖೆಗಳಿಂದ ನಿಯೋಜನೆ ಮೇರೆಗೆ ಬಂದಿದ್ದ ಸಿಬ್ಬಂದಿ ವಾಪಸ್ ಹೋಗುತ್ತಿದ್ದರೂ ನಿರ್ವಹಣೆಗೆ ತೊಂದರೆ ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಅಗತ್ಯ ಇದ್ದರೆ ಬೇರೆ ಇಲಾಖೆಗಳಿಂದ ಸಿಬ್ಬಂದಿ ಪಡೆಯಲಾಗುವುದು’ ಎಂದು ಸ್ಪಷ್ಟಪಡಿಸಿದರು.

‌‘ವಾರ್ಡ್‌ ಮಟ್ಟದಲ್ಲಿ ಜನರೊಟ್ಟಿಗಿದ್ದು ಕೆಲಸ ಮಾಡುತ್ತಿದ್ದ ಪಾಲಿಕೆ ಸದಸ್ಯರ ಅವಧಿ ಮುಗಿದಿದ್ದರೂ, ಅವರೆಲ್ಲರ ಸಹಕಾರ ಪಡೆದು ಕಾರ್ಯನಿರ್ವಹಿಸುತ್ತೇವೆ. ಜನಪರವಾದ ಆಡಳಿತಕ್ಕೆ ಜನರ ಮತ್ತು ಜನಪ್ರತಿನಿಧಿಗಳ ಸಹಕಾರ ಮುಖ್ಯ’ ಎಂದು ಹೇಳಿದರು.

‘ಪ್ರತಿ ಮಳೆಗಾಲದಲ್ಲೂ ಅನಾಹುತ ತಡೆಯಲು ಪಾಲಿಕೆ ಸನ್ನದ್ಧವಾಗಿರುತ್ತದೆ. ಈಗ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿ ಕೊರತೆಗಳಿದ್ದರೆ ಸರಿಪಡಿಸಲಾಗುವುದು’ ಎಂದರು.

‘ಅರ್ಥ ಮಾಡಿಕೊಳ್ಳಲು ಕಾಲಾವಕಾಶ ಬೇಕು’

‘ಪಾಲಿಕೆ ಆಡಳಿತದ ಬಗ್ಗೆ ಮೊದಲ ದಿನವೇ ಎಲ್ಲಾ ತೀರ್ಮಾನ ಕೈಗೊಳ್ಳಲು ಆಗುವುದಿಲ್ಲ. ಅರ್ಥ ಮಾಡಿಕೊಳ್ಳಲು 10ರಿಂದ 20 ದಿನಗಳ ಕಾಲಾವಕಾಶ ಬೇಕು’ ಎಂದು ಗೌರವ ಗುಪ್ತ ಹೇಳಿದರು.

‘ಈಗಾಗಲೇ ಮಂಡನೆಯಾಗಿರುವ ಬಜೆಟ್‌ನಲ್ಲಿ ಏನಾದರೂ ಬದಲಾವಣೆ ಆಗಬೇಕೆ, ಬೇಡವೇ ಎಂಬುದರ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತೇನೆ’ ಎಂದು ತಿಳಿಸಿದರು.

‘ಟಿ.ಎಂ.ವಿಜಯಭಾಸ್ಕರ್ ಅವರು ಬಿಬಿಎಂಪಿ ಆಡಳಿತಾಧಿಕಾರಿಯಾಗಿ ಹೆಸರು ಮಾಡಿದ್ದರು. ಅವರಿಗೆ ಪಾಲಿಕೆ ಆಡಳಿತದ ಬಗ್ಗೆ ಅನುಭವ ಇದೆ. ಅವರ ಜತೆಯೂ ಚರ್ಚಿಸುತ್ತೇನೆ. ಜನರ ನೆನಪಿನಲ್ಲಿ ಉಳಿಯುವಂತಹ ಕೆಲಸ ಮಾಡಲು ನಾನೂ ಪ್ರಯತ್ನಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.