ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಸಾರ್ವಜನಿಕ ಸ್ಥಳ, ರಸ್ತೆಗಳಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವ ಹೊಸ ಜಾಹೀರಾತು ನೀತಿ ಜಾರಿಯಾಗಿದೆ.
ರಸ್ತೆಯ ಅಗಲಕ್ಕೆ ಅನುಗುಣವಾಗಿ ಪ್ರತಿ 100 ಮೀಟರ್‌ಗೆ ಜಾಹೀರಾತು ಪ್ರದರ್ಶಿಸಬಹುದು. ಈ ಜಾಹೀರಾತುಗಳ ಉದ್ದ 40 ಅಡಿ ಮೀರುವಂತಿಲ್ಲ. ಆಯಾ ಪ್ರದೇಶದಲ್ಲಿ ಮಾರ್ಗಸೂಚಿ ದರಕ್ಕೆ ಅನುಗುಣವಾಗಿ ಜಾಹೀರಾತು ಶುಲ್ಕವನ್ನು ನಿಗದಿಪಡಿಸಿ ‘ಬಿಬಿಎಂಪಿ (ಜಾಹೀರಾತು) ಬೈ–ಲಾ 2024’ ಅನ್ನು ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದೆ.
ರಸ್ತೆಗಳು, ವೃತ್ತಗಳು ಹಾಗೂ ಪ್ರದೇಶಗಳ ಮುಕ್ತ ಹರಾಜು ಅಥವಾ ಟೆಂಡರ್ ಅನ್ನು ಪ್ರತ್ಯೇಕ ಅಥವಾ ಲಾಟ್‌ಗಳಲ್ಲಿ ಒಟ್ಟುಗೂಡಿಸಿ ಪರವಾನಗಿ ನೀಡುವ ನಿರ್ಧಾರವನ್ನು ಬಿಬಿಎಂಪಿ ಮುಖ್ಯ ಆಯುಕ್ತರು ತೆಗೆದುಕೊಳ್ಳುತ್ತಾರೆ. ಹೊಸ ಜಾಹೀರಾತು ನೀತಿಯಿಂದ ವಾರ್ಷಿಕ ₹500 ಕೋಟಿ ಸಂಗ್ರಹಿಸುವ ನಿರೀಕ್ಷೆ ಇದೆ.
ಖಾಸಗಿ ಪ್ರದೇಶಕ್ಕೂ ಅನುಮತಿ:
ಸರ್ಕಾರಿ ರಸ್ತೆ, ವೃತ್ತ, ಕಟ್ಟಡ, ನಿವೇಶನಗಳಲ್ಲದೆ ಖಾಸಗಿ ರಸ್ತೆ, ವಾಣಿಜ್ಯ ನಿವೇಶನ, ಕಟ್ಟಡಗಳಲ್ಲೂ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮೆಟ್ರೊ ಕಂಬಗಳು, ನಿಲ್ದಾಣಗಳು, ಮೂಲಸೌಕರ್ಯಗಳ ತಾಣಗಳಲ್ಲಿ ಯಾರೇ ಜಾಹೀರಾತು ಪ್ರದರ್ಶಿಸಬೇಕಾದರೂ ಬಿಬಿಎಂಪಿಯಿಂದಲೇ ಗುತ್ತಿಗೆ ಪಡೆಯಬೇಕು.
ವಾಹನಗಳ ಜಾಹೀರಾತಿಗೆ ಶುಲ್ಕ:
ಬಿಎಂಟಿಸಿ ಬಸ್‌ಗಳು, ಸರ್ಕಾರಿ, ಖಾಸಗಿ ಸಂಸ್ಥೆಗಳೂ ಸೇರಿದಂತೆ ಯಾವುದೇ ವಾಹನಗಳಲ್ಲಿ ‘ಸಂಚಾರಿ ಜಾಹೀರಾತು’ಗಳನ್ನು ಪ್ರದರ್ಶಿಸಲು ಬಿಬಿಎಂಪಿಯಿಂದ ಪೂರ್ವಾನುಮತಿ ಪಡೆದುಕೊಳ್ಳಬೇಕು. ಪ್ರದರ್ಶನದ ಅವಧಿ, ಉದ್ದೇಶ, ವಾಹನ ಸಂಖ್ಯೆ, ವಾಹನಗಳ ಪಟ್ಟಿಯನ್ನು ನೀಡಿ ಪಾಲಿಕೆಯಿಂದ ನಿರಾಕ್ಷೇಪಣಾ ಪತ್ರ ಪಡೆದುಕೊಳ್ಳಬೇಕು. ಜಾಹೀರಾತಿಗೆ ಅನುಗುಣವಾಗಿ ತೆರಿಗೆ ಲೆಕ್ಕಹಾಕಿ, ಮೊತ್ತವನ್ನು ಏಜೆನ್ಸಿಗೆ ಬಿಬಿಎಂಪಿ ತಿಳಿಸುತ್ತದೆ.
‘ಬಿ’ ಖಾತಾ ಆಸ್ತಿಯಲ್ಲಿದ್ದರೆ ಶೇ 100ರಷ್ಟು ದಂಡ
ವಸತಿ ಪ್ರದೇಶ, ಕಟ್ಟಡ ಎಂದು ಆಸ್ತಿ ತೆರಿಗೆ ಪಾವತಿಸುತ್ತಿರುವ ಸ್ಥಳಗಳಲ್ಲಿ ಜಾಹೀರಾತು ಪ್ರದರ್ಶಿಸಿದರೆ, ಆಸ್ತಿ ತೆರಿಗೆಯ ಶೇ 10ರಷ್ಟು ಮೊತ್ತವನ್ನು ದಂಡ ಹಾಕಲಾಗುತ್ತದೆ. ಬಿ–ನೋಂದಣಿ ಆಸ್ತಿಯಲ್ಲಿ ಜಾಹೀರಾತು ಪ್ರದರ್ಶಿಸಿದರೆ ಆಸ್ತಿ ತೆರಿಗೆಯ ಶೇ 100ರಷ್ಟು ದಂಡವನ್ನು ಆಸ್ತಿ ಮಾಲೀಕರು ಪಾವತಿಸಬೇಕಾಗು
ತ್ತದೆ. ಆಸ್ತಿಗೆ ಯಾವುದೇ ರೀತಿಯ ಖಾತೆಯನ್ನು ಹೊಂದಿಲ್ಲದಿದ್ದರೆ, ಆಸ್ತಿ ತೆರಿಗೆಯ ಎರಡು ಪಟ್ಟು ಮೊತ್ತದ ದಂಡವನ್ನು ಮಾಲೀಕರು ಪಾವತಿಸಬೇಕು.
ಎಲ್ಲೆಲ್ಲಿ ಜಾಹೀರಾತಿಗೆ ಅವಕಾಶ ಇಲ್ಲ?
ಕುಮಾರಕೃಪಾ ರಸ್ತೆ, ವಿಂಡ್ಸರ್ ಮ್ಯಾನರ್ ಜಂಕ್ಷನ್‌ನಿಂದ ಶಿವಾನಂದ ವೃತ್ತ, ರಾಜಭವನ ರಸ್ತೆ, ಹೈಗ್ರೌಂಡ್ಸ್‌ನಿಂದ ಮಿನ್ಸ್ಕ್ ಸ್ಕ್ವೇರ್, ಸ್ಯಾಂಕಿ ರಸ್ತೆ, ಹೈಗ್ರೌಂಡ್ಸ್‌ನಿಂದ ವಿಂಡ್ಸರ್ ಹಿಲ್ಡ್ ಸಿಗ್ನಲ್, ಅಂಬೇಡ್ಕರ್ ವೀಧಿ, ಕೆ.ಆರ್. ವೃತ್ತದಿಂದ ಇನ್‌ಫೆಂಟ್ರಿ ಜಂಕ್ಷನ್, ಪೋಸ್ಟ್ ಆಫೀಸ್ ರಸ್ತೆ, ಕೆ.ಆರ್. ವೃತ್ತದಿಂದ ಎಸ್‌ಬಿಐ ವೃತ್ತ (ಕೆ.ಜಿ ರಸ್ತೆ), ಚಾಲುಕ್ಯ ವೃತ್ತ, ಮಹಾರಾಣಿ ಕಾಲೇಜ್ ರಸ್ತೆ, ಶೇಷಾದ್ರಿ ರಸ್ತೆ, ಕೆ.ಆರ್. ವೃತ್ತ, ಕಬ್ಬನ್ ಪಾರ್ಕ್ ಹಾಗೂ ಲಾಲ್‌ಬಾಗ್ ಆವರಣ, ನೃಪತುಂಗ ರಸ್ತೆ, ಕೆ.ಆರ್. ವೃತ್ತದಿಂದ ಪೊಲೀಸ್ ಕಾರ್ನರ್ ಜಂಕ್ಷನ್, ಪ್ಯಾಲೇಸ್ ರಸ್ತೆ, ಎಸ್‌ಬಿಐ ವೃತ್ತದಿಂದ ಚಾಲುಕ್ಯ ವೃತ್ತದವರೆಗಿನ ರಸ್ತೆಗಳಲ್ಲಿ ಯಾವುದೇ ವಿಧವಾದ ಜಾಹೀರಾತನ್ನು ಪ್ರದರ್ಶಿಸಲು ಅನುಮತಿ ಇರುವುದಿಲ್ಲ.
ಯಾವುದೇ ಪ್ರದೇಶದಲ್ಲಿ ವೈಯಕ್ತಿಕ ಜಾಹೀರಾತುಗಳನ್ನು ಹಾಕಲು ಮುಖ್ಯ ಆಯುಕ್ತರ ಲಿಖಿತ ಅನುಮತಿ ಪಡೆದುಕೊಳ್ಳಬೇಕು. ದೇವಾಲಯ, ಮಸೀದಿ, ಗುರುದ್ವಾರ, ಚರ್ಚ್ ಮತ್ತು ಇತರ ಧಾರ್ಮಿಕ ಸ್ಥಳಗಳಿಂದ ನೂರು ಮೀಟರ್ ಒಳಗೆ, ಮೇಲ್ಸೇತುವೆ, ಎಲಿವೇಟೆಡ್ ಕಾರಿಡಾರ್, ಸಂವಹನ ಗೋಪುರ, ವಿಶ್ವ ಪಾರಂಪರಿಕ ತಾಣ, ರಾಷ್ಟ್ರೀಯ ಉದ್ಯಾನಗಳು, ಅರಣ್ಯ, ಜಲಮೂಲ, ಪ್ರಾದೇಶಿಕ ಪರಿಸರ ವ್ಯವಸ್ಥೆಗಳ ಅವಶೇಷಗಳ ಪ್ರದೇಶ, ಸ್ಮಾರಕ, ವಿದ್ಯುತ್ ಕಂಬಗಳಲ್ಲಿ ಜಾಹೀರಾತು ಪ್ರದರ್ಶನವನ್ನು ನಿಷೇಧಿಸಲಾಗಿದೆ.
ವಾಹನ ಚಾಲಕರ ಏಕಾಗ್ರತೆಗೆ ಭಂಗವನ್ನು ಉಂಟು ಮಾಡುವ ಜಾಹೀರಾತು, ಸಂಚಾರ ಸಿಗ್ನಲ್ ದೀಪಗಳ ಬಣ್ಣ, ನಗರದ ವಿರೂಪಕ್ಕೆ ಕಾರಣವಾಗಬಹುದಾದ ಭಿತ್ತಿಪತ್ರ, ಗೀಚುಬರಹ, ಮರದ ಮೇಲೆ ಅಂಟಿಸಲಾದ, ಮೊಳೆ ಹೊಡೆದ, ಕಟ್ಟಿದ, ಲಗತ್ತಿಸಿದ, ಜೋಡಿಸಿದ ಜಾಹೀರಾತನ್ನು ನಿಷೇಧಿಸಲಾಗಿದೆ. ನಿಯಾನ್– ಚಿಹ್ನೆಗಳನ್ನು ನಿಷೇಧಿಸಲಾಗಿದೆ. ಎಲ್‌ಇಡಿ ಪ್ರದರ್ಶನ ಅಥವಾ ಡಿಜಿಟಲ್ ವಿಡಿಯೊ ಜಾಹೀರಾತುಗಳಿಗೆ ಅನುಮತಿ ಇಲ್ಲ.
ಜಾಹೀರಾತಿಗೆ ಎಲ್ಲೆಲ್ಲಿ ಎಷ್ಟು ದರ?
ಕರ್ನಾಟಕ ನೋಂದಣಿ ಕಾಯ್ದೆ 1957ರ ಸೆಕ್ಷನ್ 45 ಬಿ ಅಡಿಯಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ನಿಗದಿಪಡಿಸಿರುವ ಮಾರ್ಗಸೂಚಿ ದರದಂತೆ ಆಯಾ ರಸ್ತೆ, ಪ್ರದೇಶ, ವೃತ್ತಗಳಿಗೆ ಜಾಹೀರಾತು ಪ್ರದರ್ಶನಕ್ಕೆ ಪ್ರತಿ ತಿಂಗಳಿಗೆ ಶುಲ್ಕ ನಿಗದಿ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.