ADVERTISEMENT

ಬಿಬಿಎಂಪಿ: 6,414 ಹುದ್ದೆ ತುಂಬಲು ಡಿಸಿಎಂಗೆ ಮನವಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2023, 23:30 IST
Last Updated 18 ಜುಲೈ 2023, 23:30 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ಬಿಬಿಎಂಪಿಯಲ್ಲಿ ಖಾಲಿ ಇರುವ 6,414 ಹುದ್ದೆಗಳನ್ನು ತುಂಬಬೇಕು ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಮನವಿ ಮಾಡಿಕೊಂಡಿದೆ.

ಬಿಬಿಎಂಪಿಯ ಎಲ್ಲ ವೃಂದಗಳ 6 ಸಾವಿರಕ್ಕೂ ಹೆಚ್ಚು ಹುದ್ದೆಗಳು ಹಲವು ವರ್ಷಗಳಿಂದ ‌ಖಾಲಿ ಇವೆ. ಅಲ್ಲದೆ, ಪಾಲಿಕೆ ಅಧಿಕಾರಿಗಳಿಗೆ ಕಾಲಕಾಲಕ್ಕೆ ಸಿಗಬೇಕಾದ ಮುಂಬಡ್ತಿ ಹಾಗೂ ಆರ್ಥಿಕ ಸೌಲಭ್ಯ ವಿಳಂಬವಾಗುತ್ತಿದೆ. ಕೆಲವು ಅಧಿಕಾರಿಗಳು ಮಂಬಡ್ತಿ ಸಿಗದೆ ನಿವೃತ್ತರೂ ಆಗಿದ್ದಾರೆ. ಈ  ಸಮಸ್ಯೆಗಳನ್ನು ಈಡೇರಿಸಬೇಕು ಎಂದು ಕೋರಲಾಗಿದೆ.

ಎ ಶ್ರೇಣಿಯ ಅಧಿಕಾರಿಗಳಿಗೆ 2020ರ ವೃಂದ ಮತ್ತು ನೇಮಕಾತಿ ನಿಯಮಾವಳಿ ಪ್ರಕಾರ ಮುಂಬಡ್ತಿಯನ್ನು ಸರ್ಕಾರ ನೀಡಬೇಕು. ಆದರೆ, ಈ ಪ್ರಕ್ರಿಯೆ ಸರ್ಕಾರದ ಹಂತದಲ್ಲಿ ವಿಳಂಬವಾಗುತ್ತಿದೆ. ಆದ್ದರಿಂದ ಈ ಅಧಿಕಾರವನ್ನು ಮುಖ್ಯ ಆಯುಕ್ತರಿಗೆ ನೀಡಬೇಕು ಎಂದು ಸಂಘದ ಅಧ್ಯಕ್ಷ ಎ. ಅಮೃತರಾಜ್‌ ಮನವಿ ಮಾಡಿದ್ದಾರೆ.

ADVERTISEMENT

ಸಹ ಕಂದಾಯ ಅಧಿಕಾರಿ, ಉಪ– ಕಂದಾಯ ಅಧಿಕಾರಿ, ಆರೋಗ್ಯಾಧಿಕಾರಿಗಳಿಗೆ ಮುಂಬಡ್ತಿ ಕಾಲಕಾಲಕ್ಕೆ ಸಿಗುತ್ತಿಲ್ಲ. ಹಿರಿಯ ಆರೋಗ್ಯ ಪರಿವೀಕ್ಷಕರು 15 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದರೂ ಮುಂಬಡ್ತಿ ಸಿಗುತ್ತಿಲ್ಲ. ಸರ್ಕಾರದ ಆದೇಶದ ಪ್ರಕಾರ ಒಬ್ಬ ನೌಕರನ ಸೇವಾವಧಿಯಲ್ಲಿ ಮೂರು ಮುಂಬಡ್ತಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಇದು ಪಾಲಿಕೆಯಲ್ಲಿ ಆಗುತ್ತಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಪಾಲಿಕೆಯಲ್ಲಿ 140 ವ್ಯವಸ್ಥಾಪಕರ ಹುದ್ದೆ ಮಂಜೂರಾಗಿದೆ. 32 ವ್ಯವಸ್ಥಾಪಕರ ಹುದ್ದೆ ಕಡಿಮೆಯಾಗಿದ್ದು, ಇದರಿಂದ 32 ಪ್ರಥಮ ದರ್ಜೆ ಗುಮಾಸ್ತರು ವ್ಯವಸ್ಥಾಪಕ ಹುದ್ದೆಗೆ ಮುಂಬಡ್ತಿ ಪಡೆಯಲು ವಂಚಿತರಾಗಿದ್ದಾರೆ. 32 ವ್ಯವಸ್ಥಾಪಕರ ಹುದ್ದೆಗೆ ಮಂಜೂರು ನೀಡಬೇಕು ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.