ADVERTISEMENT

ಕಸ: ವಾರದಲ್ಲಿ ಮೂರು ದಿನ ವಾರ್ಡ್‌ ಭೇಟಿ ಕಡ್ಡಾಯ

198 ವಾರ್ಡ್‌ಗಳಿಗೆ ನೋಡಲ್ ಅಧಿಕಾರಿಗಳ ನೇಮಕ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2019, 19:30 IST
Last Updated 15 ಆಗಸ್ಟ್ 2019, 19:30 IST
ಎನ್‌. ಮಂಜುನಾಥ ಪ್ರಸಾದ್‌
ಎನ್‌. ಮಂಜುನಾಥ ಪ್ರಸಾದ್‌   

ಬೆಂಗಳೂರು: ಕಸ ಸಮಸ್ಯೆ ಬಗೆಹರಿಸುವ ಸಂಬಂಧ 198 ವಾರ್ಡ್‌ಗಳಿಗೆ ತಲಾ ಒಬ್ಬ ಹಿರಿಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿರುವ ಬಿಬಿಎಂಪಿ, ವಾರದಲ್ಲಿ ಕನಿಷ್ಠ 3 ದಿನ ವಾರ್ಡ್‌ಗಳಿಗೆ ಭೇಟಿ ನೀಡುವುದನ್ನು ಕಡ್ಡಾಯಗೊಳಿಸಿದೆ.

ಸೂಪರಿಂಟೆಂಡಿಂಗ್ ಎಂಜಿನಿಯರ್, ಕಾರ್ಯಪಾಲಕ ಎಂಜಿನಿಯರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಂತದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಆದೇಶ ಹೊರಡಿಸಿದ್ದಾರೆ.

‘ಈ ಅಧಿಕಾರಿಗಳು ವಾರದಲ್ಲಿ ಮೂರು ದಿನವಾದರೂ ವಾರ್ಡ್‌ಗಳಿಗೆ ಬೆಳಿಗ್ಗೆ 6.30ರ ವೇಳೆಗೆ ಭೇಟಿ ನೀಡಬೇಕು. ಪೌರ ಕಾರ್ಮಿಕರ ಹಾಜರಾತಿ, ಕಸ ಸಾಗಿಸುವ ವಾಹನಗಳು, ತಳ್ಳುವ ಗಾಡಿಗಳು ಸಂಖ್ಯೆ ನಿಗದಿಯಂತೆ ಇವೆಯೇ ಎಂಬುದನ್ನು ಪರಿಶೀಲಿಸಬೇಕು’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

‘ಹಸಿ, ಒಣ ಮತ್ತು ಸ್ಯಾನಿಟರಿ ತ್ಯಾಜ್ಯ ಸಮರ್ಪಕವಾಗಿ ವಿಂಗಡಣೆ ಆಗುತ್ತಿದೆಯೆ? ಯಾವುದೇ ಮನೆಗಳನ್ನೂ ಬಿಡದಂತೆ ಕಸ ಸಂಗ್ರಹಿಸಲಾಗುತ್ತಿದೆಯೆ? ಎಂಬುದನ್ನು ಪರಿಶೀಲಿಸಬೇಕು. ತಾಜ್ಯ ವಿಂಗಡಣೆ ಮಾಡದ ಮನೆಗಳಿಗೆ ಖುದ್ದು ಭೇಟಿ ನೀಡಿ ಜಾಗೃತಿ ಮೂಡಿಸಬೇಕು. ಮಿಶ್ರ ಕಸ ನೀಡುವುದನ್ನು ಮುಂದುವರಿಸಿದರೆ ಅಂತಹ
ವರಿಗೆ ದಂಡ ವಿಧಿಸಲು ಕಿರಿಯ ಅಧಿಕಾರಿಗಳಿಗೆ ಸೂಚನೆ ನೀಡಬೇಕು’ ಎಂದಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.