ADVERTISEMENT

ಬಿಬಿಎಂಪಿಯಿಂದ ಪೌರಕಾರ್ಮಿಕರ ಆರೋಗ್ಯ ತಪಾಸಣೆ, ಸುರಕ್ಷತಾ ಕಿಟ್ ವಿತರಣೆ

ಸರಳವಾಗಿ ಅಂಬೇಡ್ಕರ್ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2020, 6:30 IST
Last Updated 14 ಏಪ್ರಿಲ್ 2020, 6:30 IST
ಪೌರಕಾರ್ಮಿಕರಿಗೆ ಮೇಯರ್ ಎಂ.ಗೌತಮ್ ಕುಮಾರ್ ಅವರು ಸುರಕ್ಷತಾ ಕಿಟ್ ವಿತರಿಸಿದರು. ಬಿ.ಎಚ್.ಅನಿಲ್ ಕುಮಾರ್, ಕೆ.ಎ.ಮುನೀಂದ್ರಕುಮಾರ್, ರಾಮ ಮೋಹನರಾಜು ಇದ್ದಾರೆ.
ಪೌರಕಾರ್ಮಿಕರಿಗೆ ಮೇಯರ್ ಎಂ.ಗೌತಮ್ ಕುಮಾರ್ ಅವರು ಸುರಕ್ಷತಾ ಕಿಟ್ ವಿತರಿಸಿದರು. ಬಿ.ಎಚ್.ಅನಿಲ್ ಕುಮಾರ್, ಕೆ.ಎ.ಮುನೀಂದ್ರಕುಮಾರ್, ರಾಮ ಮೋಹನರಾಜು ಇದ್ದಾರೆ.   

ಬೆಂಗಳೂರು:ಬಿಬಿಎಂಪಿ ವತಿಯಿಂದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಕೋವಿಡ್-19 ಹಿನ್ನೆಲೆ ನಗರದಲ್ಲಿ ಸೆಕ್ಷನ್ 144 ಜಾರಿಯಲ್ಲಿರುವುದರಿಂದ ಪಾಲಿಕೆ ಕೇಂದ್ರ ಕಚೇರಿಯ ಆವರಣದಲ್ಲಿ ಸರಳವಾಗಿ ಆಚರಿಸಲಾಯಿತು.

ಭಾರತದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪ್ರತಿಮೆಗೆ ಮೇಯರ್ ಎಂ.ಗೌತಮ್ ಕುಮಾರ್, ಉಪ ಮೇಯರ್ ರಾಮ ಮೋಹನ ರಾಜು, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಕೆ.ಎ.ಮುನೀಂದ್ರ ಕುಮಾರ್, ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್, ಜೆ.ಡಿ.ಎಸ್ ಪಕ್ಷದ ನಾಯಕಿ ನೇತ್ರಾ ನಾರಾಯಣ್ ಹಾಗೂ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಮಾಲಾರ್ಪಣೆ ಮಾಡಿದರು.

ಕಾರ್ಯಕ್ರಮದ ಅಂಗವಾಗಿ ಪೌರಕಾರ್ಮಿಕರಿಗೆ ಸ್ಯಾನಿಟೈಸರ್ ಅಥವಾ ಔಷಧೀಯ ಅಂಶವುಳ್ಳ ಸಾಬೂನು, ಎರಡು ಜೊತೆ ಮಾಸ್ಕ್ , ಒಂದು ಜೊತೆ ಕೈಗವಸು, ಒಂದು ಜೊತೆ ಶೂಗಳಿರುವ ಸ್ವಚ್ಚತಾ ಕಿಟ್‌ಗಳನ್ನು ವಿತರಿಸಲಾಯಿತು. ಪೌರಕಾರ್ಮಿಕರು ನೆಲೆಸಿರುವ ಕಾಲೊನಿಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಯಿತು.

ADVERTISEMENT

ಪಾಲಿಕೆಯ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಕಾರ್ಯನಿರತ ಎಲ್ಲಾ ಕಾಯಂ ಪೌರಕಾರ್ಮಿಕರು ಹಾಗೂ ನೇರ ವೇತನ ಪೌರಕಾರ್ಮಿಕರು ಹಾಗೂ ಸಹಾಯಕರು ಸಿಹಿ ತಿಂಡಿಯನ್ನು ಖರೀದಿಸಲು ರೂ. 200 ಗಳನ್ನು ಪ್ರತಿ ಪೌರಕಾರ್ಮಿಕರು ಹಾಗೂ ಸಹಾಯಕರ ಖಾತೆಗೆ ಜಮಾ ಮಾಡಲಾಗುವುದು ಎಂದು ಮೇಯರ್ ತಿಳಿಸಿದರು.

ಪಾಲಿಕೆಯ ಆರೋಗ್ಯ ವಿಭಾಗದಿಂದ ಸ್ವಚ್ಚತಾ ನಿರತ ಎಲ್ಲಾ ಪೌರಕಾರ್ಮಿಕರ ವಾಸಸ್ಥಳಗಳಿಗೆ ಭೇಟಿ ನೀಡಿ ಪೌರಕಾರ್ಮಿಕರ ಹಾಗೂ ಅವರ ಕುಟುಂಬಸ್ಥರಿಗೆ ಕೊವಿಡ್ -19 ಸಂಬಂಧ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಎಂಟು ವಲಯಗಳಲ್ಲಿ ಒಟ್ಟು 99 ಪೌರಕಾರ್ಮಿಕರ ಕಾಲೊನಿಗಳಿದ್ದು, ಈ ಪೈಕಿ ಪಾಲಿಕೆ ಹಾಗೂ ಬೆಂಗಳೂರು ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು,ಯುಪಿಎಚ್‌ಸಿ ವೈದ್ಯಾಧಿಕಾರಿಗಳ ತಂಡವು ಎಲ್ಲಾ ಪೌರಕಾರ್ಮಿಕರ ಕಾಲೊನಿಗಳಿಗೆ ತೆರಳಿ ಆರೋಗ್ಯ ತಪಾಸಣೆ ನಡೆಸಲಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.