ಬಿಬಿಎಂಪಿ ಕೇಂದ್ರ ಕಚೇರಿ
ಬೆಂಗಳೂರು: ರಾಜಧಾನಿಯ ಗತಿಯ ದಿಕ್ಕನ್ನೇ ಬದಲಿಸುವ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಮುಂದಿನ ಐದು ವರ್ಷಗಳಲ್ಲಿ ಅನುಷ್ಠಾನಗೊಳಿಸಲು ವಿಶೇಷ ಉದ್ದೇಶಿತ ಘಟಕ (ಎಸ್‌ಪಿವಿ) ಸೃಜಿಸಲು ಮುಂದಾಗಿರುವ ಬಿಬಿಎಂಪಿ, ಇದಕ್ಕಾಗಿ, ₹73,600 ಕೋಟಿ ವಿನಿಯೋಗ ಮಾಡುವುದಾಗಿ ಪ್ರಸ್ತಾಪಿಸಿದೆ.
‘ಬಿಬಿಎಂಪಿಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಇಷ್ಟೊಂದು ದೊಡ್ಡ ಮೊತ್ತದ ಯೋಜನೆಗಳನ್ನು ಕೈ
ಗೊಳ್ಳಲಾಗುತ್ತಿದೆ’ ಎಂದು ಶನಿವಾರ ಮಂಡಿಸಿದ 2025–26ನೇ ಸಾಲಿನ ಬಜೆಟ್‌ನಲ್ಲಿ ಹೇಳಲಾಗಿದೆ. ಈ ಸಂಕೀರ್ಣ ಯೋಜನೆಗಳ ರಚನೆ, ಅನುಷ್ಠಾನ, ಬಾಹ್ಯ ಹಣಕಾಸು ನೆರವು, ಬಿಡ್ ದಸ್ತಾವೇಜುಗಳ ತಯಾರಿಗೆ ಎಸ್‌ಪಿವಿಗೆ ವಹಿಸಲಾಗುತ್ತದೆ. ಎಸ್‌ಪಿವಿ ಸ್ಥಾಪಿಸಿ ಬೃಹತ್ ಯೋಜನೆಗಳನ್ನು ಕೈಗೊಳ್ಳಬೇಕು ಎಂದು ರಾಜ್ಯ ಬಜೆಟ್‌ನಲ್ಲಿ ತಿಳಿಸಲಾಗಿತ್ತು. ಅದನ್ನು ಅನುಷ್ಠಾನ ಮಾಡಲು ಬಿಬಿಎಂಪಿ ಮುಂದಾಗಿದೆ.
ಬಿಬಿಎಂಪಿ ಆಡಳಿತಾಧಿಕಾರಿ ಎಸ್.ಆರ್. ಉಮಾಶಂಕರ್ ಅನುಮೋದಿಸಿದ ಬಜೆಟ್ ಅನ್ನು ಹಣಕಾಸು ವಿಭಾಗದ ವಿಶೇಷ ಆಯುಕ್ತ ಕೆ. ಹರೀಶ್ ಕುಮಾರ್ ಅವರು ಶನಿವಾರ ಪುರಭವನದಲ್ಲಿ ಮಂಡಿಸಿದರು.
‘ಬ್ರ್ಯಾಂಡ್ ಬೆಂಗಳೂರು– ಸುಗಮ ಸಂಚಾರ ಬೆಂಗಳೂರು’ ಪರಿಕಲ್ಪನೆಯಲ್ಲಿ ಸಂಚಾರ ದಟ್ಟಣೆ ಪರಿಹರಿಸಿ ಸುಸ್ಥಿರ ಪರಿಹಾರ ಒದಗಿಸಲು ‘ಸಮಗ್ರ ಸಂಚಾರ ನಿರ್ವಹಣಾ ಯೋಜನೆ’ ಸಿದ್ಧಪಡಿಸಲಾಗಿದ್ದು, ಅದಕ್ಕಾಗಿ ಬೃಹತ್ ಮೂಲಸೌಕರ್ಯ ಯೋಜನೆಗಳನ್ನು ಕೈಗೊಳ್ಳುವುದಾಗಿ ಬಜೆಟ್‌ನಲ್ಲಿ ಹೇಳಲಾಗಿದೆ.
₹73,600 ಕೋಟಿ ವೆಚ್ಚದಲ್ಲಿ ಸಂಕೀರ್ಣ ಯೋಜನೆಗಳ ರಚನೆ, ಅನುಷ್ಠಾನ, ಬಾಹ್ಯ ಹಣಕಾಸು ನೆರವು, ಪರಿಣತಿಯಲ್ಲಿ ಐದು ವರ್ಷಗಳ ಅವಧಿಯಲ್ಲಿ ಮೆಗಾ ಯೋಜನೆಗಳನ್ನು ಅನುಷ್ಠಾನ ಮಾಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ, ನಗರ ಯೋಜಕರು, ತಜ್ಞ ಎಂಜಿನಿಯರ್ ಮತ್ತು ಆಡಳಿತಗಾರರನ್ನು ಒಳಗೊಂಡ ವಿಶೇಷ ಉದ್ದೇಶಿತ ಘಟಕ (ಎಸ್‌ಪಿವಿ) ರಚಿಸಲಾಗುತ್ತದೆ. ಪ್ರೀಮಿಯಂ ಎಫ್‌ಎಆರ್ ಶುಲ್ಕ ಮತ್ತು ಜಾಹೀರಾತಿನ ಶುಲ್ಕದಿಂದ ಬರುವ ಆದಾಯವನ್ನು ಎಸ್‌ಪಿವಿಗೆ ವರ್ಗಾಯಿಸಿ, ಸುರಂಗ ರಸ್ತೆ, ಎಲಿವೇಟೆಡ್ ಕಾರಿಡಾರ್, ಡಬಲ್ ಡೆಕರ್, ರಾಜಕಾಲುವೆ ಪಕ್ಕದಲ್ಲಿ ರಸ್ತೆಗಳು, ವೈಟ್‌ಟಾಪಿಂಗ್, ಆಕಾಶ ಗೋಪುರ (ಸ್ಕೈಡೆಕ್), ರಸ್ತೆಗಳ ವಿಸ್ತರಣೆ ಯೋಜನೆಗಳ ಅನುಷ್ಠಾನದ ಜವಾಬ್ದಾರಿಯನ್ನು ವಹಿಸಲಾಗುತ್ತದೆ. ₹42 ಸಾವಿರ ಕೋಟಿಯನ್ನು ಎರಡು ಸುರಂಗ ರಸ್ತೆಗಳಿಗೆ ನಿಗದಿಪಡಿಸಲಾಗಿದೆ. 2025–26ರಲ್ಲಿ ಒಂದು ಸುರಂಗ ರಸ್ತೆ ಮಾತ್ರ ಅನುಷ್ಠಾನವಾಗಲಿದ್ದು, ಒಟ್ಟು ₹31,600 ಕೋಟಿ ಮೊತ್ತದ ಯೋಜನೆಗಳನ್ನು ಎಸ್‌ಪಿವಿ ನಿರ್ವಹಿಸಲಿದೆ.
ಘನತ್ಯಾಜ್ಯ ನಿರ್ವಹಣೆ ಯೋಜನೆಗಳಿಗೆ ಹೆಚ್ಚು ಅನುದಾನ ನೀಡುವ ಉದ್ದೇಶದಿಂದ ತ್ಯಾಜ್ಯ ನಿರ್ವಹಣೆ ಬಳಕೆದಾರರ ಶುಲ್ಕವನ್ನು ಆಸ್ತಿ ತೆರಿಗೆಯಲ್ಲಿಯೇ ಏಪ್ರಿಲ್ 1ರಿಂದ ಸಂಗ್ರಹಿಸಲು ನಿರ್ಧರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.