ADVERTISEMENT

ಕಟ್ಟಡ ನಕ್ಷೆ ಅನುಮೋದನೆ– ತಪ್ಪಲಿದೆ ಕಚೇರಿ ಅಲೆದಾಟ

ಇನ್ನು ಆನ್‌ಲೈನ್‌ ಮೂಲಕ ಮಾತ್ರ ನಕ್ಷೆ ಅನುಮೋದನೆ: ದಾಖಲೆ ಆಧರಿಸಿ ನಂಬಿಕೆ ಆಧಾರದಲ್ಲಿ ಮಂಜೂರಾತಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 20:23 IST
Last Updated 1 ಆಗಸ್ಟ್ 2019, 20:23 IST
   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 60x40 ಅಡಿ ಹಾಗೂ ಅದಕ್ಕಿಂತ ಕಡಿಮೆ ವಿಸ್ತೀರ್ಣದ ನಿವೇಶನದಲ್ಲಿ ನಿರ್ಮಿಸುವ ವಸತಿ ಕಟ್ಟಡಗಳಿಗೆ ಆನ್‌ಲೈನ್‌ ಮೂಲಕವೇ ಮಂಜೂರಾತಿ ನೀಡಲು ಸಿದ್ಧತೆ ನಡೆದಿದೆ. ಆಸ್ತಿ ಮಾಲೀಕರು ಒದಗಿಸುವ ದಾಖಲೆ ಆಧರಿಸಿ ಕೇವಲ ನಂಬಿಕೆ ಆಧಾರದಲ್ಲಿ ಮಂಜೂರಾತಿ ನೀಡುವ ವ್ಯವಸ್ಥೆ ಜಾರಿಗೆ ಬರಲಿದ್ದು, ಈ ಸಲುವಾಗಿ ನೂತನ ತಂತ್ರಾಂಶವನ್ನು ಪಾಲಿಕೆ ಅಭಿವೃದ್ಧಿ ಪಡಿಸಿದೆ.

ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಹೊಸ ವ್ಯವಸ್ಥೆಗೆ ಚಾಲನೆ ನೀಡಲು ಬಿಬಿಎಂಪಿ ಉದ್ದೇಶಿಸಿದೆ.

‘ಅಟಲ್‌ ನಗರ ನವೀಕರಣ ಮತ್ತು ಪರಿವರ್ತನ ಮಿಷನ್ (ಅಮೃತ್‌) ಯೋಜನೆಯಡಿ ನಗರಾಡಳಿತ ಸಂಸ್ಥೆಗಳಿಗೆ ಕೆಲವು ಗುರಿಗಳನ್ನು ನಿಗದಿಪಡಿಸಿದ್ದ ಕೇಂದ್ರ ಸರ್ಕಾರ ಕಟ್ಟಡ ನಕ್ಷೆಗಳಿಗೆ ನಂಬಿಕೆ ಆಧಾರದಲ್ಲಿ ಮಂಜೂರಾತಿ ನೀಡುವ (ಟ್ರಸ್ಟ್‌ ಆ್ಯಂಡ್‌ ವೆರಿಫೈ) ವ್ಯವಸ್ಥೆ ರೂಪಿಸಬೇಕು ಎಂದು ನಿರ್ದೇಶನ ನೀಡಿತ್ತು. ಅದನ್ನು ಅನುಷ್ಠಾನಗೊಳಿಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ’ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಈ ಸಲುವಾಗಿ ನಾವು ಪ್ರತ್ಯೇಕ ತಂತ್ರಾಂಶ ರೂಪಿದ್ದೇವೆ. ಇದು, ಸರ್ಕಾರ ರೂಪಿಸಿದ್ದ ಬಡಾವಣೆ ಮತ್ತು ಕಟ್ಟಡ ಪರವಾನಗಿ ಅನುಮೋದನೆ ವ್ಯವಸ್ಥೆ (ಎಲ್‌ಬಿಪಿಎಎಸ್‌) ತಂತ್ರಾಂಶದೊಂದಿಗೆ ಒಗ್ಗಿಕೊಳ್ಳುವಂತೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ 15ರಿಂದ ಅಧಿಕಾರಿಗಳ ಹಸ್ತಕ್ಷೇಪಕ್ಕೆ ಅವಕಾಶವಿಲ್ಲದೆಯೇ ಕಟ್ಟಡ ಪರವಾನಗಿ ಪಡೆಯುವುದು ಸಾಧ್ಯವಾಗಲಿದೆ’ ಎಂದರು.

ಪಾಲಿಕೆಯೇ 2019ರ ಏಪ್ರಿಲ್‌ನಿಂದ ಕಟ್ಟಡ ನಕ್ಷೆಗೆ ಆನ್‌ಲೈನ್‌ ಮೂಲಕ ಪರವಾನಗಿ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. ಆದರೆ, ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿದ ಬಳಿಕವೇ ಮಂಜೂರಾತಿ ಪತ್ರ ಮಾಲೀಕರ ಕೈಸೇರುತ್ತಿತ್ತು. ಆದರೆ, ಹೊಸ ಪದ್ಧತಿ ಇದಕ್ಕಿಂತ ಸಂಪೂರ್ಣ ವಿಭಿನ್ನ. ಒದಗಿಸುವ ದಾಖಲೆಗಳು ಸಮರ್ಪಕವಾಗಿದ್ದರೆ ಈ ತಂತ್ರಾಂಶ ಮೂಲಕ ಒಂದೇ ದಿನದಲ್ಲೇ ಮಂಜೂರಾತಿಯನ್ನು ಪಡೆಯಬಹುದು. ನೋಂದಾಯಿತ ಆರ್ಕಿಟೆಕ್ಟ್‌ಗಳು ಮನೆಯಲ್ಲೇ ಕುಳಿತು ಕಟ್ಟಡ ನಕ್ಷೆ ಮಂಜೂರಾತಿ ಪಡೆಯಲು ಅನುಕೂಲವಾಗುವಂತೆ ಈ ತಂತ್ರಾಂಶ ರೂಪಿಸಲಾಗಿದೆ.

‘ಕಟ್ಟಡ ನಕ್ಷೆ ವಲಯ ನಿಬಂಧನೆಗಳಿಗೆ ಅನುಗುಣವಾಗಿದೆಯೇ ಹಾಗೂ ಸಲ್ಲಿಸುವ ದಾಖಲೆಗಳು ಸಮರ್ಪಕವಾಗಿವೆಯೇ ಎಂಬುದನ್ನು ತಂತ್ರಾಂಶವೇ ಪರಿಶೀಲನೆ ನಡೆಸುತ್ತದೆ. ಹಾಗಾಗಿ ಇಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುವ ಮುನ್ನವೇ ಮಂಜೂರಾತಿ ಪತ್ರ ಪಡೆಯಲು ಅವಕಾಶ ಇದೆ’ ಎಂದು ಆಯುಕ್ತರು ವಿವರಿಸಿದರು.

ಅರ್ಜಿದಾರರ ಹೊಣೆ: ‘ಆರ್ಕಿಟೆಕ್ಟ್‌ಗಳು ದಾಖಲೆಗಳನ್ನು ಅಪ್‌ಲೋಡ್‌ ಮಾಡಿದ ಬಳಿಕವೂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಾರೆ. ಆದರೆ, ಅದುವರೆಗೆ ಕಾಯುವ ಅಗತ್ಯವೇ ಬಿಳುವುದಿಲ್ಲ. ಆನ್‌ಲೈನ್‌ನಲ್ಲಿ ಮಂಜೂರಾತಿ ಸಿಕ್ಕ ತಕ್ಷಣವೇ ಕಟ್ಟಡ ನಿರ್ಮಾಣ ಆರಂಭಿಸಬಹುದು. ಆಸ್ತಿ ಮಾಲೀಕರು ಒದಗಿಸುವ ದಾಖಲೆಗಳ ಮೇಲೆ ನಂಬಿಕೆ ಇಟ್ಟು ಮಂಜೂರಾತಿ ನೀಡುವುದರಿಂದ, ಅದಕ್ಕೆ ತಕ್ಕಂತೆ ನಡೆದುಕೊಳ್ಳುವ ಜವಾಬ್ದಾರಿ ಅವರದಾಗಿರುತ್ತದೆ. ಒಂದು ವೇಳೆ ಕಟ್ಟಡ ನಕ್ಷೆಯನ್ನು ಉಲ್ಲಂಘನೆ ಮಾಡಿದರೆ ನಿರ್ಮಾಣ ಕಾರ್ಯ ನಿಲ್ಲಿಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದರು.

ಕಟ್ಟಡ ನಕ್ಷೆ ಸಾರ್ವಜನಿಕರಿಗೂ ಲಭ್ಯ
‘ಪಾಲಿಕೆಯಿಂದ ಮಂಜೂರಾತಿ ನೀಡುವ ನಕ್ಷೆಗಳನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡುವುದರಿಂದ ಸಾರ್ವಜನಿಕರೂ ಅದನ್ನು ವೀಕ್ಷಿಸಬಹುದು. ಒಂದು ವೇಳೆ ಮಂಜೂರಾತಿ ಪಡೆದ ನಕ್ಷೆಗೆ ಅನುಗುಣವಾಗಿ ಕಟ್ಟಡ ನಿರ್ಮಿಸದೇ ಉಲ್ಲಂಘನೆ ಮಾಡಿದರೆ ಸಾರ್ವಜನಿಕರು ಪಾಲಿಕೆ ಅಧಿಕಾರಿಗಳ ಗಮನಕ್ಕೆ ತರಬಹುದು. ಇಂತಹ ಕಟ್ಟಡ ನಿರ್ಮಾಣವನ್ನು ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಆಯುಕ್ತರು ತಿಳಿಸಿದರು.

ಹೊಸ ವ್ಯವಸ್ಥೆ ಅನುಕೂಲಗಳೇನು?
* ಪರವಾನಗಿ ನಿಯಂತ್ರಣದ ಬದಲು ಅದನ್ನು ಪಡೆಯುವವರಿಗೆ ನೆರವಾಗುವಂತಿದೆ

* ಕಟ್ಟಡ ಮಾಲೀಕರ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ

* ಪಿಐಡಿ ಸಂಖ್ಯೆ ಹೊಂದಿರುವ ಆಸ್ತಿಗಳಿಗೆ ಹೆಚ್ಚುವರಿ ದಾಖಲೆಗಳನ್ನೂ ಒದಗಿಸಬೇಕಿಲ್ಲ

* ದಾಖಲೆ ಸಮರ್ಪಕವಾಗಿದ್ದರೆ ತಕ್ಷಣವೇ ಮಂಜೂರಾತಿ ಪತ್ರ ಪಡೆಯಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.