ADVERTISEMENT

ಬಿಬಿಎಂಪಿ ಮುಖ್ಯ ಲೆಕ್ಕಾಧಿಕಾರಿ ಗೋವಿಂದರಾಜು ಅಮಾನತು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 21:34 IST
Last Updated 19 ಅಕ್ಟೋಬರ್ 2020, 21:34 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ಬಿಬಿಎಂಪಿ ಕಾಮಗಾರಿಗಳಿಗೆ ನಿಯಮಬಾಹಿರವಾಗಿ ಬಿಲ್‌ ಪಾವತಿ ಮಾಡಿರುವ ಮುಖ್ಯ ಲೆಕ್ಕಾಧಿಕಾರಿ ಆರ್‌.ಗೋವಿಂದರಾಜು ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

‘ಬಿಬಿಂಎಂ ಲೆಕ್ಕಪತ್ರ ನಿರ್ವಹಣೆ ಹಾಗೂ ಆಯುಕ್ತರಿಗೆ ಆರ್ಥಿಕ ವಿಷಯಗಳಲ್ಲಿ ಸಲಹೆ ನೀಡುವುದು ಮುಖ್ಯ ಲೆಕ್ಕಾಧಿಕಾರಿಯ ಪ್ರಮುಖ ಕರ್ತವ್ಯ. ಆದರೆ ಗೋವಿಂದರಾಜು ಅವರು ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿದ್ದಾರೆ. ಅವರು ಆರ್ಥಿಕ ಶಿಸ್ತು ಕಾಪಾಡದೇ ನಿಯಮಬಾಹಿರವಾಗಿ ಬಿಲ್‌ ಪಾವತಿ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ’ ಎಂದು ಅಮಾನತು ಆದೇಶದಲ್ಲಿ ತಿಳಿಸಲಾಗಿದೆ.

ಬಿಬಿಎಂಪಿ ಕಾಮಗಾರಿಗಳಿಗೆ ₹ 680 ಕೋಟಿ ಮೊತ್ತದ ಬಿಲ್ ಪಾವತಿ ಮಾಡಿರುವ ಆರೋಪವನ್ನು ಗೋವಿಂದರಾಜು ಎದುರಿಸುತ್ತಿದ್ದಾರೆ. ಈ ಅಕ್ರಮಗಳು ಬೆಳಕಿಗೆ ಬರುತ್ತಿದ್ದಂತೆಯೇ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಮುಖ್ಯ ಲೆಕ್ಕಾಧಿಕಾರಿ ಕಚೇರಿಗೆ ಇತ್ತೀಚೆಗೆ ಬೀಗಮುದ್ರೆ ಹಾಕಿದ್ದರು.

ADVERTISEMENT

‘ಗೋವಿಂದರಾಜು ಅವರು ನಡೆಸಿರುವ ಅಕ್ರಮಗಳ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ. ನಿರ್ದಿಷ್ಟ ಯೋಜನೆಗೆ ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಅವರು ಅನ್ಯ ಉದ್ದೇಶಗಳಿಗೆ ಬಿಡುಗಡೆ ಮಾಡಿದ್ದಾರೆ. ಜ್ಯೇಷ್ಠತೆ ಆಧಾರದಲ್ಲೂ ಪಾವತಿ ಮಾಡಿಲ್ಲ. ಹಣ ಬಿಡುಗಡೆಗೆ ಸಮಗ್ರ ಹಣಕಾಸು ನಿರ್ವಹಣಾ ವ್ಯವಸ್ಥೆ (ಐಎಫ್‌ಎಂಎಸ್‌) ತಂತ್ರಾಂಶದ ಬಳಕೆ ಕಡ್ಡಾಯವಾಗಿದ್ದರೂ, ಹಣ ಭರವಸೆ ಪತ್ರಗಳ (ಎಲ್‌ಎಸಿ) ಆಧಾರದಲ್ಲಿ ಹಣ ಬಿಡುಗಡೆ ಮಾಡಿದ್ದಾರೆ. ಇದರಿಂದ ಒಂದೇ ಕಾಮಗಾರಿಗೆ ಎರೆಡೆರಡು ಬಾರಿ ಹಣ ಪಾವತಿ ಆಗುವ ಅಪಾಯ ಇದೆ’ ಎಂದು ಆಯುಕ್ತರು ತಿಳಿಸಿದರು.

‘ಗೋವಿಂದರಾಜು ನಡೆಸಿರುವ ಈ ಅಕ್ರಮಗಳ ಬಗ್ಗೆ ಪರಿಣಿತ ಲೆಕ್ಕಪರಿಶೋಧಕರ ತಂಡದಿಂದ ಇನ್ನಷ್ಟು ವಿಸ್ತೃತ ತನಿಖೆ ನಡೆಸಲಾಗುತ್ತಿದೆ. ಇದರ ಹಿಂದೆ ಬೇರೆಯವರ ಪಾತ್ರ ಇರುವುದು ಕಂಡು ವಂದರೆ ಅವರ ವಿರುದ್ಧವೂ ಕ್ರಮಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.