ಅಶೋಕನಗರದಲ್ಲಿ ಪಾದಚಾರಿ ಮಾರ್ಗವನ್ನು ಬಿಬಿಎಂಪಿ ಸಿಬ್ಬಂದಿ ಸ್ವಚ್ಛಗೊಳಿಸಿದರು
ಬೆಂಗಳೂರು: ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರ ಸೂಚನೆಯಂತೆ, ‘ಸ್ವಚ್ಛ ಬೆಂಗಳೂರಿಗೆ ಸಾಮೂಹಿಕ ಸ್ವಚ್ಛತಾ ಕಾರ್ಯ’ವನ್ನು ನಗರದ ಆರು ವಲಯಗಳಲ್ಲಿ ಶನಿವಾರ ನಡೆಸಲಾಯಿತು.
ವಲಯ ಆಯುಕ್ತರು, ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್‌ಗಳ ನೇತೃತ್ವದಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯ ನಡೆಯಿತು. ಜೆಸಿಬಿ, ಟ್ರ್ಯಾಕ್ಟರ್ ಹಾಗೂ ಸಿಬ್ಬಂದಿ ನಿಯೋಜನೆ ಮಾಡಿಕೊಂಡು, ಪಾದಚಾರಿ ಮಾರ್ಗ ದಲ್ಲಿನ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ರಸ್ತೆ ಮಾರ್ಗದಲ್ಲಿ ಹಾಳಾಗಿರುವ ಸ್ಲ್ಯಾಬ್‌ಗಳನ್ನು ಮರು ಅಳವಡಿಕೆ ಮಾಡಲಾಯಿತು. ತ್ಯಾಜ್ಯ, ಪಾದಚಾರಿ ಮಾರ್ಗದಲ್ಲಿ ಅಡ್ಡಲಾಗಿರುವ ಮರದ ಕೊಂಬೆಗಳನ್ನು ತೆರವುಗೊಳಿಸಲಾಯಿತು. ಹೊಸೂರು ಮುಖ್ಯರಸ್ತೆ ಆನೆಪಾಳ್ಯ ಜಂಕ್ಷನ್‌ನಿಂದ ರೆಸಿಡೆನ್ಸಿ ರಸ್ತೆಯವರೆಗೆ ಎರಡೂ ಬದಿ ಸೇರಿದಂತೆ 4.4 ಕಿ.ಮೀ ರಸ್ತೆಯಲ್ಲಿ ಸ್ವಚ್ಚತಾ ಕಾರ್ಯ ನಡೆಸಲಾಯಿತು. ಸರ್ವಜ್ಞನಗರ ವಿಭಾಗದ ಕಮ್ಮನಹಳ್ಳಿ ಮುಖ್ಯರಸ್ತೆ, ಕಮ್ಮನಹಳ್ಳಿ ಮುಖ್ಯ ರಸ್ತೆ, ಸುಬ್ಬಯ್ಯ ಪಾಳ್ಯದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲಾಗಿದೆ.
ರಾಜಾಜಿನಗರದ ಎರಡನೇ ಹಾಗೂ ಮೂರನೇ ಅಡ್ಡರಸ್ತೆ, ತಿಮ್ಮಯ್ಯ ರಸ್ತೆಯಲ್ಲಿನ ಪಾದಚಾರಿ ಮಾರ್ಗದಲ್ಲಿನ ಅಡೆತಡೆಗಳನ್ನು ತೆರವು ಗೊಳಿಸಲಾಯಿತು. ರಾಜಾಜಿನಗರದ ವಾರ್ಡ್ 106ರ ಕೈಗಾರಿಕೆ ಪ್ರದೇಶ, ವಾರ್ಡ್ 47ರ ನಂದಿನಿ ಲೇಔಟ್, ಮಲ್ಲೇಶ್ವರ ವಿಭಾಗದ ವಾರ್ಡ್ 45 ಹಾಗೂ 65ರ ಪ್ರದೇಶದಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
ವಿಜಯನಗರ ವಿಭಾಗದ ದೀಪಾಂಜಲಿ ನಗರ, ಮಡಿವಾಳ ಮಾರುಕಟ್ಟೆ ರಸ್ತೆ ಪ್ರದೇಶದಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ಕೆಂಪಾಂಬುಧಿ ಕೆರೆ ಹಾಗೂ ಜಯನಗರ 9ನೇ ಬ್ಲಾಕ್ ರಸ್ತೆಯಲ್ಲಿ ಪಾದಚಾರಿ ಮಾರ್ಗದಲ್ಲಿ ತಳ್ಳುವ ಗಾಡಿ, ನಾಮಫಲಕಗಳನ್ನು ತೆರವುಗೊಳಿಸಲಾಯಿತು.
ಥಣಿಸಂದ್ರ ಮುಖ್ಯರಸ್ತೆ, ರಮಣಶ್ರೀ ಕ್ಯಾಲಿಫೋರ್ನಿಯ ರೆಸಾರ್ಟ್‌ನಿಂದ ಅಟ್ಟೂರು, ಅನಂತಪುರ ಮುಖ್ಯರಸ್ತೆ ವರೆಗೆ ಹಾಗೂ ಜಕ್ಕೂರು ಲೇಔಟ್ ಪ್ರದೇಶದಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಕೋಪ್ಟಾ ಕಾಯ್ದೆ ಉಲ್ಲಂಘನೆ, ಪ್ಲಾಸ್ಟಿಕ್ ಮರು ಬಳಕೆ ಕುರಿತಂತೆ ಮಳಿಗೆಗಳನ್ನು ಪರಿಶೀಲನೆ ನಡೆಸಲಾಯಿತು.
ಕೆಂಗೇರಿ ವಿಭಾಗದ ಕೆಂಗೇರಿ ಬಸ್ ನಿಲ್ದಾಣ, ಮೈಸೂರು ರಸ್ತೆಯಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯ ನಡೆಸಿ, ಕೆಂಗೇರಿ ಕೆರೆಯ ಬಳಿಯ ಪಾದಚಾರಿ ಮಾರ್ಗದ ಪಕ್ಕದಲ್ಲಿ ಸಸಿಗಳನ್ನು ನೆಡಲಾಯಿತು.
ಬೇಗೂರಿನ ಮೈಕೋ ಲೇಔಟ್‌ನಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯ ಕೈಗೊಂಡು ರಸ್ತೆ ಬದಿಯಿರುವ ತ್ಯಾಜ್ಯವನ್ನು ತೆರವುಗೊಳಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.