ADVERTISEMENT

ಕೋವಿಡ್‌ ಮಾರ್ಗಸೂಚಿ ಕಡೆಗಣನೆ: 22 ಉದ್ದಿಮೆಗಳನ್ನು ಮುಚ್ಚಿಸಿದ ಬಿಬಿಎಂಪಿ

ಕಠಿಣ ಕ್ರಮಕ್ಕೆ ಮುಂದಾದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 21:45 IST
Last Updated 7 ಏಪ್ರಿಲ್ 2021, 21:45 IST
ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಪಾಲಿಸದ ಕಾರಣಕ್ಕೆ ವಿನಾಯಕನಗರದ ಶಂಕರ್‌ನಾಗ್‌ ವೃತ್ತದ ಹೋಟೆಲ್‌ ಒಂದನ್ನು ಬಿಬಿಎಂಪಿ ಅಧಿಕಾರಿಗಳು ಬುಧವಾರ ಮುಚ್ಚಿಸಿದರು
ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಪಾಲಿಸದ ಕಾರಣಕ್ಕೆ ವಿನಾಯಕನಗರದ ಶಂಕರ್‌ನಾಗ್‌ ವೃತ್ತದ ಹೋಟೆಲ್‌ ಒಂದನ್ನು ಬಿಬಿಎಂಪಿ ಅಧಿಕಾರಿಗಳು ಬುಧವಾರ ಮುಚ್ಚಿಸಿದರು   

ಬೆಂಗಳೂರು: ಕೋವಿಡ್‌ ಹರಡುವುದನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳನ್ನು ಕಡೆಗಣಿಸುತ್ತಿರುವ ಹೋಟೆಲ್‌ಗಳು, ರೆಸ್ಟೊರೆಂಟ್‌ಗಳು, ಮಳಿಗೆಗಳು ಹಾಗೂ ಸೂಪರ್‌ ಮಾರ್ಕೆಟ್‌ಗಳ ಮೇಲಿನ ದಾಳಿಯನ್ನು ಬಿಬಿಎಂಪಿ ಮುಂದುವರಿಸಿದೆ.

ಸಿಬ್ಬಂದಿ ಮಾಸ್ಕ್‌ ಧರಿಸದೇ ಇರುವುದು, ಗ್ರಾಹಕರು ಅಂತರ ಕಾಪಾಡುವುದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪಾಲಿಕೆ ಅಧಿಕಾರಿಗಳು ಬುಧವಾರ ಒಂದೇ ದಿನ 22 ಉದ್ದಿಮೆಗಳನ್ನು ಮುಚ್ಚಿಸಿದ್ದಾರೆ.

ಪಶ್ಚಿಮ ವಲಯದಲ್ಲಿ ಚಾಮರಾಜಪೇಟೆಯ ಮಂಜುನಾಥ ಟಿಫಿನ್‌ ಸೆಂಟರ್‌, ಹೋಟೆಲ್‌ ಶ್ರೀಹರ್ಷ ಹಾಗೂ ರಾಜಾಜಿನಗರದ ಗಣೇಶ ಜ್ಯೂಸ್‌ ಸೆಂಟರ್‌ಗಳನ್ನು ಅಧಿಕಾರಿಗಳು ಮುಚ್ಚಿಸಿದ್ದಾರೆ. ಪಶ್ಚಿಮ ವಲಯದಲ್ಲಿ ಆರು ಉದ್ದಿಮೆಗಳಿಗೆ ಒಟ್ಟು 12,750 ದಂಡ ವಿಧಿಸಲಾಗಿದೆ.

ADVERTISEMENT

ಯಲಹಂಕ ವಲಯದಲ್ಲಿ ಝತಾರ್‌ ಮಲ್ಟಿ ಕುಸೈನ್‌ ರೆಸ್ಟೋರೆಂಟ್‌ಗೆ ಬೀಗಮುದ್ರೆ ಹಾಕಲಾಗಿದೆ. ಮಹದೇವಪುರ ವಲಯದ ಹಗದೂರು ವಾರ್ಡ್‌ನಲ್ಲಿ ಮಿಯಾಮಿ ಸೂಪರ್‌ ಮಾರ್ಕೆಟ್‌, ಮಾರತಹಳ್ಳಿಯ ಪ್ಯಾರಡೈಸ್‌ ರೆಸ್ಟೋರೆಂಟ್‌ ಹಾಗೂ ರಿಲಯನ್ಸ್‌ ಸ್ಮಾರ್ಟ್ ಪಾಯಿಂಟ್‌ ಮಳಿಗೆ, ಹೊರಮಾವು ವಾರ್ಡ್‌ನ ಲಸ್ಸಿ ಶಾಪ್‌ಗಳನ್ನು ಅಧಿಕಾರಿಗಳು ಮುಚ್ಚಿಸಿದರು.

ರಾಜರಾಜೇಶ್ವರಿ ನಗರ ವಲಯದ ನಾಗರಬಾವಿಯ ಉಡುಪಿ ಹೋಟೆಲ್‌, ರಾಜರಾಜೇಶ್ವರಿ ನಗರ ವಾರ್ಡ್‌ನ ಕಾಪಿಕಟ್ಟೆ ಹಾಗೂ ಇಂದ್ರಪ್ರಸ್ಥ ಹೋಟೆಲ್‌ಗಳನ್ನು ಬಂದ್‌ ಮಾಡಿಸಿದರು. ಪೂರ್ವವಲಯದ ಗಂಗೇನಹಳ್ಳಿ ವಾರ್ಡ್‌ನಲ್ಲಿ ಮೂರು ಮಳಿಗೆಗಳಿಗೆ ಅಧಿಕಾರಿಗಳು ಬಾಗಿಲು ಹಾಕಿಸಿದರು.

ದಕ್ಷಿಣ ವಲಯದಲ್ಲಿ ಶಿವಶಕ್ತಿ ಟಿಫಿನ್‌ ಸೆಂಟರ್‌, ಲಕ್ಷ್ಮೀ ಈಟಿಂಗ್‌ ಪಾಯಿಂಟ್‌, ಹೋಟೆಲ್‌ ಕಬ್ಬಾಳ್‌ ಹಾಗೂ ಶ್ರೀಮಾತಾ ಚಿಕನ್‌ ಸೆಂಟರ್‌ಗಳನ್ನು ಮುಚ್ಚಿಸಿದರು. ದಾಸರಹಳ್ಳಿ ವಲಯದ ಟಿ ದಾಸರಹಳ್ಳಿ ವಾರ್ಡ್‌ನಲ್ಲಿ ಎರಡು ಮಳಿಗೆಗಳನ್ನು ಅಧಿಕಾರಿಗಳು ಮುಚ್ಚಿಸಿದರು.

ಬೊಮ್ಮನಹಳ್ಳಿ ವಲಯದ ಸೂಪರ್‌ ಮಾರ್ಕೆಟ್‌ ಒಂದನ್ನು ಹಾಗೂ ಕಲ್ಪತರು ರಿಫ್ರೆಶ್‌ಮೆಂಟ್ಸ್‌ ಅನ್ನು ಅಧಿಕರಿಗಳು ಮುಚ್ಚಿಸಿದ್ದಾರೆ. ಗ್ರಾಹಕರು ಅಂತರ ಕಾಪಾಡಲು ವ್ಯವಸ್ಥೆ ಮಾಡದ್ದಕ್ಕೆ ಎಂಟಿಆರ್‌ ಹೋಟೆಲ್‌ಗೆ ₹ 10 ಸಾವಿರ ದಂಡ ಹಾಕಿದ್ದಾರೆ. ಬೇಗೂರಿನಲ್ಲಿ ಅಪಾರ್ಟ್‌ಮೆಂಟ್ ಸಮುಚ್ಚಯದ ಕ್ಲಬ್‌ ಹೌಸ್‌ನಲ್ಲಿ ಔತಣಕೂಟ ಏರ್ಪಡಿಸಿದ್ದಕ್ಕೆ ₹ 20 ಸಾವಿರ ದಂಡ ವಿಧಿಸಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ, ‘ಸಾರ್ವಜನಿಕರು ಹಾಗೂ ಅಂಗಡಿ ಮಳಿಗೆಗಳ ಮಾಲೀಕರು ಕೊರೊನಾ ಸೋಂಕು ನಿಯಂತ್ರಿಸಲು ಪಾಲಿಕೆ ಅಧಿಕಾರಿಗಳ ಜೊತೆ ಸಹಕರಿಸಬೇಕು. ಸರ್ಕಾರ ರೂಪಿಸಿರುವ ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು’ ಎಂದು ಕೋರಿದರು.

‘ಕೋವಿಡ್‌ ಸೋಂಕು ಹರಡುವಿಕೆಯನ್ನು ತಡೆಯಲು ಅಧಿಕಾರಿಗಳು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ’ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.