ADVERTISEMENT

ಮತ ಯಾಚಿಸಲು ಹೋದರೆ ನೀರು ಕೇಳ್ತಾರೆ

ನಗರದಾದ್ಯಂತ ಕುಡಿಯುವ ನೀರಿನ ಬವಣೆ: ಜಲಮಂಡಳಿ ವಿರುದ್ಧ ಹರಿಹಾಯ್ದ ಪಾಲಿಕೆ ಸದಸ್ಯರು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2019, 19:30 IST
Last Updated 30 ಮಾರ್ಚ್ 2019, 19:30 IST
ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಸಭಾತ್ಯಾಗ ನಡೆಸಿದ ಪ್ರತಿಪಕ್ಷದ ಸದಸ್ಯರು ಸಭಾಂಗಣದಿಂದ ಹೊರಗೆ ನಡೆಯುವ ಧಾವಂತದ ನಡುವೆಯೂ ತಮ್ಮ ವಾರ್ಡ್‌ನ ನೀರಿನ ಸಮಸ್ಯೆ ಬಗ್ಗೆ ಜಲಮಂಡಳಿ ಅಧಿಕಾರಿ ಬಳಿ ಬರೆಯಿಸಿದರು  –ಪ್ರಜಾವಾಣಿ ಚಿತ್ರ
ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಸಭಾತ್ಯಾಗ ನಡೆಸಿದ ಪ್ರತಿಪಕ್ಷದ ಸದಸ್ಯರು ಸಭಾಂಗಣದಿಂದ ಹೊರಗೆ ನಡೆಯುವ ಧಾವಂತದ ನಡುವೆಯೂ ತಮ್ಮ ವಾರ್ಡ್‌ನ ನೀರಿನ ಸಮಸ್ಯೆ ಬಗ್ಗೆ ಜಲಮಂಡಳಿ ಅಧಿಕಾರಿ ಬಳಿ ಬರೆಯಿಸಿದರು  –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಾವು ವೋಟು ಯಾಚಿಸಲು ಹೋದರೆ ಜನ ನೀರು ಕೇಳುತ್ತಿದ್ದಾರೆ. ನೀರಿನ ಬವಣೆ ಹೇಳಿ
ಕೊಂಡು ನಿತ್ಯ ನೂರಾರು ಜನರು ಮೊಬೈಲ್‌ಗೆ ಕರೆ ಮಾಡುತ್ತಿದ್ದಾರೆ. ನಾವೇ ಊರು ಬಿಟ್ಟು ಓಡಿ ಹೋಗಬೇಕಾದ ಸ್ಥಿತಿ ಇದೆ’

ನಗರದ ಜನರನ್ನು ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆಯ ತೀವ್ರತೆಯನ್ನು ಪಾಲಿಕೆ ಸದಸ್ಯರು ಕಟ್ಟಿ
ಕೊಟ್ಟ ಪರಿ ಇದು. ಶನಿವಾರ ನಡೆದ ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಸದಸ್ಯರು ಪಕ್ಷಭೇದ ಮರೆತು ಗೋಳು ಹೇಳಿಕೊಂಡರು. ತುರ್ತು ಪರಿಹಾರಕ್ಕಾಗಿ ಒತ್ತಾಯಿಸಿದರು.

ಪಾಲಿಕೆಯ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ‘ಬಿಬಿಎಂಪಿಗೆ ಹೊಸತಾಗಿ ಸೇರ್ಪಡೆಯಾದ 110 ಹಳ್ಳಿಗಳಲ್ಲಿ ಮಾತ್ರ ಅಲ್ಲ, ಕೇಂದ್ರ ಪ್ರದೇಶದಲ್ಲೂ ಸಮಸ್ಯೆ ತೀವ್ರವಾಗಿದೆ. 2002ರಲ್ಲಿ ಇದೇ ರೀತಿಯ ಅಭಾವ ಎದುರಾಗಿತ್ತು. ಆ ಬಳಿಕ ಇದೇ ಮೊದಲು ನೀರಿಗಾಗಿ ಇಷ್ಟೊಂದು ಹಾಹಾಕಾರ ಎದ್ದಿದೆ’ ಎಂದರು.

ADVERTISEMENT

ಉದ್ಯಾನಕ್ಕೂ ನೀರಿಲ್ಲ: ‘ನಮ್ಮ ವಾರ್ಡ್‌ನಲ್ಲಿ ಉದ್ಯಾನಗಳಿಗೆ ಪೂರೈಸುವುದಕ್ಕೂ ನೀರಿಲ್ಲ. ಗಿಡಗಳು ಒಣಗುತ್ತಿವೆ. ಕೊಳವೆಬಾವಿ ಕೊರೆಯಿಸಿ ನೀರು ಪೂರೈಸುತ್ತಿದ್ದೆವು. ವಿದ್ಯುತ್‌ ಬಿಲ್ ಕಟ್ಟಿಲ್ಲ ಎಂಬ ಕಾರಣಕ್ಕೆ ಬೆಸ್ಕಾಂನವರು ಸಂಪರ್ಕ ಕಡಿತಗೊಳಿಸಿದ್ದಾರೆ’ ಎಂದು ಬಿಜೆಪಿಯ ಡಾ.ರಾಜು ಬೇಸರ ವ್ಯಕ್ತಪಡಿಸಿದರು.

ನೀರಿನ ಕೊರತೆ ಇಲ್ಲ– ಜಲಮಂಡಳಿ: ‘ಈ ಬಾರಿ ನಗರಕ್ಕೆ ಕಾವೇರಿ ನೀರಿನ ಪೂರೈಕೆಯಲ್ಲಿ ಕೊರತೆ ಆಗಿಲ್ಲ. ಹಿಂಗಾರು ಕೈಕೊಟ್ಟಿದ್ದರಿಂದ ಕೊಳವೆಬಾವಿಗಳು ಬತ್ತಿವೆ. ಹಾಗಾಗಿ ಕಾವೇರಿ ನೀರಿನ ಅವಲಂಬನೆ ಹೆಚ್ಚಳವಾಗಿದ್ದರಿಂದ ಸಮಸ್ಯೆ ಕಾಣಿಸಿಕೊಂಡಿದೆ’ ಎಂದು ಜಲಮಂಡಳಿಯ ಹೆಚ್ಚುವರಿ ಮುಖ್ಯ ಎಂಜಿನಿಯರ್‌ ಸುರೇಶ್‌ ತಿಳಿಸಿದರು.

‘ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ ಪ್ರತಿ ವ್ಯಕ್ತಿಗೆ ನಿತ್ಯ ಪೂರೈಸುವ ನೀರಿನ ಸರಾಸರಿ ಪ್ರಮಾಣದಲ್ಲಿ 120 ಮಿ.ಲೀ.ಗಳಷ್ಟು ಹೆಚ್ಚಳಮಾಡಲಾಗಿದೆ. ಕೇಂದ್ರ ಪ್ರದೇಶದಲ್ಲಿ ವಿದ್ಯುತ್‌ ಕೈಕೊಟ್ಟಾಗ ಮಾತ್ರ ನೀರು ಪೂರೈಕೆ ವ್ಯತ್ಯಯವಾಗುತ್ತಿದೆ’ ಎಂದರು.

ನೀರು ನಿಮ್ಮದು– ಡೀಸೆಲ್‌ ಯಾರದು?:

ನಗರಕ್ಕೆ ಹೊಸತಾಗಿ ಸೇರ್ಪಡೆಗೊಂಡಿರುವ 110 ಹಳ್ಳಿಗಳಲ್ಲಿ ನೀರಿನ ತೀವ್ರ ಅಭಾವ ಇರುವುದನ್ನು ಒಪ್ಪಿಕೊಂಡ ಸುರೇಶ್‌, ‘ಈ ಭಾಗಕ್ಕೆ ಉಚಿತವಾಗಿ ನೀರು ಒದಗಿಸಲು ಜಲಮಂಡಳಿ ಸಿದ್ಧವಿದೆ. ಆದರೆ ಟ್ಯಾಂಕರ್‌ಗಳನ್ನು ಪಾಲಿಕೆಯೇ ಒದಗಿಸಬೇಕು’ ಎಂದರು.

‘ನೀವು ಉಚಿತವಾಗಿ ನೀರು ಕೊಡುತ್ತೀರಿ. ಆದರೆ, ಟ್ಯಾಂಕರ್‌ಗೆ ಡೀಸೆಲ್‌ ವ್ಯವಸ್ಥೆ ಮಾಡುವವರು ಯಾರು’ ಎಂದು ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಪ್ರಶ್ನಿಸಿದರು.

ಬಿಬಿಎಂಪಿ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಎಂ.ಆರ್‌.ವೆಂಕಟೇಶ್‌, ‘110 ಹಳ್ಳಿಗಳಿಗೆ ನೀರು ಪೂರೈಸಲು 270 ಟ್ಯಾಂಕರ್‌ಗಳನ್ನು ವ್ಯವಸ್ಥೆ ಮಾಡಿದ್ದೇವೆ. ಜಲಮಂಡಳಿ ನೀರು ಒದಗಿಸಿದರೆ ಜನರಿಗೆ ತಲುಪಿಸಲು ವ್ಯವಸ್ಥೆ ಮಾಡುತ್ತೇವೆ’ ಎಂದರು.

‘ಕೊಳವೆಬಾವಿ ಕೊರೆಸಲು ಹಾಗೂ ಟ್ಯಾಂಕರ್‌ ನೀರು ಪೂರೈಕೆಗೆ ‌ಕೆಟಿಟಿಪಿ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಲು ನಗರಾಭಿವೃದ್ಧಿ ಇಲಾಖೆ ಅನುಮತಿ ನೀಡಿದೆ. ಇದಕ್ಕೆ ಅಲ್ಪಾವಧಿ ಟೆಂಡರ್‌ ಕರೆಯಬಹುದು’ ಎಂದರು.

‘ಮೆಟ್ರೊ ಕಾಮಗಾರಿಯಿಂದ ಸಮಸ್ಯೆ’

‘ಮೆಟ್ರೊ ಕಾಮಗಾರಿ ವೇಳೆ ರಾತ್ರೋ ರಾತ್ರಿ ನೀರಿನ ಪೈಪ್‌ಗಳನ್ನು ಒಡೆಯುತ್ತಿದೆ. ಅದನ್ನು ಸರಿಪಡಿಸಲು ವಾರಗಟ್ಟಲೆ ಸಮಯ ಬೇಕಾಗುತ್ತದೆ. ನೀರಿಲ್ಲದೇ ಜನ ಬವಣೆ ಪಡಬೇಕಾಗಿದೆ’ ಎಂದು ಕಾಂಗ್ರೆಸ್‌ನ ಮಂಜುನಾಥ ರೆಡ್ಡಿ ದೂರಿದರು.

‘ಜಲಮಂಡಳಿ ಈ ಹಿಂದೆ ಸ್ಥಳೀಯ ಜನಪ್ರತಿನಿಧಿಗಳನ್ನು ಒಳಗೊಂಡು ಸಮನ್ವಯ ಸಭೆಗಳನ್ನು ನಡೆಸುತ್ತಿತ್ತು. ಈ ಪರಿಪಾಟವೇ ನಿಂತು ಹೋಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ರಸ್ತೆಗಳಲ್ಲೇಕೆ ನೀರು ಇಂಗಿಸುವುದಿಲ್ಲ’

‘ಮಳೆ ನೀರು ಇಂಗಿಸುವ ವ್ಯವಸ್ಥೆ ಇಲ್ಲದ ಕಟ್ಟಡಕ್ಕೆ ನೀರಿನ ಸಂಪರ್ಕ ಕೊಡುವುದಿಲ್ಲ. ಪಾಲಿಕೆ ವತಿಯಿಂದಲೇ ರಸ್ತೆ ನಿರ್ಮಿಸುವಾಗ ಮಳೆ ನೀರು ಇಂಗಿಸುವ ವ್ಯವಸ್ಥೆಯನ್ನು ಇದುವರೆಗೆ ಏಕೆ ಕಡ್ಡಾಯ ಮಾಡಿಲ್ಲ’ ಎಂದು ದೊಮ್ಮಲೂರು ವಾರ್ಡ್‌ನ ಪಕ್ಷೇತರ ಸದಸ್ಯ ಸಿ.ಆರ್‌.ಲಕ್ಷ್ಮೀನಾರಾಯಣ ಪ್ರಶ್ನಿಸಿದರು. ‘ಮೆಟ್ರೊ ಮಾರ್ಗ ಹಾಗೂ ಬಿಬಿಎಂಪಿಯ ರಸ್ತೆಗಳಲ್ಲಿ ಮಳೆ ನೀರು ಇಂಗಿಸುವುದನ್ನು ಕಡ್ಡಾಯ ಮಾಡಬೇಕು. ಕಾಮಗಾರಿಯ ಒಟ್ಟು ಮೊತ್ತದಲ್ಲಿ ಶೇ 5ರಷ್ಟನ್ನು ಇದಕ್ಕಾಗಿ ಕಾಯ್ದಿರಿಸಬೇಕು’ ಎಂದು ಸಲಹೆ ನೀಡಿದರು.

ವಿರೋಧಪಕ್ಷ ಸಭಾತ್ಯಾಗ

‘ನೀರಿನ ಸಮಸ್ಯೆ ಬಗೆಹರಿಸುವ ಬಗ್ಗೆ ಜಲಮಂಡಳಿ ಅಧಿಕಾರಿ ನೀಡಿದ ವಿವರಣೆ ತೃಪ್ತಿ ತಂದಿಲ್ಲ. ಈ ವಿಚಾರದಲ್ಲಿ ಪಾಲಿಕೆಗೆ ಇಚ್ಛಾ ಶಕ್ತಿ ಇಲ್ಲ’ ಎಂದು ಆರೋಪಿಸಿ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ನಡೆಸಿದರು.

ಹೊರ ನಡೆಯುವ ಧಾವಂತದಲ್ಲೂ ಕೆಲವು ಸದಸ್ಯರು ಜಲಮಂಡಳಿ ಅಧಿಕಾರಿ ಬಳಿ ತಮ್ಮ ವಾರ್ಡ್‌ನ ಸಮಸ್ಯೆ ಬಗ್ಗೆ ಬರೆಯಿಸಿದರು. ಆಗ ಮೇಯರ್‌ ಗಂಗಾಂಬಿಕೆ, ‘ನೀವು ಸಭಾತ್ಯಾಗ ಮಾಡುವುದಾದರೆ ಹೊರಗೆ ನಡೆಯಿರಿ. ಚರ್ಚೆಯಲ್ಲಿ ಭಾಗವಹಿಸುತ್ತೀರಾದರೆ ಆಸನಕ್ಕೆ ಮರಳಿ’ ಎಂದರು. ಸಭಾತ್ಯಾಗದ ಬಳಿಕವೂ ನೀರಿನ ಬವಣೆ ಕುರಿತ ಚರ್ಚೆ ಮುಂದುವರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.