ADVERTISEMENT

ಬೆಂಗಳೂರು ‌| ಮರಗಳ ನಿರ್ವಹಣೆ ಬಿಬಿಎಂಪಿ ಡಿಸಿಎಫ್‌ ವ್ಯಾಪ್ತಿಗೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 1:13 IST
Last Updated 27 ಜೂನ್ 2022, 1:13 IST
   

ಬೆಂಗಳೂರು: ನಗರದಲ್ಲಿನ ಮರಗಳ ರಕ್ಷಣೆ ಮತ್ತು ಹಸಿರೀಕರಣದ ಜವಾಬ್ದಾರಿಯನ್ನುಬಿಬಿಎಂಪಿಯ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ (ಡಿಸಿಎಫ್‌) ಅವರಿಗೆ ವಹಿಸಲಾಗಿದೆ.

ಇದುವರೆಗೆ ರಸ್ತೆ ಬದಿ ಮತ್ತು ಉದ್ಯಾನಗಳಲ್ಲಿನ ಮರಗಳ ನಿರ್ವಹಣೆಯ ಜವಾಬ್ದಾರಿಯನ್ನು ಮಾತ್ರ ಬಿಬಿಎಂಪಿ ಡಿಸಿಎಫ್‌ ಅವರಿಗೆ ನೀಡಲಾಗಿತ್ತು.

ನಗರದಲ್ಲಿನ ಮರಗಳ ನಿರ್ವಹಣೆಯ ಜವಾಬ್ದಾರಿಯನ್ನು ಈಗ ಅರಣ್ಯ ಇಲಾಖೆಯಿಂದ ಪಡೆಯುವ ಬಗ್ಗೆ ಜೂನ್‌ 13ರಂದು ಸರ್ಕಾರ ಆದೇಶ ಹೊರಡಿಸಿದೆ. ತುರಹಳ್ಳಿ ಮತ್ತು ಜಾರಕಬಂಡೆ ಅರಣ್ಯ ಪ್ರದೇಶಗಳ ನಿರ್ವಹಣೆಯ ಜವಾಬ್ದಾರಿಯನ್ನು ಅರಣ್ಯ ಇಲಾಖೆಯೇ ವಹಿಸಿಕೊಳ್ಳಲಿದೆ.

ADVERTISEMENT

‘ತೇಗ, ಶ್ರೀಗಂಧ ಮುಂತಾದ ಮರಗಳು ಹಾಗೂ ವನ್ಯಜೀವಿಗಳಿಗೆ
ಸಂಬಂಧಿಸಿದ ನಿರ್ಧಾರಗಳನ್ನು ಬೆಂಗಳೂರು ನಗರ ಜಿಲ್ಲೆಯ ಅರಣ್ಯ ಇಲಾಖೆಯ ಡಿಸಿಎಫ್‌ ಅವರೇ ಕೈಗೊಳ್ಳಲಿದ್ದಾರೆ. ಲಾಲ್‌ಬಾಗ್‌ ಮತ್ತು ಕಬ್ಬನ್‌ ಪಾರ್ಕ್‌ಗಳನ್ನು ಎಂದಿನಂತೆ ತೋಟಗಾರಿಕೆ ಇಲಾಖೆಯೇ ನಿರ್ವಹಿಸಲಿದೆ. ನಗರದಲ್ಲಿ ಮರಗಳನ್ನು ಕಡಿಯುವ ಸಂಬಂಧದ ವಿಷಯಗಳ ಬಗ್ಗೆ ಬಿಬಿಎಂಪಿ ಡಿಸಿಎಫ್‌ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಆಡಳಿತದಲ್ಲಿ ವಿಕೇಂದ್ರೀಕರಣವನ್ನು ಸ್ವಾಗತಿಸಬೇಕು. ಆದರೆ, ಇಲ್ಲಿ ಹಿತಾಸಕ್ತಿ ಸಂಘರ್ಷವೂ ಇರುವ ಸಾಧ್ಯತೆ ಇದೆ. ಬಿಬಿಎಂಪಿ ಡಿಸಿಎಫ್‌ ಅವರು ಮುಖ್ಯ ಆಯುಕ್ತರಿಗೆ ವರದಿ ಮಾಡಿಕೊಳ್ಳಬೇಕು. ಮುಖ್ಯ ಆಯುಕ್ತರ ಉಸ್ತುವಾರಿಯಲ್ಲೇ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲಾಗುತ್ತದೆ. ಆದ್ದರಿಂದ, ಈ ಬದಲಾವಣೆ ಯಾವ ರೀತಿಯಲ್ಲಿ ಕೈಗೊಳ್ಳಲಾಗುತ್ತದೆ ಎನ್ನುವುದು ಸಹ ಮುಖ್ಯ’ ಎಂದು ಸಾಮಾಜಿಕ ಕಾರ್ಯಕರ್ತ ದತ್ತಾತ್ರೇಯ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.