ADVERTISEMENT

ಬಿಬಿಎಂಪಿ ಚುನಾವಣೆ - ಜನಾಗ್ರಹ ಸಂಸ್ಥೆ ಸಮೀಕ್ಷೆ| ಸಂಚಾರ ಸಮಸ್ಯೆಯೇ ಮೂಲ ವಿಚಾರ

ಬಿಬಿಎಂಪಿ ಚುನಾವಣೆ: ಜನಾಗ್ರಹ ಸಂಸ್ಥೆ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 21:09 IST
Last Updated 22 ಜೂನ್ 2022, 21:09 IST
   

ಬೆಂಗಳೂರು: ಬಿಬಿಎಂಪಿ ಚುನಾವಣೆ ಕೆಲವೇ ತಿಂಗಳಲ್ಲಿ ನಡೆಯಲಿದ್ದು, ‘ಜನಾಗ್ರಹ ಸೆಂಟರ್‌ ಫಾರ್‌ ಸಿಟಿಜನ್‌ಶಿಪ್‌ ಆ್ಯಂಡ್‌ ಡೆಮಾಕ್ರಸಿ ಸಂಸ್ಥೆ‘ನಡೆಸಿದ ಕೇಂದ್ರ ನಗರ ರಾಜಕೀಯ ಸಮೀಕ್ಷಾ ವರದಿ’ಯನ್ನು ಮಂಗಳವಾರ ಬಿಡುಗಡೆಗೊಳಿಸಿದೆ.

ನಗರ ಮತ್ತು ವಾರ್ಡ್‌ಗಳ ಆಡಳಿತದ ಬಗ್ಗೆಮತದಾರರಲ್ಲಿ ಜಾಗೃತಿ ಮೂಡಿಸಲು ಮತ್ತು ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಪ್ರೋತ್ಸಾಹಿಸಲು ‘ಜನಾಗ್ರಹದ ನಗರ ರಾಜಕೀಯ ಸಮೀಕ್ಷೆ’ಯನ್ನು ನಡೆಸಲಾಯಿತು ಎಂದು ಜನಾಗ್ರಹ ಸಹಭಾಗಿತ್ವದ ಮುಖ್ಯಸ್ಥ ಶ್ರೀನಿವಾಸ ಅಲವಿಲ್ಲಿ ಹೇಳಿದರು.

‘2021ರ ಡಿಸೆಂಬರ್‌ 16ರಿಂದ 2022ರ ಜನವರಿ 2ರವರೆಗೆ ನಡೆದ ಸಮೀಕ್ಷೆಯಲ್ಲಿ ಬೆಂಗಳೂರಿನ ಎಂಟು ವಲಯಗಳ 27 ವಾರ್ಡ್‌ಗಳ ವಿವಿಧ ವಯೋಮಿತಿ ಮತ್ತು ಆರ್ಥಿಕ ಹಾಗೂ ಸಾಮಾಜಿಕ ಹಿನ್ಗೆಲೆಗೆ ಸೇರಿದ 503 ಜನ ಭಾಗಿಯಾಗಿದ್ದರು. ಈ ವರ್ಷದ ಬಿಬಿಎಂಪಿ ಚುನಾವಣೆಯಲ್ಲಿ ಶೇ 86ರಷ್ಟು ಜನಪ್ರಥಮ ಬಾರಿಗೆ ಮತ ಚಲಾವಣೆ ಮಾಡಲು ಉತ್ಸುಕರಾಗಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ಉಂಟಾಗುವ ಸಮಸ್ಯೆಗಳ ನಿವಾರಣೆ ಮತ್ತು ಶೇ 88ರಷ್ಟು ಮತದಾರರಿಗೆ ಸುಸಜ್ಜಿತ ಸ್ಥಳೀಯ ಆಡಳಿತ ನೀಡುವಂತಹ ಬಲಿಷ್ಠ ಬಿಬಿಎಂಪಿ ಭವಿಷ್ಯಕ್ಕೆ ಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

ನಗರದಲ್ಲಿರುವ ಸಮೀಕ್ಷೆಯಲ್ಲಿ ಪಾಲ್ಗೊಂಡಶೇ 23ರಷ್ಟು ಜನ ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಗೊಳಿಸಬೇಕು ಎಂದಿದ್ದಾರೆ. ಶೇ 20ರಷ್ಟು ಜನ ಸಮರ್ಪಕ ತ್ಯಾಜ್ಯ ವಿಲೇವಾರಿಗೆ ಆದ್ಯತೆ ನೀಡಬೇಕು ಎಂದು ಹೇಳಿದರೆ, ಶೇ 16ರಷ್ಟು ಮಂದಿ ಸಂಚಾರ ದಟ್ಟಣೆ ಮತ್ತು ಶೇ 15ರಷ್ಟು ಜನ ಕುಡಿಯುವ ನೀರಿನ ತಮ್ಮ ಪ್ರಮುಖ ಸಮಸ್ಯೆಗಳಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ದ್ದಾರೆ. ಮುಂಬರುವ ಬಿಬಿಎಂಪಿ ಚುನಾ
ವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಪ್ರಣಾಳಿಕೆಯಲ್ಲಿ ಈ ಸಮಸ್ಯೆಗಳ ನಿವಾರಣೆಗೆ ಆದ್ಯತೆ ನೀಡಬೇಕು’ ಎಂದು ಅವರು ತಿಳಿಸಿದರು.

‘ಶೇ 82ರಷ್ಟು ಮತದಾರರು ಬಿಬಿಎಂಪಿ ಮತ್ತು ಇತರೆ ಆಡಳಿತ ಸಂಸ್ಥೆಗಳಾದ ಬೆಸ್ಕಾಂ, ಬಿಡಬ್ಲ್ಯುಎಸ್ಎಸ್‌ಬಿ, ಬಿಎಂಟಿಸಿ ಸಹಕಾರದೊಂದಿಗೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಜೊತೆಗೆ ಶೇ 94ರಷ್ಟು ಜನರಿಗೆ 2021–22ರ ಆರ್ಥಿಕ ಸಾಲಿನಲ್ಲಿ ಬಿಬಿಎಂಪಿ ಪ್ರತಿ ವಾರ್ಡ್‌ನ ಅಭಿವೃದ್ಧಿಗೆ ₹60 ಲಕ್ಷ ಹಂಚಿಕೆ ಮಾಡಿರುವ ಬಗ್ಗೆ ತಿಳಿದಿಲ್ಲ’ ಎಂಬುದು ಸಮೀಕ್ಷೆ ವರದಿಯಲ್ಲಿ ತಿಳಿದುಬಂದಿದೆ.

ಸಪ್ನಾ ಕರೀಂ, ತನಿಮಾ ದುಬೆ, ಮಹಾಲಕ್ಷ್ಮಿ ಮತ್ತು ಮಂಜುನಾಥ ಹಂಪಾಪುರ್‌ ಎಲ್. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.