ADVERTISEMENT

ಬಿಬಿಎಂಪಿ: ಆಸ್ತಿ ತೆರಿಗೆ ರಿಯಾಯಿತಿ ಅವಧಿ ಜೂನ್‌ 30ರವರೆಗೆ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 31 ಮೇ 2021, 14:40 IST
Last Updated 31 ಮೇ 2021, 14:40 IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 2021–22ನೇ ಸಾಲಿನ ಪೂರ್ತಿ ಆಸ್ತಿ ತೆರಿಗೆಯನ್ನು ಒಂದೇ ಕಂತಿನಲ್ಲಿ ಪಾವತಿಸುವವರಿಗೆ ನೀಡುವ ಶೇ 5ರಷ್ಟು ರಿಯಾಯಿತಿಯನ್ನು ಜೂನ್‌ 30ರವರೆಗೆ ವಿಸ್ತರಿಸಿನಗರಾಭಿವೃದ್ಧಿ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.

ಸಾಮಾನ್ಯವಾಗಿ ಆರ್ಥಿಕ ವರ್ಷದಲ್ಲಿ ಏಪ್ರಿಲ್‌ ತಿಂಗಳ ಕೊನೆಯ ದಿನದೊಳಗೆ ಆಸ್ತಿ ತೆರಿಗೆ ಪಾವತಿಸಿದವರಿಗೆ ಮಾತ್ರ ಶೇ 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಕೋವಿಡ್‌ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್‌ಡೌನ್‌ ಜಾರಿಗೊಳಿಸಿದ್ದರಿಂದ ಬಿಬಿಎಂಪಿಯು ಆಸ್ತಿ ತೆರಿಗೆಯಲ್ಲಿ ರಿಯಾಯಿತಿ ಪಡೆಯುವ ಅವಧಿಯನ್ನು ಮೇ 31ರವರೆಗೆ ವಿಸ್ತರಿಸಿತ್ತು.

ಲಾಕ್‌ ಡೌನ್‌ ಜಾರಿಯಲ್ಲಿರುವುದರಿಂದ ಬ್ಯಾಂಕ್‌ಗಳಿಗೆ ತೆರಳಿ ಚಲನ್‌ ಪಡೆದು ತೆರಿಗೆ ಪಾವತಿ ಮಾಡುವವರು ಸಮಸ್ಯೆ ಎದುರಿಸಿದ್ದರು. ಹಾಗಾಗಿ ರಿಯಾಯಿತಿಯ ಅವಧಿಯನ್ನು ಮತ್ತೆ ವಿಸ್ತರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದರು. ಈ ಬಗ್ಗೆ ‘ಪ್ರಜಾವಾಣಿ’ ಸೋಮವಾರದ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.