ADVERTISEMENT

ದಂಡರಹಿತವಾಗಿ ಉದ್ದಿಮೆ ಪರವಾನಗಿ ನವೀಕರಣ: ಅವಧಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 4:06 IST
Last Updated 4 ಮಾರ್ಚ್ 2021, 4:06 IST

ಬೆಂಗಳೂರು: ಉದ್ದಿಮೆ ಪರವಾನಗಿಯನ್ನು ದಂಡರಹಿತವಾಗಿ 2021–22ನೇ ಸಾಲಿಗೆ ನವೀಕರಿಸುವ ಅವಧಿಯನ್ನು ಬಿಬಿಎಂಪಿ ವಿಸ್ತರಿಸಿದೆ.

ಉದ್ದಿಮೆ ಪರವಾನಗಿಯನ್ನು ಫೆಬ್ರುವರಿ ತಿಂಗಳವರೆಗೆ ನವೀಕರಿಸುವವರಿಗೆ ಬಿಬಿಎಂಪಿ ಯಾವುದೇ ದಂಡ ವಿಧಿಸುತ್ತಿರಲಿಲ್ಲ. ಮಾರ್ಚ್‌ ತಿಂಗಳಲ್ಲಿ ಪರವಾನಗಿ ನವೀಕರಿಸಿದರೆ ಪರವಾನಗಿ ಶುಲ್ಕದ ಶೇ 25ರಷ್ಟು ದಂಡ ಹಾಗೂ ಏಪ್ರಿಲ್‌ 1ರ ಬಳಿಕ ನವೀಕರಿಸಿದರೆ ಶೇ 100ರಷ್ಟು ದಂಡ ಪಾವತಿಸಬೇಕಿತ್ತು.

‘2021ರ ಮಾರ್ಚ್‌ 31ರವರೆಗೆ ದಂಡನಾ ಶುಲ್ಕ ವಿಲ್ಲದೆಯೇ ಉದ್ದಿಮೆ ಪರವಾನಗಿ ನವೀಕರಿಸಬಹುದು’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ (ಸಾರ್ವಜನಿಕ ಆರೋಗ್ಯ) ಬಿ.ಕೆ.ವಿಜಯೇಂದ್ರ ಅವರು ಬುಧವಾರ ಸುತ್ತೋಲೆ ಹೊರಡಿಸಿದ್ದಾರೆ. ಏ. 1ರ ಬಳಿಕ ಉದ್ದಿಮೆ ಪರವಾನಗಿ ನವೀಕರಿಸುವವರು ಶೇ 100 ದಂಡನಾ ಶುಲ್ಕ ಕಟ್ಟಬೇಕಾಗುತ್ತದೆ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ADVERTISEMENT

ದಂಡ ರಹಿತವಾಗಿ ಉದ್ದಿಮೆ ಪರವಾನಗಿ ನವೀಕರಿಸುವ ಅವಧಿಯನ್ನು ಮಾ .31ರವರೆಗೆ ವಿಸ್ತರಿಸುವಂತೆ ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘವು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.