ADVERTISEMENT

ಕಂಡಲ್ಲಿ ಕಸ ಎಸೆದರೆ ₹500 ದಂಡ

ಪ್ರತಿ ವಾರ್ಡ್‌ಗೆ ಮಾರ್ಷಲ್‌ಗಳ ನೇಮಕ: ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2018, 20:23 IST
Last Updated 2 ನವೆಂಬರ್ 2018, 20:23 IST
   

ಬೆಂಗಳೂರು: ಕಂಡಲ್ಲಿ ಕಸ ಎಸೆಯುವವರಿಗೆ ವಿಧಿಸುವ ₹ 100 ದಂಡವನ್ನು ₹ 500ಕ್ಕೆ ಏರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಹೇಳಿದರು.

ಮಲ್ಲೇಶ್ವರದ ಬಿಬಿಎಂಪಿ ಕಚೇರಿಯಲ್ಲಿ ಕಸ ವಿಲೇವಾರಿ ಸಂಬಂಧಿಸಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ದಂಡದ ಮೊತ್ತ ಏರಿಸಲು ಪ್ರಸ್ತಾವ ಬಂದಿದ್ದು, ಒಪ್ಪಿಗೆ ನೀಡಲಾಗುತ್ತದೆ. ಈ ಬಗ್ಗೆ ನಿಗಾವಹಿಸಿ ದಂಡ ವಿಧಿಸಲು ಮಾರ್ಷಲ್‌ಗಳನ್ನು ನೇಮಿಸಲಾಗುವುದು. ನಿವೃತ್ತ ಸೈನಿಕರನ್ನು ಈ ಕಾರ್ಯಕ್ಕೆ ಬಳಸಲಾಗುವುದು ಎಂದರು.

ADVERTISEMENT

ಕಸ ಸುರಿಯಲು ಈಗಾಗಲೇ ಗುರುತಿಸಿದ್ದ ಜಾಗಗಳು ಭರ್ತಿಯಾಗಿವೆ. ಹೀಗಾಗಿ ಹೊಸ ಜಾಗ ಹುಡುಕಬೇಕಿದೆ. ದೊಡ್ಡಬಳ್ಳಾಪುರದಲ್ಲಿರುವ ಟೆರ್ರಾ ಫರ್ಮಾವನ್ನು ಆಧುನೀಕರಣ ಮಾಡಿ ಪ್ರಾರಂಭಿಸಲಾಗುವುದು. ಇದಲ್ಲದೇ ಬೇರೆ ಕಡೆಯೂ ಸ್ಥಳ ಗುರುತಿಸಬೇಕು. ಸ್ಥಳೀಯರಿಗೆ ತೊಂದರೆಯಾಗದಂತೆ, ವಾಸನೆ ಹರಡದಂತೆ ಸರಿಯಾದ ಕ್ರಮದಲ್ಲಿ ವಿಲೇವಾರಿ ಮಾಡಬೇಕಿದೆ ಎಂದು ಅವರು ತಿಳಿಸಿದರು.

ಕಸ ವಿಲೇವಾರಿ ವ್ಯವಸ್ಥೆ ಈಗ ನಿಯಂತ್ರಣಕ್ಕೆ ಬರುತ್ತಿದೆ. ಹಿಂದೆ ಹಲವು ತಪ್ಪುಗಳೂ ಆಗಿದ್ದವು. ಅವೆಲ್ಲವನ್ನೂ ಸರಿಪಡಿಸಿಕೊಂಡು ಮುಂದುವರಿಯುತ್ತಿದ್ದೇವೆ ಎಂದು ಅವರುಹೇಳಿದರು.

ಕಸದಿಂದ ವಿದ್ಯುತ್ ಉತ್ಪಾದನೆಯ ಯೋಜನೆಯನ್ನು ಬಿಬಿಎಂಪಿಯಿಂದ‌ ಆರು ತಿಂಗಳೊಳಗೆ ಪ್ರಾರಂಭಿಸಲು ಸೂಚಿಸಿದ್ದೇನೆ. ಬಿಡದಿ ಬಳಿ ಬೆಸ್ಕಾಂ ವತಿಯಿಂದ ತೆರೆಯುತ್ತಿರುವ ವಿದ್ಯುತ್ ಉತ್ಪಾದನಾ ಕೇಂದ್ರ ಕೆಲವೇ ದಿನಗಳಲ್ಲಿ ತೆರೆಯಲಿದೆ ಎಂದು ಅವರು
ತಿಳಿಸಿದರು.

ಪ್ರತಿ ವಲಯದಲ್ಲಿ ಕಸ ನಿರ್ವಹಣೆಗೆಂದೇ ಸಹಾಯಕ ಎಂಜಿನಿಯರ್‌ಗಳನ್ನು ನೇಮಕ ಮಾಡಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಹಿರಿಯ ಆರೋಗ್ಯಾಧಿಕಾರಿಗಳನ್ನು ನೇಮಿಸಿ‌ ಇದರ ಜವಾಬ್ದಾರಿ ನೀಡಲಾಗಿದೆ. ಗುತ್ತಿಗೆ ಮೇಲೆ ನೇಮಿಸಿರುವ ಈಗಿರುವ ಆರೋಗ್ಯಾಧಿಕಾರಿಗಳು ಹಾಗೂ ದಫೇದಾರ್‌ಗಳನ್ನು ಮುಂದುವರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.