ಬೆಂಗಳೂರು: ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ದ (ಜಿಬಿಎ) ಕಚೇರಿಯಾಗುತ್ತಿರುವ ಎನ್.ಆರ್. ಚೌಕದಲ್ಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಚೇರಿಯಲ್ಲಿ ಕಾಮಗಾರಿಗಳದ್ದೇ ಸದ್ದು. ಮರು ವಿನ್ಯಾಸ ಚಟುವಟಿಕೆಗಳು ಚುರುಕುಗೊಂಡಿವೆ.
ಮೇಯರ್ ಕಚೇರಿಯನ್ನು ಜಿಬಿಎ ಅಧ್ಯಕ್ಷರಿಗಾಗಿ ಮರುವಿನ್ಯಾಸಗೊಳಿಸುವ ಕಾಮಗಾರಿ ನಡೆಯುತ್ತಿದ್ದು, ಉಪಾಧ್ಯಕ್ಷ ಹಾಗೂ ಮುಖ್ಯ ಆಯುಕ್ತರಿಗೆ ಕಚೇರಿಗಳನ್ನು ಸಜ್ಜುಗೊಳಿಸಲು ಕಾಮಗಾರಿಗಳು ಆರಂಭವಾಗಿವೆ.
‘ಯಾವ ಬಾಬ್ತಿನಲ್ಲಿ ಮರು ವಿನ್ಯಾಸ ಕಾಮಗಾರಿಗಳನ್ನು ನಡೆಸಬೇಕು, ಟೆಂಡರ್ ಕರೆಯಬೇಕೆ, ಬೇಡವೇ?’ ಎಂಬ ಗೊಂದಲಗಳಿದ್ದರೂ ಮರು ವಿನ್ಯಾಸ ಚಟುವಟಿಕೆಗಳು ಹೆಚ್ಚಾಗುತ್ತಲೇ ಇವೆ. ಮುಖ್ಯ ಕಟ್ಟಡದ ಹಿಂಭಾಗ ಹಲವು ವರ್ಷಗಳಿಂದ ದುಃಸ್ಥಿತಿಯಲ್ಲಿದ್ದರೂ ಸ್ವಚ್ಛತೆಯನ್ನೂ ಮಾಡದ ಬಿಬಿಎಂಪಿ ಅಧಿಕಾರಿಗಳು, ಜಿಬಿಎ ಕಚೇರಿ ಎಂದಾಗುತ್ತಿದ್ದಂತೆಯೇ ಬೃಹತ್ ಮಟ್ಟದಲ್ಲಿ ಸ್ವಚ್ಛತೆ ಕಾರ್ಯ ಕೈಗೊಂಡಿದ್ದಾರೆ.
ಪೌರ ಸಭಾಂಗಣ: 198 ಕಾರ್ಪೊರೇಟರ್‌ಗಳ ಸಭಾಂಗಣವಾಗಿದ್ದ ‘ಕೆಂಪೇಗೌಡ ಪೌರ ಸಭಾಂಗಣ’ವನ್ನು 243 ಆಸನಗಳಿಗೆ ಹೆಚ್ಚಿಸಿ ಈ ಹಿಂದೆ ಮರುವಿನ್ಯಾಸಗೊಳಿಸುವ ಕಾರ್ಯ ಆರಂಭಿಸಲಾಗಿತ್ತು. ಅದು ಇನ್ನೂ ಮುಗಿದಿರಲಿಲ್ಲ. ಈಗ ಮತ್ತೆ ವಿನ್ಯಾಸ ಬದಲಿಸಲು ನಿರ್ಧರಿಸಲಾಗಿದೆ.
ಜಿಬಿಎ ಸಭೆಗಳನ್ನು ನಡೆಸಲು ‘ಕೆಂಪೇಗೌಡ ಪೌರ ಸಭಾಂಗಣ’ವನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಅಧ್ಯಕ್ಷ, ಉಪಾಧ್ಯಕ್ಷರಲ್ಲದೆ 72 ಸದಸ್ಯರನ್ನು ಜಿಬಿಎಗೆ ಈಗಾಗಲೇ ನೇಮಿಸಲಾಗಿದೆ. ಸಭೆ ನಡೆಯುವ ಸಂದರ್ಭದಲ್ಲಿ ಇನ್ನೂ ಹಲವರು ಅತಿಥಿಗಳಾಗಿ ಭಾಗವಹಿಸಲಿದ್ದು, ಅಧಿಕಾರಿಗಳೂ ಇರಲಿದ್ದಾರೆ. ಹೀಗಾಗಿ, ದೊಡ್ಡ ಸಭಾಂಗಣ ಅಗತ್ಯವಿದೆ. ಹೀಗಾಗಿ, ‘ಪೌರ ಸಭಾಂಗಣ’ವನ್ನು ಜಿಬಿಎ ಸಭಾಂಗಣವಾಗಿ ಪರಿವರ್ತಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
- ಪ್ರಮುಖ ಇಲಾಖೆಗಳು
ಜಿಬಿಎ ವ್ಯಾಪ್ತಿಗೆ ಬಿಬಿಎಂಪಿಯಲ್ಲಿರುವ ನಗರ ಯೋಜನೆ ಸಾರ್ವಜನಿಕ ಕಾಮಗಾರಿಗಳು ಸಾರ್ವಜನಿಕ ಆರೋಗ್ಯ ತೋಟಗಾರಿಕೆ ಶಿಕ್ಷಣ ಕೆರೆಗಳು ಅರಣ್ಯ ವಿಭಾಗಗಳು ಜಿಬಿಎ ವ್ಯಾಪ್ತಿಗೆ ಬರಲಿವೆ. ಜಿಬಿಎಯಲ್ಲಿ ‘ಹವಾಮಾನ ಕ್ರಿಯಾ ಕೋಶ’ ಸ್ಥಾಪನೆಯಾಗಲಿದೆ. ಹವಾಮಾನ ಕ್ರಿಯಾ ಮತ್ತು ಸ್ಥಿತಿಸ್ಥಾಪಕತ್ವ ಯೋಜನೆ ಸೇರಿದಂತೆ ಅರಣ್ಯ ಕೆರೆ ತೋಟಗಾರಿಕೆ ವಿಭಾಗಗಳು ಇದರಡಿ ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಇವೆಲ್ಲ ವಿಭಾಗಗಳು ಜಿಬಿಎ ಸೇರಿಕೊಳ್ಳಲಿವೆ. ಕಾಮಗಾರಿಗಳಿಗಾಗಿ ರಸ್ತೆ ಮೂಲಸೌಕರ್ಯ ಯೋಜನೆ ವಿಭಾಗಗಳಿವೆ. ಇವುಗಳನ್ನು ರದ್ದು ಮಾಡಿ ನಗರ ಪಾಲಿಕೆಗಳ ಮುಖ್ಯ ಎಂಜಿನಿಯರ್ ವ್ಯಾಪ್ತಿಗೇ ಎಲ್ಲ ಕಾಮಗಾರಿಗಳನ್ನು ವಹಿಸಲು ನಿರ್ಧರಿಸಲಾಗಿದೆ. ಬೃಹತ್ ಕಾಮಗಾರಿಗಳನ್ನು ‘ಬಿ–ಸ್ಮೈಲ್’ ನಿರ್ವಹಿಸುವುದರಿಂದ ಆಯಾ ನಗರ ಪಾಲಿಕೆಗಳ ವ್ಯಾಪ್ತಿಯ ಉಳಿದ ಕಾಮಗಾರಿಗಳಿಗೆ ಮುಖ್ಯ ಎಂಜಿನಿಯರ್ ವ್ಯಾಪ್ತಿಗೆ ತರಲಾಗುತ್ತಿದೆ ಎನ್ನಲಾಗಿದೆ.
ಸಂಘಗಳ ಹೆಸರೂ ಬದಲು ‘
ಬಿಬಿಎಂಪಿ’ಯನ್ನು ಸೇರಿಸಿಕೊಂಡು ಅಧಿಕಾರಿ–ನೌಕರರ ಸಂಘ ಸಹಕಾರಿ ಬ್ಯಾಂಕ್ ಸೇರಿದಂತೆ ಪೌರ ಕಾರ್ಮಿಕರು ಗುತ್ತಿಗೆದಾರರು ಸಂಘಗಳನ್ನು ನೋಂದಣಿ ಮಾಡಿಕೊಂಡಿದ್ದರು. ಈಗ ಅಂತಹ ಎಲ್ಲ ಸಂಘಗಳು ‘ಬಿಬಿಎಂಪಿ’ ಬದಲಿಗೆ ‘ಗ್ರೇಟರ್ ಬೆಂಗಳೂರು’ ಎಂದು ಬದಲಾವಣೆ ಮಾಡಿಕೊಳ್ಳಲು ಸಂಘದ ಪದಾಧಿಕಾರಿಗಳು ನಿರ್ಧರಿಸಿದ್ದಾರೆ. ‘ಬಿಬಿಎಂಪಿ ಅಧಿಕಾರಿ–ನೌಕರರ ಕ್ಷೇಮಾಭಿವೃದ್ಧಿ ಸಂಘ’ವು ‘ಗ್ರೇಟರ್ ಬೆಂಗಳೂರು ಅಧಿಕಾರಿ– ನೌಕರರ ಕ್ಷೇಮಾಭಿವೃದ್ಧಿ ಸಂಘ’ ಎಂದು ಪ್ರಧಾನ ಸಂಘವಾಗಲಿದ್ದು ಜಿಲ್ಲಾ ಸಂಘಟನೆಗಳಂತೆ ಐದು ನಗರ ಪಾಲಕೆಗಳಲ್ಲಿ ಅಲ್ಲಲ್ಲಿ ಪ್ರತ್ಯೇಕ ಸಂಘಗಳು ಅದರಡಿ ರಚನೆ ಮಾಡಲು ಚಿಂತಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಎ. ಅಮೃತ್ ರಾಜ್ ತಿಳಿಸಿದರು. ‘ಬಿಬಿಎಂಪಿ ಗುತ್ತಿಗೆದಾರರ ಸಂಘವು ‘ಗ್ರೇಟರ್ ಬೆಂಗಳೂರು ಗುತ್ತಿಗೆದಾರರ ಸಂಘ’ವಾಗಿ ಪರಿವರ್ತನೆಯಾಗಲಿದ್ದು ಅಗತ್ಯ ಬಿದ್ದರೆ ಐದು ನಗರ ಪಾಲಿಕೆಗಳಲ್ಲೂ ನಮ್ಮ ಸಂಘದಡಿಯಲ್ಲಿ ಪ್ರತ್ಯೇಕ ಸಂಘಗಳನ್ನು ರಚಿಸಲಾಗುತ್ತದೆ’ ಎಂದು ಸಂಘದ ಅಧ್ಯಕ್ಷ ನಂದಕುಮಾರ್ ಮಾಹಿತಿ ನೀಡಿದರು. ‘ಬಿಬಿಎಂಪಿ’ಯನ್ನು ಸೇರಿಸಿಕೊಂಡು ರಚನೆಯಾಗಿರುವ ನೂರಾರು ಸಂಘಗಳಿದ್ದು ಅವುಗಳೆಲ್ಲವೂ ಬದಲಾವಣೆಯಾಗುವ ಅನಿವಾರ್ಯ ಸೃಷ್ಟಿಯಾಗಿದೆ. ‘ಸಂಘಗಳನ್ನು ಮರುಹೆಸರಿಸಿ ನೋಂದಣಿ ಮಾಡಿಸಿಕೊಳ್ಳಲು ಒಂದಷ್ಟು ಹಣವೂ ವ್ಯಯವಾಗಲಿದೆ’ ಎಂದು ಸಂಘಗಳ ಪದಾಧಿಕಾರಿಗಳು ತಿಳಿಸಿದರು.
- ತಡವಾಗಲಿದೆ ಎಲ್ಲರಿಗೂ ‘ಎ’ ಖಾತಾ
ಬಿಬಿಎಂಪಿ ಐದು ನಗರ ಪಾಲಿಕೆಗಳಾಗಿ ವಿಂಗಡಣೆಯಾಗುತ್ತಿರುವುದರಿಂದ ಎಲ್ಲ ನಿವೇಶನಗಳಿಗೂ ‘ಎ’ ಖಾತಾ ನೀಡುವ ಪ್ರಕ್ರಿಯೆ ಆರಂಭ ವಿಳಂಬವಾಗಲಿದೆ. ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ದ ವ್ಯಾಪ್ತಿಯಲ್ಲಿ ಐದು ನಗರ ಪಾಲಿಕೆಗಳು ರಚನೆಯಾಗಲಿದ್ದು ಅವುಗಳಿಗೆ ಅನುಸಾರವಾಗಿ ‘ಖಾತಾ’ಗಳನ್ನು ನೀಡಬೇಕಾಗುತ್ತದೆ. ಹೀಗಾಗಿ ಆಗಸ್ಟ್ 15ಕ್ಕೇ ಆರಂಭವಾಗಬೇಕಿದ್ದ ಈ ಯೋಜನೆ ತಡವಾಗುತ್ತಿದೆ. ಹೊಸ ನಗರ ಪಾಲಿಕೆಗಳ ಹೆಸರಿನಡಿ ಅವುಗಳ ವಾರ್ಡ್‌ಗಳನ್ನೂ ಖಾತೆಯಲ್ಲಿ ನಮೂದಿಸಬೇಕೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.